ವಾರ್ತಾ ಇಲಾಖೆಯ ಹಿರಿಯ ವಾಹನ ಚಾಲಕರಿಗೆ ಬೀಳ್ಕೊಡುಗೆ

ಬೆಂಗಳೂರು,  ಜೂನ್ 30  (ಕರ್ನಾಟಕ ವಾರ್ತೆ): ಸರ್ಕಾರದ ಇಲಾಖೆಗಳಲ್ಲಿ ನೌಕರರು ಅತ್ಯಂತ ಮುಖ್ಯವಾಗಿದ್ದು, ನಮ್ಮಂತಹ ಹಿರಿಯ ಅಧಿಕಾರಿಗಳು ಸಂಸಾರಕ್ಕಿಂತ ಹೆಚ್ಚಿನದಾಗಿ ನಮ್ಮ ಚಾಲಕರು ಹಾಗೂ ಸಹಾಯಕರ ಜೊತೆಯಲ್ಲಿಯೇ ಅತಿ ಹೆಚ್ಚು ಸಮಯವನ್ನು ಕಳೆದಿರುತ್ತೇವೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ವಾರ್ತಾಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ವಯೋನಿವೃತ್ತಿ ಹೊಂದಿದ ಹಿರಿಯ ವಾಹನ ಚಾಲಕ ಡಿ.ಶ್ರೀರಾಮ್ ಅವರನ್ನು ಸನ್ಮಾನಿಸಿ ಮಾತನಾಡಿದ ಆಯುಕ್ತರು ವಾಹನ ಚಾಲಕರು ಸರ್ಕಾರಿ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕುಟುಂಬದಂತೆ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು.
ಜಂಟಿ ನಿರ್ದೇಶಕರಾದ ಡಿ.ಪಿ.ಮುರಳೀಧರ್ ಅವರು ಮಾತನಾಡಿ ಶ್ರೀರಾಮ್ ಕಳೆದ ಮೂರು ದಶಕಗಳಿಂದ ಇಲಾಖೆಯಿಂದ ಸೇವೆ ಸಲ್ಲಿಸಿದ್ದು, ತಮ್ಮ 30 ವರ್ಷಗಳ ಸೇವೆಯಲ್ಲಿ ಯಾವುದೇ ದೂರುಗಳಿಲ್ಲದೆ ಸೇವೆ ಸಲ್ಲಿಸಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಉಪ ನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ ಅವರು ಮಾತನಾಡಿ ಸರ್ಕಾರಿ ಸೇವೆಯನ್ನು ದೇವರ ಸೇವೆಯಂತೆ ನಿರ್ವಹಿಸಿರುವ ಶ್ರೀರಾಮ್ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *