ನಮ್ ಬಡವರ ಬಸ್ಸೇ ನನಗಿಷ್ಟ…!

ಮೊದಲೆಲ್ಲ ಕೆಂಪು ಬಸ್ ಅಂತ ಅಂತಿದ್ವಿ….!

ಅವ್ವತ್ತು! ಯಾವದೋ ಒಂದು ದಿನ, ಯಾವುದೋ ಕೆಲಸಕ್ಕೆ ಅಂತ ಬಂದವನು, ಈ ಬೆಂಗ್ಳೂರ್ ಅನ್ನೋ  ಕಾಂಕ್ರೀಟ್ ಕಾಡಿನ ಒಳ ಸುಳಿಯಲ್ಲಿ ಬಂಧಿಯಾದವನು ಇನ್ನೂ ಹೊರಬರಲಿಕ್ಕೆ ಅಗ್ತಾನೆ ಇಲ್ಲ ಸ್ವಾಮಿ! ಇಲ್ಲಿ  ಏನೇ ಆದ್ರೂ ನನ್ನಂತವನಿಗೆ ಈ ಬಡವರ ಬಸ್…?!  ಅದೇ ಸ್ವಾಮಿ ಮೊದಲು ಬಿಟಿಎಸ್, ಈಗ ಬಿಎಂಟಿಸಿ ಅನಿವಾರ್ಯ ಆಗ್ಬಿಟೈತೆ. ಯಾಕ್ ¨ಡವರ್ ಬಸ್ ಅಂದ್ರೆ, ಸರ್ಕಾರ ಬಡವರಿಗೇ ಅಂತನೇ ಸರ್ಕಾರಿ  ಆಸ್ಪತ್ರೆ, ಸರ್ಕಾರಿ ಬಸ್, ಸಾರ್ವಜನಿಕ ಮೂತ್ರಾಲಯ…ಅಂತೆಲ್ಲ ಮಾಡೈತಲ್ಲ!!

  ಇನ್ನಾ  ಆಟೋಗಳ್ನ ನೆಚ್ಕೊಂಡ್ರೆ ನಮ್ ಜೀವನ ಅಷ್ಟೇ ಸ್ವಾಮಿ. ದುಡ್ದ್ ದುಡ್ನೆಲ್ಲ ಅವ್ರಿಗೆ ಕೊಟ್ಟು ಸಂಜೆ ಬಿಟ್ಕೊಳ್ಳಕಾಗ್ದೆ… ತಪ್ಪ್ ತಿಳಿಬೇಡಿ! ಗಂಜಿನ ಬಿಟ್ಕಳ್ಳಕಾಗ್ದೆ ತಣ್ಣೀರ್ ಬಟ್ಟೆ ಹಾಕೋಬೇಕಾತ್ಕದೆ. ಆಟೋದಾಗ ಓಡಾದ್ದೋರಿಗೆ ಚನ್ನಾಗಿ ಗೊತ್ತಿರ್ತದೆ ಸ್ವಾಮಿ(?) ಹತ್ಕ್ಕೊಂಡು ಸ್ವಲ್ಪ ಹೊತ್ತಿನವರೆಗೂ ಸಮ್ನೆ ಇರೋ ಅ ಮೀಟ್ರೂ, ಟಪಕ್ ಟಪಕ್ ಅಂತ ಜಂಪ್ ಆಗ್ತಾ ಹೋಯ್ತದೆ. ಅದೇ ಸ್ವಾಮಿ ಪೆಟ್ರೋಲ್ ಬಂಕ್ನಾ ಮೀಟ್ರು ತರ! ನಾವ್ ಇಳಿಯೋದ್ರೊಳಗೆ  ಅಂದ್ಕಂಡಿದಕ್ಕಿಂತ ಜಾಸ್ತಿ ಕೊಟ್ಟು ತ್ಯಪ್ಪಗೆ ಹೋಗ್ಬೇಕಾಯ್ತದೆ. ಯಾಕಣ್ಣ ಹಿಂಗೆ ಅಂದ್ರೆ ನಾನೇನು  ತಿರುಗಿಸಿದ್ನೆ ಅಂತ ಕೆಂಪು ಕಣ್ಣ್ ಬಿಡ್ತಾನೆ ಆ ಡ್ರೈವರಪ್ಪ?  ಅಲ್ದೆ ಇವ್ರುನಾ,  ಅಲ್ಲಿಗೆ ಬರ್ತೀಯಪ್ಪ ಅಂದ್ರೆ, ಇಷ್ಟು ಕೊಡ್ತೀಯಾ? ಅಂತಾರೆ, ಇಲ್ವೆ… ನಾನ್ ಈ ಕಡೆ ಹೋಗ್ತೀನಿ ಬರಲ್ಲ ಅಂತಾರೆ. ನೀವ್ ಹೇಳ್ರಿ ಸ್ವಾಮಿ ಇವ್ರು ನಂಗೆ ಆಗ್ಬರ್ತಾರಾ?! ಅದುಕೆ ನಾನು ಮೊದಲೇ ಹೇಳಿದ್ದು ಬಡವರ ಬಸ್ಸೇ ಭೇಷ್ ಅಂತಾ!

ನಾವ್ ಮೊದಲೆಲ್ಲ ಕೆಂಪು ಬಸ್ ಅಂತ ಅಂತಿದ್ವಿ. ಈಗ ಅಂಗೆ  ಅನ್ನಾಕಾಗುತ್ತಾ? ಯಾಕೇಳಿ ! ಈಗ ತರವಾರಿ ಬಣ್ಣ್‍ಗಳು ಸ್ವಾಮಿ! ನೀಲಿ, ಹಸ್ರು,ಕಿತ್ತಲೆ.., ಹಿಂಗೆಲ್ಲ ಬಣ್ಣ ಬದ್ಲಾಯಿಸಿಕೊಂಡವೆ. ಸರಿ, ಅದರೊಳಗೆ ಯಂಗೋ ತೂರಿಕೊಂಡ್ವಿ ಅಂದಕಂಡ್ರೆ, ಎಷ್ಟೋ ಬಸ್‍ಗಳು ತೂ..ತೂ ಏನ್ ಕೊಳಕು ಅಂತೀರಾ! ಕರ್ರಗೆ ಎಲ್ಲೋ ಗ್ರೀಸ್ ಮೆತ್ಕೊಂಡಿರುತ್ತದೆ. ಧೂಳ್ ತುಂಬ್ಕೊಂಡಿರೋ ಸೀಟ್ಗಳು! ಏನ್ ಮಾಡೋದ್ ಹೇಳಿ? ನಮಗೇ ಗತಿಯಿಲ್ಲ,  ಅವ್ರಿಗೆ ಮತಿಯಿಲ್ಲ ಅನ್ನಂಗೆ! ಯಾಕ್ ಹೇಳಿ ಸ್ವಾಮಿ ಇದು ಬಡವರ ಬಸ್! ಬಡವರು ಇರೋದೇ ಇಂಗೆ  ತಾನೆ? ನಮ್  ಬದ್ಕನಂಗೆ ನಮ್ ಬಸ್!

ಇವಾಗ ಅದೇನೋ ಸ್ಟ್ರೈಕೋ,  ಪೈಕೋ ಅಂತೇಳಿ ಬಸ್ ನಿಲ್ಸಿದ್ದಾರಲ್ಲ, ನಮ್ ಪಾಡು ಆ ದೇವ್ರೀಗೆ ಗೊತ್ತು ಸ್ವಾಮಿ(!?) ಮೊದಲಾದ್ರೆ  ರಸ್ತೆನಾಗೇ ಬರೋ ಬೈಕ್‍ನವ್ರಿಗೆ ಕೈ ತೋರಿಸಿದ್ರೆ, ನಮ್ ಮೇಲೆ ಕರುಣೆ ತೋರಿ, ನಿಲ್ಸಿ ಕರ್ಕೊಂಡು ಬರ್ತಿದ್ದರು. ಈಗ ಈ ಹಾಳ್ ಎಲ್ಮೆಟ್ ಬಂದು ಅದ್ಕು ಕಲ್ಹಾಕಿಬಿಟೈತೆ. ಪೊಲೀಸಪ್ನ ಕಾಟಕೆ ಅವ್ರು ಯರ್ನಾರು ಕೂಡಿಸಿಕೊಂಡು ಬರಾಕೆ ಹಿಂದ ಮುಂದೆ ನೋಡ್ತಾರೆ. ಅಲ್ಲಪ್ಪ ಈ ಎಲ್ಮೆಟ್ ಅನ್ನೋದು ಇಡೀ ದೇಶಕ್ಕೆ ಜಾರಿಯಾದ್ರೆ ಜಾಗರೂಕತೆ  ಅನ್ಬೌದು!  ನೋಡಿದ್ರೆ ಇದು ಬರೀ ಬೆಂಗ್ಳೂರಿಗೇ ಸೀಮಿತ ಆಗೈತೆ!  ಏನೇ ಆಗ್ಲಿ, ನಮ್ ತಲೆ, ನಮ್ ಜೀವ ಉಳಿಬೇಕಪ್ಪ. ಅದುಕೇ ಈ ಎಲ್ಮೆಟ್ ಕಡ್ಡಾಯ ಆಗ್ಬೇಕು. ಸಾಧ್ಯವಾದ್ರೆ ಇಡೀ ದೇಶಕ್ಕೆ ಆಗಬೇಕು ಅಲ್ವೇ..?!

ಅಯ್ಯೋ ಮಾತು ಎಲ್ಲೆಲ್ಲೋ ಹೋಯ್ತಾ ಇದೆ ಅಂದೋಬೇಡಿ, ನಮ್ ಕತೆ ಹಿಂಗೆಯೇ..?! ನಾನು  ಈ ಬೆಂಗ್ಳೂರು ಕಾಡ್ಗೆ ಬಂದಾಗ, ಬಳ ಜನ ಸೈಕಲ್ ತುಳೊಂಡು ಹೋಯ್ತಾ ಇದ್ದಿದ್ದು, ಬರ್ತಾ ಇದ್ದಿದ್ದು ನನ್ನ್  ಮನಸ್ನಾಗಿ ಹಸ್ರಾಗೈತೆ. ಕಾಲ ಬದ್ಲಾಗೈತೆ, ಅದೇನೋ ಓಲಾ ಅಂತೆ, ಕ್ಯಾಬ್ ಅಂತೆ, ಮೆಟ್ರೋ ಅಂತೆಲ್ಲ ಬಂದ್ಬಿಟೈತಪ್ಪ. ಏನೇ ಬಂದ್ರೂ  ನಮ್ ಬಡವರ ಬಸ್ ಕಡ್ಮೆ ಆಗಿಲ್ಲ ಅನ್ನಿ. ಒಮ್ಮೊಮ್ಮೆ ನಮ್ಮೂರಿನ ಎತ್ತಿ ಗಾಡಿ ನೆನೆಪ ತರ್ತಾವೆ. ನಾನು ಸಣ್ಣವನಿದ್ದಾಗ, ಅಪರೂಪಕ್ಕೆ ಸಿಕ್ಕ ಸೈಕಲ್ನಾ ಹಳ್ಳ-ದಿಣ್ಣೆ ನೋಡ್ದೇ ಹತ್ತಿ ಇಳಿಸಿತ್ತಿದ್ದ ಅಂಗೆ ಎತ್ತಿ ಎತ್ತಿ ಒಗೆತಾವೆ ನಮ್ ಬಡವರ ಬಸ್!  ಎಷ್ಟು ಜನ ತಮ್ ಸೊಂಟ ಮುರ್ಕಂಡವರೋ ಕಾಣೆ.! 

ಅದೇನೋ ಇವ್ರು ಡಿಪಾರ್ಟಮೆಂಟ್ , ಅ ಮಾಸ, ಈ ಮಾಸ ಅಂತೆಲ್ಲ ಮಾಡ್ತಾನೇ ಇರ್ತಾರೆ. ಎಷ್ಟೋ ಜನ ಡ್ರೈವರಪ್ಪೋರಿಗೆ – ಕಂಡಕ್ಟಪ್ಪೋರಿಗೆ ಶಿಸ್ತೂ ಇಲ್ಲ, ನಮ್ ಅಂತವರ ಬಗ್ಗೆ ಕರುಣೇನೂ ಇಲ್ಲ,  ಗೌರವ ಮೊದಲೇ ಇಲ್ಲ.  ರಸ್ತೆ ಪಕ್ಕದಾಗೆ, ಅದೇನಪ್ಪ ಸ್ಮಾರ್ಟ್ ಸಿಟಿ ಅಂತ ರಸ್ತೆ ಅಗ್ದಿರುತ್ತಾರೆ. ನಾವೋ ರಸ್ತೆ ತುದಿನಲ್ಲಿ ನಿಂತಿತ್ರೀವಿ. ಸರಕ್ ಅಂತ ಮೈ ಮೇಲೆ ಬಿಡೋರ್ ತರ ಬಸ್ ತಂದು ನಿಲ್ಲುತ್ಸಾರೆ. ನಾವ್ ಭಯಕ್ಕೆ ಹಳ್ಳದೊಳಗೆ ಬೀಳ್ದೆ ಗತೀನೇ ಇಲ್ಲ. ಅಲ್ಲ ಎಲ್ಲಿ ನಿಲ್ಸಬೇಕು, ಎಲ್ಲಿ ನಿಲ್ಸಬಾರದು ಅನ್ನೋ ಸಾಮಾನ್ಯ ವಿಷಯನೂ ಗೊತ್ತಿಲ್ಲ ಕೆಲವರಿಗೆ! ಸ್ಟಾಪ್ ಎಲ್ಲೋ ಇರುತ್ತೆ, ಇವ್ರು ಇನ್ನೆಲ್ಲೋ ನಿಲ್ತಾರೆ. ಎದ್ನೋ ಬಿದ್ನೋ ಅಂತ ಓಡಿ ಬರದ್ರೊಳಗೆ ರೈಟೋ  ರೈಟು! ಅಂಗು-ಹಿಂಗು ಮಾಡಿ ಬಾಗ್ಲು ಕಂಬಿ ಹಿಡ್ಕಂಡು ಹತಿದ್ವಿ ಅಂದ್ರೆ, ಸಾಯೋಕೆ ನಂ ಬಸ್ ಬೇಕಾಗಿತ್ತಾ ಅಂತ ಬೈಗುಳ!  ಅಲ್ಲಯ್ಯೋ ಹಿಂದೆ ಯಲ್ಡು-ಮೂರು ಬಸ್ ಬರ್ತಾ ಇದಾವೆ. ಅದರಗೆ ಬಂದ್ರೆ ನಿನ್  ಗಂಟೋಯ್ತಾ ಇತ್ತಾ! ಬೈಗುಳ ನಮಗೆ ಅಭ್ಯಾಸವಾಗಿದೆ ಬಿಡಿ!  ಅಲ್ಲ ಅಣ್ಣ, ಇವ್ರೀಗೇನು ಗೊತ್ತೇಳಿ ಮೂಕ್ಕಾಲು ಗಂಟೆಯಿಂದ ಕಾಯ್ತಾ ಇದ್ವೀ ಅಂತ?! ಎಷ್ಟೋ ಸಾರ್ತಿ ಗಂಟೆಗಟ್ಳೆ ಕಾದ್ರೂ ಬಾರದೇ ಇರೋ ಬಸ್‍ಗಳ ಬಗ್ಗೆ ಯಾರಿಗೆ ಹೇಳೋಣ ! ಖಾಲಿ ಇದ್ರೂ ನಿಲ್ಸದೆ ಇರೋ ವ್ಯಥೆನಾ? ಬಡವನ್ ಕೋಪ, ದವಡೆಗೆ ಮೂಲ ತಾನೆ?

ಆಗ್ಲೇ ಹೇಳ್ದಂಗೆ ಬಡವರ ಬಸ್ ಬದ್ಲಾಗೈತೆ! ಅದೇನೋ ಬೋರ್ಡ್ ? ಬೆಳಕಿನ ಅಕ್ಷರಗಳು ಬರ್ತಾನೇ ಇರ್ತಾವೆ !ಮುಂದ್ನ ಸ್ಟಾಪ್ ಇಂತದ್ದು, ಬರೋ ಸ್ಟಾಪ್ ಇದು ಅಂತ. ಒಳ್ಳದೆ ಇದು! ಆದ್ರೆ ಇವಗಿವಾಗ ಬೆಂಗ್ಲೂರ್ ತುಂಬಾ ಅಸ್ಸಾಮಿಗಳು, ಬೆಂಗಾಲಿಗಳು, ಯಾರ್ಯಾರೋ ತುಂಬ್ಕೊಂಡವರ್ರೆ, ಅವ್ರಿಗೆ ಬರಬೇಕಲ್ಲ ನಮ್ ಕನ್ನಡ! ಆ ಬಡ್ಡಿ ಮಕ್ಕಳೋ ನಮ್ಮಂಗಲ್ಲ..? ಅಂದ್ರೆ , ನಮ್ದು ಬಿಟ್ಟು ನಾವು ಬೇರೆಲ್ಲದುನ್ನಾ ಕಲಿತೀವಿ! ಅವರಿಗೆ ಅವರ್ದೆ ಗೊತ್ತಷ್ಟೆ. ನಮ್ ಕಂಡಕ್ಟ್ರಪ್ಪ ಇಳಿಸ್ಬೇಕಾದ್ರೆ ಬಯ್ಯೋದು ಬಿಡಲ್ಲ. ಎಲ್ಲಿ ಇಳೀÀಬೇಕು ಅಂತ ಗೊತ್ತಾಗ್ದೆ ಪಿಳಿಪಿಳಿ ಅಂತ  ಕಣ್ಣ್ ಕಣ್ಣ್ ಬಿಡ್ತಾವೆ! ಬಸ್‍ನಾಗಿರೋ ಕೆÀಲವ್ರು ಮುಸಿಮುಸಿ ನಗ್ತಾರೆ!  ಅಲ್ಲ ತಪ್ಪು ಯಾರ್ದು ಸ್ವಾಮಿ? ಕೆಲವು  ಪುಣ್ಯಾತ್ಮರು ಕಂಡಕ್ಟರು, ಡ್ರೈವರ್Àಪ್ಪುಗೊಳಿದ್ದಾರೆ (?!) ಇವ್ರು ಕುಂತಿರೋ ಕಡೆ ಬಂದು, ಗೊತ್ತಿರೋ ಅಲ್ಪಸ್ವಲ್ಪ ಭಾಷೆನಾಗೆ ಹೇಳಿ ಇಳಿಸಿ ಹೋಗ್ತಾರೆ. ಅದುಕ್ಕೇ ಕಣಪ್ಪ ನಮ್ ಬಡವರ ಬಸ್ ಮೆಚ್ಚಿಗೆಯಾಗೋದು! ಅದು ಇಂತವರಿಂದ! ಈ ಉತ್ತರದ ಕಡೆ ಜನರಿಗೆ ಸರಿಯಾಗೆ ಕೂತುಕೊಳ್ಳೋದು ಬರೋಲ್ಲ. ಮುಂದಿನ ಸೀಟ್ ಖಾಲಿಇದ್ರೆ ಅದರ ಮೇಲೆ ಚಪ್ಲಿ ಕಾಲ್ ಹಾಕಿ ಕೂತ್ಕೋತಾರೆ. ಬಾಯಿ ಅದೇನೋ ಹಾಕ್ಕೊಂಡು, ಪಿಸಕ್ ಪಿಸಕ್ ಂತ ಸಿಕ್ಕಿದ್ ಕಡೆ ಉಗೀತಾರೆ. ಇದುನ್ನೆಲ್ಲ ನಮ್ ಬಡವರ ಬಸ್ ಸಹಿಕೊಂಡಿದೆಲ್ಲ, ಗ್ರೇಟು ತಾನೆ! 

ನಮ್ ಜನಾನು ಅಂಗೇ ಇದಾರಪ್ಪೋ?  ಬಿದ್ರು ಕಲಿಯಂಗಿಲ್ಲ ಅಂತೀನಿ!? ಬಸ್  ಹತ್ವಾಗ ಅದೇನೋ ಈಗ ಬಂದೈತಲ್ಲ ಮೊಬೈಲ್ಲು ! ಅದನ್ನಿಡುಕೊಂಡು ಏನೇನೂ ಮಾತಾಡ ಸರಿಯಾಗಿ ಕಂಬಿ ಹಿಡಕಳ್ದೆ ಹತ್ತೋದು, ಜಾರಿ ಬೀಳೋದು! ಡೋರ್‍ನಾಗೇ ಬಾವುಲಿ ತರ ನೇತು ಬೀಳೋದು! ಒಳಗೋಗರಿಗೂ ಬಿಡಲ್ಲ, ತಾವೂ ಹೋಗಲ್ಲ! ಒಟ್ನಾಗೇ ಪಿಕ್ ಪಾಕೇಟ್ ಖದೀಮ್ರಿಗೆ  ಇವ್ರಿಂದ ಒಳ್ಳೆ ಹಬ್ಬ ! ಇಂತವರಿಂದ ನಮ್ ಜೋಬಿಗೂ ಕತ್ರಿ! ಸಂಜೆ ಮನೆ ದೀಪ ಹಚ್ಚಿ, ಒಂದ್ಚೂರು ಗಂಜಿ ಕುಡ್ದ್, ಮಲ್ಗೊ ಈ ಜೀವಕ್ಕೆ ಏನೆಲ್ಲ ಕಷ್ಟ ?

ಈ ಬಡವರ ಬಸ್ ನಂಬ್ಕೊಂಡು ಲಕ್ಷಾಂತರ ಜನರಿದ್ದಾರೆ. ಆದ್ರೆ,  ಈ ಸ್ಟ್ರೈಕ್ ಆ ಸ್ಟ್ರೈಕ್ ಅಂತ ಇವ್ರು ಮಾಡೋದು ಸರಿನಾ? ಮಾಡ್ಲಿ ಸ್ವಾಮಿ, ಇದು ನಮ್ ದೇಶದ ಸಂವಿಧಾನ ಕೊಟ್ಟಿರೋ ಹಕ್ಕು!  ಎಮ್ಮೆ ಚರ್ಮದವರಿಗೆ ಬರೆ ಹಾಕೋಕೆ ಹೋಗಿ, ನಮ್ ಜೀವನ ಹದಗೆಡಿಸಬಾರದಲ್ಲಾ! ನಿಮ್ಮಂತರು ಸಾವಿರಾರು ಜನನಾ ನಾವು  ನಂಬಿಕೊಂಡಿದ್ದೀವಿ. ನಮ್ಮಂತ  ಲಕ್ಷಾಂತರ ಜನ ಬದುಕು ಕಟ್ಕೊಂಡಿದ್ದೀವಲ್ಲ ನಮ್ ಗತಿ ಏನೂ?  ನಮ್ ಬದುಕು ಬೀದಿಗೆ ಬರದೋ ಎಷ್ಟು ನ್ಯಾಯ ಹೇಳ್ರಪ್ಪ!! 

  ಏನೇ ಆಗ್ಲಿ ನಮ್ ಬಡವರ ಬಸ್ಸೇ ನನಗಿಷ್ಟ!

  ಯಾಕಂದ್ರೆ ನನ್ನಂತವರ ಕರ್ಮದ ಜಾಗಕ್ಕೆ ಮುಟ್ಟಿಸೋ ಬಂಡಿನಪ್ಪ ಇದು!!

-ಶ್ರೀಚನ್ನ

Leave a Reply

Your email address will not be published. Required fields are marked *