ಖಾಸಗಿ ಅನುದಾನ ರಹಿತ ಶಾಲೆ – ಕಾಲೇಜುಗಳಲ್ಲಿನ ಶಿಕ್ಷಕರು , ಶಿಕ್ಷಕೇತರ ಸಿಬ್ಬಂದಿಗೆ ಪ್ಯಾಕೇಜ್ ಬಿಡುಗಡೆಗೆ ಒತ್ತಾಯ

ಜಾಗತಿಕ ಮಹಾಮಾರಿ ಕೋವಿಡ್‍ನಿಂದ ನಾಡಿನ ಜನತೆ ತಲ್ಲಣಗೊಂಡಿದ್ದು ದಿನನಿತ್ಯ ಹಲವಾರು ಜನರು ಅಸುನೀಗುತ್ತಿರುವ ಸನ್ನಿವೇಶ ಎಲ್ಲರನ್ನು ದಿಗ್ಭ್ರಾಂತರನ್ನಾಗಿಸಿದೆ. ನಿತ್ಯವೂ ಕೋರೊನಾ ಹರಡುವಿಕೆಯ ಭಯ ಎಲ್ಲೆಡೆ ವ್ಯಾಪಿಸಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರೂ ರೋಗದ ಹರಡುವಿಕೆಯು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನಕ್ಕೊಂದು ಹೊಸ ಕಾಯಿಲೆಗಳು, ದಿನಕ್ಕೊಂದು ಹೊಸ ಸಮಸ್ಯೆಗಳು ಬಂದೊದಗಿ ಅದನ್ನು ಹತೋಟಿಗೆ ತರಲು ಎಷ್ಟೊಂದು ಪ್ರಯತ್ನಪಡುತ್ತಿದ್ದರೂ ಇಂತಹ ಸವಾಲುಗಳನ್ನು ಎದುರಿಸಲು ಸರಕಾರ ಪ್ರತಿದಿನ ಯೋಚನೆ ಮಾಡುವಂತಾಗಿದೆ.

ದಿನಾಂಕ: 18-05-2021 ರಂದು ನೀವು ರೂ. 1250/= ಕೋಟಿ ಪ್ಯಾಕೇಜ್ ಬಿಡುಗಡೆಗೊಳಿಸಿರುವುದು ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಮಾಧಾನ ತಂದಿದ್ದು ಅದನ್ನು ನಾನೂ ಸ್ವಾಗತಿಸುತ್ತೇನೆ. ಸಣ್ಣ ವ್ಯಾಪಾರಸ್ಥರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು  ಮೊದಲಾದವರಿಗೆ ಈ ಪ್ಯಾಕೇಜ್ ಆಶಾಕಿರಣವಾಗಿದೆ. ಆದರೆ ಸಮಾಜದಲ್ಲಿ ಪವಿತ್ರ ವೃತ್ತಿ ಎಂದು ಪರಿಗಣಿಸಲ್ಪಡುವ ಮತ್ತು ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡುತ್ತಾ  ಸಮಾಜದ ಪ್ರೀತಿ ಪಾತ್ರರಾಗಿರುವ ಶಿಕ್ಷಕ ಸಮುದಾಯಕ್ಕೆ ಅಂದರೆ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳಲ್ಲಿನ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಮಾತ್ರ ತಾವು ಘೋಷಿಸಿರುವ ಪ್ಯಾಕೇಜ್‍ನಲ್ಲಿ ಯಾವುದೇ ಅನುಕಂಪ, ಸಹಾನುಭೂತಿ ಕಾಣದಿರುವುದನ್ನು ನಾನು ತುಂಬಾ ನೋವಿನಿಂದ ಪ್ರಸ್ತಾಪಿಸುತ್ತಾ ಈ ಕುರಿತು ಆಗ್ರಹಪೂರ್ವಕವಾಗಿ ತಮಗೆ ಈ ಪತ್ರ ಬರೆಯುವ ಪ್ರಸಂಗ ಬಂದೊದಗಿದೆ. 

ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯವರು ಸಹ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವುದು ನಮ್ಮೆಲ್ಲರ ಗಮನದಲ್ಲಿದೆ. ಈ ಕುರಿತು ಈ ಹಿಂದೆ ಹಲವು ಸಂದರ್ಭಗಳಲ್ಲಿ ನಾನು ಮೌಖಿಕವಾಗಿ ಹಾಗೂ ಕೆಲವು ಸಲ ಪತ್ರದ ಮೂಲಕ ತಮಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಕೊರೊನಾ ಕಾರಣದಿಂದ ಎಲ್ಲ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಇವರುಗಳು ವೇತನವಿಲ್ಲದೆ ಅಭದ್ರತೆಯಲ್ಲಿ ನರಳುತ್ತಿದ್ದಾರೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಬಹುತೇಕ ಶಿಕ್ಷಕರಿಗೆ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಸಂಬಳವಿಲ್ಲ. ಇದರಿಂದಾಗಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಕ್ಕೂ ಹೆಚ್ಚು ಶಿಕ್ಷಕರು ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಿಸುತ್ತಾ ತೀವ್ರ ಸಂಕಷ್ಟದಲ್ಲಿದ್ದಾರೆ. ಈಗ ಲಾಕ್‍ಡೌನ್‍ನಿಂದ ಶಾಲೆಗಳು ಮುಚ್ಚಿದ್ದು ಮತ್ತೇ ಆ ಶಿಕ್ಷಕರು ಉದ್ಯೋಗವಿಲ್ಲದೇ ಹಾಗೂ ಜೀವನ ನಿರ್ವಹಣೆಗೆ ಸಂಬಳವಿಲ್ಲದೇ ದಿನನಿತ್ಯ ಉಪಜೀವನಕ್ಕೆ ತೊಂದರೆಯಾಗಿದೆ. 

ಇದರಿಂದಾಗಿ ಹಲವು ಶಿಕ್ಷಕರು ಹೊಟ್ಟೆ ಹೊರೆಯಲು ತರಕಾರಿ, ಕಾಳು, ಹಣ್ಣು ಹಂಪಲ ಮಾರಾಟ ಮಾಡುವ ಅನಿವಾರ್ಯತೆಯಲ್ಲಿದ್ದರೆ ಇನ್ನೂ ಕೆಲವರು ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಗಳಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡುತ್ತಿದ್ದಾರೆ.  ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ಬಂದಿದ್ದು ಇಡೀ ನಾಗರಿಕ ಸಮಾಜ ತಲೆಕೆಳಗೆ ಹಾಕುವ ಪರಿಸ್ಥಿತಿ ಮುಂದುವರೆದರೆ ಅವರಲ್ಲಿ ಎಷ್ಟೋ ಜನ ಆತ್ಮಹತ್ಯೆಗೆ ಶರಣಾಗುವ ಹಂತ ತಲುಪುತ್ತಾರೆ ಎಂಬ ಭಯ ನನ್ನನ್ನಾವರಿಸಿದ್ದು ಈಗಾಗಲೇ ಹಲವಾರು ಬಾರಿ ಈ ಕುರಿತು ಸರಕಾರದ ಗಮನಕ್ಕೆ ತಂದಿರುತ್ತೇನೆ.

ಭವಿಷ್ಯದ ಭಾರತದ ನಿರ್ಮಾತೃರಾಗಿರುವ ಶಿಕ್ಷಕರು ಸರಕಾರಿ, ಅನುದಾನಿತ ಅಥವಾ ಅನುದಾನ ರಹಿತ ಯಾರೇ ಆಗಿರಲಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವದು ಎಲ್ಲಾ ಸರಕಾರಗಳ ಆದ್ಯ ಕರ್ತವ್ಯವಾಗಿದೆ. ಆದರೆ ಇವರ ಬಗ್ಗೆ ಸರಕಾರ ಅಸಡ್ಡೆ ತೋರುತ್ತಿರುವುದು ತುಂಬಾ ವಿಷಾದನೀಯ ಸಂಗತಿ ಎಂದು ನಾನು ತೀವ್ರ ನೋವಿನಿಂದ ಹೇಳುತ್ತೇನೆ.

ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಯಾವುದೇ ಸೌಲಭ್ಯಗಳಿಲ್ಲದೇ ನೌಕರರು ಅತಂತ್ರ ಸ್ಥಿತಿಯಲ್ಲಿದ್ದು, ಸಾಲ-ಸೂಲ ಮಾಡಿ ಜೀವನ ನಡೆಸಬೇಕೆಂದರೆ ಯಾರೂ ಸಾಲ ನೀಡುತ್ತಿಲ್ಲವಾದ್ದರಿಂದ ಇವರ ಜೀವನವು ನರಕ ಯಾತನೆಯಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಸರಕಾರವು ಎಲ್ಲಾ ಹಂತದವರಿಗೂ ಪ್ಯಾಕೇಜ್ ನೀಡುತ್ತಿರುವದು ಸರಿ. ಆದರೆ ಶಿಕ್ಷಕರನ್ನೂ ಈ ವ್ಯಾಪ್ತಿಯಲ್ಲಿ ಸೇರಿಸದೇ ಇರುವುದು ಅವರಿಗೆ ಸರಕಾರ ಅನ್ಯಾಯವೆಸಗಿದಂತಾಗುತ್ತದೆ. ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವರೂ ಸಹ ಈ ಬಗ್ಗೆ ಗಮನ ಹರಿಸಬೇಕೆನ್ನುವುದು ನನ್ನ ಆಗ್ರಹಪೂರ್ವಕ ಒತ್ತಾಯವಾಗಿದೆ.

ಕೋವಿಡ್‍ನ ಭೀಕರತೆಯ ಇಂತಹ ಸಮಯದಲ್ಲಾದರೂ ಸರಕಾರ ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಒಂದು ಪ್ಯಾಕೇಜ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಈ ಬಗ್ಗೆ ಶಿಕ್ಷಣ ಸಚಿವರು ಆಸಕ್ತಿ ವಹಿಸದೇ ಇರುವದು ಅತ್ಯಂತ ಖೇದಕರ ಸಂಗತಿ. 

ಸರಕಾರ ಇಂತಹ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ವಿದ್ಯುತ್ ಚಾಲಿತ ಮಗ್ಗಗಳ ಕಾರ್ಮಿಕರು ಮೊದಲಾದವರಿಗೆ ಆರ್ಥಿಕ ನೆರವು ನೀಡಲಾಗಿದೆ. ಆದರೆ ಖಾಸಗಿ ಅನುದಾನರಹಿತ ಶಾಲೆ ಮತ್ತು ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರಿಗೂ ಮತ್ತು ಕಾರ್ಮಿಕರಿಗೂ ಯಾವದೇ ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಇವರ ಸಂಕಷ್ಟಗಳಿಗೂ ಸರಕಾರ ಸ್ಪಂದಿಸಬೇಕು. ಕಾರ್ಮಿಕ ವರ್ಗಕ್ಕೆ ಬಿಡುಗಡೆ ಮಾಡಿದಂತೆಯೇ ಇವರಿಗೂ ಸಹ ಒಂದು ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ನಾನು ಆಗ್ರಹಿಸುತ್ತೇನೆ.

ಕೊರೊನಾ ಭೀತಿಯಿಂದ ಮಕ್ಕಳು ಶಾಲೆಗೆ ಬರದಿದ್ದರೆ ಪಾಲಕರು ಶುಲ್ಕ ಕೊಡುವುದಿಲ್ಲ. ಆನ್‍ಲೈನ್ ಪಾಠ ಸರಕಾರ ಪ್ರಾರಂಭಿಸಿದೆ. ಪಾಲಕರಿಗೆ ಫೀ ಕೊಡುವಂತೆ ಒತ್ತಾಯ ಮಾಡಬಾರದೆಂದು ಹೇಳಿರುವುದರಿಂದ ಆರ್ಥಿಕವಾಗಿ ಸಾಕಷ್ಟು ಸಮರ್ಥರಿದ್ದವರನ್ನೂ ಸಹ ಶಿಕ್ಷಣ ಸಂಸ್ಥೆಗಳು ಶುಲ್ಕ ಕೊಡುವಂತೆ ಒತ್ತಾಯಿಸುವಂತಿಲ್ಲ. ಒತ್ತಾಯಿಸಿದರೆ ದೂರು ಕೊಡುತ್ತಾರೆಂಬುದು ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಹವಾಲು. ಒಂದು ತಿಂಗಳು ಅಥವಾ ಹೆಚ್ಚೆಂದರೆ ಎರಡು ತಿಂಗಳ ಸಂಬಳವನ್ನು ಆಡಳಿತ ಮಂಡಳಿಯವರು ಸಿಬ್ಬಂದಿಯವರಿಗೆ ಕೊಡಬಹುದು. ಅದರೂ ಸಹ ಕೆಲವು ಸಾಮಾನ್ಯ ಶಾಲೆಗಳಿಗೆ ಇದು ಕಷ್ಟದ ಕೆಲಸ. ಕೆಲವು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಹಿಂದೇಟು ಹಾಕುತ್ತಿವೆ. 

ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳಿಗೆ ಸಾಕಷ್ಟು ತೊಂದರೆಯಾಗಿ ಉಸಿರುಗಟ್ಟುವ ವಾತಾವರಣವಿದ್ದು ಸರಕಾರ ಇವರಿಗೂ ಒಂದು ಪ್ಯಾಕೇಜ್ ನೀಡಿ ಅವರ ನೆರವಿಗೆ ಧಾವಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಸರಕಾರಕ್ಕೆ ಯಾವುದೂ ಕಷ್ಟವಲ್ಲ. ಸರಕಾರ ಬಾಕಿ ಉಳಿಸಿಕೊಂಡಿರುವ ಆರ್.ಟಿ.ಇ. ಶುಲ್ಕವನ್ನೂ ಪಾವತಿಸುತ್ತಿಲ್ಲ. ಬಾಕಿ ಪಾವತಿಗೆ 700 ಕೋಟಿ ರೂಪಾಯಿ ಕಾಯ್ದಿರಿಸಲಾಗಿದ್ದರೂ ರಾಜ್ಯದ ವಿವಿಧ ಶಾಲೆಗಳಿಗೆ ಪಾವತಿಸಬೇಕಾದ 600 ಕೋಟಿ ರೂ. ನೀಡುತ್ತಿಲ್ಲ.

ಆದ್ದರಿಂದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಪ್ರಮಾಣದಲ್ಲಿ ಸರಕಾರ ಆರ್ಥಿಕ ನೆರವು ನೀಡಲೇಬೇಕಾಗುತ್ತದೆ. ಆದ ಕಾರಣ ಖಾಸಗಿ ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರಿಗೆ ತಕ್ಷಣವೇ ವಿಶೇಷ ಪ್ಯಾಕೇಜ್ ರೂಪದ ಮಾಸಿಕ ಸಹಾಯಧನ ಬಿಡುಗಡೆ ಮಾಡಬೇಕೆಂದು ಅವರೆಲ್ಲರ ಪರವಾಗಿ ನಾನು ತಮ್ಮನ್ನು ಕೋರುತ್ತೇನೆ.   

-ಬಸವರಾಜ ಹೊರಟ್ಟಿ

Leave a Reply

Your email address will not be published. Required fields are marked *