ಶುಲ್ಕ ಕಟ್ಟದ ಮಕ್ಕಳನ್ನು ದೂರವಿಟ್ಟ ಖಾಸಗಿ ಶಾಲೆಗಳು: ಸಚಿವ ಸುರೇಶ್ ಎಚ್ಚರಿಕೆ

 ಬೆಂಗಳೂರು: ಖಾಸಗಿ ಶಾಲೆಗಳು ಶುಲ್ಕಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಡುವುದು, ಆನ್’ಲೈನ್ ತರಗತಿ ಬಂದ್ ಮಾಡುವುದನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಪದೇ ಪದೇ ಎಚ್ಚರಿಕೆ ನೀಡಿದರೂ ಖಾಸಗಿ ಶಾಲೆಗಳು ಈ ವಿಚಾರದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಶುಲ್ಕಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಕೊರಮಂಗಲದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಶ್ರೀರಂಗಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 1ರಿಂದ 5ನೇ ತರಗತಿ ಆರಂಭಿಸಿ ಪೂರ್ಣ ಶುಲ್ಕಕ್ಕೆ ಒತ್ತಾಯಿಸಿರುವ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ.

ಸಾಮಾಜಿಕ ಸಂಕಷ್ಟದ ಸ್ಥಿತಿಯಲ್ಲಿ ಇಂತಹ ದುರಾದೃಷ್ಟಕರ ಪ್ರಕರಣಗಳು ನಡೆಯುತ್ತಿರುವುದು ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಂದಿಸುವುದಲ್ಲದೆ ದೇಶದ ಭವಿಷ್ಯದ ಹಿತದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.

ಶಾಲಾಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಇಂತಹ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತವೆ. ಹಾಗಾಗಿ ಇಂತಹ ಪ್ರಕರಣಗಳಿಗೆ ಎಡೆಮಾಡಿಕೊಡದಂತೆ ಪದೇ ಪದೇ ಹೇಳಿದ್ದೇನೆ. ಹೈಕೋರ್ಟ್ ಕೂಡ ಈ ಅತಿ ಸೂಕ್ಷ್ಮ ವಿಚಾರವನ್ನು ಬಹಳ ನಾಜೂಕಿನಿಂದ ನಿರ್ವಹಿಸಬೇಕೆದು ಹೇಳಿದೆ. ಆದರೂ ಮರುಕಳಿಸುತ್ತಿವೆ. ಮಕ್ಕಳ ಹಿತ ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿ ಇನ್ನಾದರೂ ಸಂವೇದನೆಯಿಂದ, ಜವಾಬ್ದಾರಿಯಿಂದ ನಡೆಸಬೇಕು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *