ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘಕ್ಕೆ ಜಾಗ ಮಂಜೂರು ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲರ ಸಹಕಾರದ ಜೊತೆಗೆ ಹುಬ್ಬಳ್ಳಿ ಹಲವಾರು ಸ್ನೇಹಿತರ ಸಹಾಯದಿಂದ ಸಂಘಟನೆಯ ಹೋರಾಟದಿಂದ ಕೋಟ್ಯಾಂತರ ಬೆಲೆ ಬಾಳುವ 20 ಗುಂಟೆ ಜಾಗ ಉಣಕಲ್ ಕ್ರಾಸಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘಕ್ಕೆ ದೊರೆತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಹುಬ್ಬಳ್ಳಿಯ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಬಸವರಾಜ ಹೊರಟ್ಟಿಯವರ ಹಿತೈಷಿ ಬಳಗದ ವತಿಯಿಂದ ವಿಧಾನಪರಿಷತ್ ಸದಸ್ಯರಾಗಿ 41 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಭಾಪತಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ 1976 ರಿಂದ ಶಿಕ್ಷಕರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಭರವಸೆ ಹಾಗೂ ನಂಬುಗೆಯ ಸಂಘಟನೆಯಾಗಿ ಹುಟ್ಟಿಕೊಂಡಿದೆ. ಅಂದಿನಿಂದ ಇಂದಿನವರೆಗೆ 45 ವರ್ಷಗಳಿಂದ ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟ ಮಾಡುತ್ತಾ ಬಂದಿದೆ. ಇಂದು ಶಿಕ್ಷಕರು ಏನಾದರೂ ನೆಮ್ಮದಿಯಿಂದ ಇದ್ದರೆ ಅದಕ್ಕೆ ಕಾರಣ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಹೋರಾಟವೇ ಕಾರಣ ಎಂದು ಹೇಳಿದರು.

ಈ ಜಾಗ ಪಡೆಯಲು 1996ರಿಂದ ನಿರಂತರ ಕಾನೂನಾತ್ಮಕ ಹೋರಾಟ ಮಾಡಲಾಗಿದೆ. ಸುಪ್ರೀಂಕೋರ್ಟ್‍ವರೆಗೆ ಈ ವ್ಯಾಜ್ಯ ಹೋಗಿ ಅಲ್ಲಿ ನಮ್ಮ ಪರವಾಗಿ ಶಿಕ್ಷಕರ ಹಿತಕ್ಕಾಗಿ ಈ ಜಾಗ ಬಳಕೆ ಆಗಬೇಕೆಂಬ ಸದಾಶಯದೊಂದಿಗೆ ಸುಪ್ರಿಂಕೋರ್ಟ್ ನ್ಯಾಯದಾನ ಮಾಡಿದೆ. ಕೋಟ್ಯಾಂತರ ಬೆಲೆ ಬಾಳುವ ಜಾಗದಲ್ಲಿ ಸಭಾ ಭವನ, ಶಿಕ್ಷಕರ ವಸತಿ ನಿಲಯ, ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ಕಾಗಿ ಸದುಪಯೋಗ ಆಗುವಂತಹ ಭವನವನ್ನು ಕಟ್ಟಬೇಕೆಂಬ ಹಲವಾರು ದಿನಗಳ ಕನಸಿಗೆ ಸುಪ್ರಿಂಕೋರ್ಟ್ ನ್ಯಾಯ ನೀಡುವ ಮೂಲಕ ಸಹಕರಿಸಿದೆ. ಅದಕ್ಕಾಗಿ ವಿಶೇಷವಾಗಿ ಸುಪ್ರಿಂಕೋರ್ಟ್‍ಗೆ ಧನ್ಯವಾದಗಳನ್ನು ಅರ್ಪಿಸಲಾಗುವುದು ಎಂದು ಹೇಳಿದರು.

 ಈ ಜಾಗದಲ್ಲಿ ಸುಸಜ್ಜಿತವಾದ ಶಿಕ್ಷಕರ ಭವನವನ್ನು ನಿರ್ಮಾಣ ಮಾಡಲು ಯೋಜನೆಯನ್ನು ಹಾಕಿಕೊಂಡಿದೆ. ಜೊತೆಗೆ ಈ ಜಾಗದಲ್ಲಿ ನಿರ್ಮಾಣ ಮಾಡುವ ಭವನವನ್ನು ಸಾರ್ವಜನಿಕವಾಗಿಯೂ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುವಂತೆ ನಿರ್ಮಿಸುವ ಕಾರ್ಯಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು ಅದಕ್ಕೆ ತಮ್ಮೆಲ್ಲರ ಸಹಕಾರ ಸಹಾಯ ಬೇಕೆಂದು ಶಿಕ್ಷಕರಲ್ಲಿ ಕೋರಿದರು.


ಭವನದ ನಿರ್ಮಾಣಕ್ಕಾಗಿ ಈಗಾಗಲೇ 3.50 ಕೋಟಿ ವೆಚ್ಚದ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಜನಪ್ರತಿನಿಧಿಗಳು, ಶಿಕ್ಷಕ ಪದವೀಧರ ಕ್ಷೇತ್ರದ ಪ್ರತಿನಿಧಿಗಳು ಸೇರಿದಂತೆ ಸಮಾಜದ ವಿವಿಧ ದಾನಿಗಳು ಗಣ್ಯಮಾನ್ಯರಿಂದ ಆರ್ಥಿಕ ಸಹಾಯ ಪಡೆಯಲಾಗುವುದು. ಶಿಕ್ಷಕರು ತಾವು ತಮ್ಮ ಅಳಿಲು ಸೇವೆಯನ್ನು ಮಾಡುವ ಮೂಲಕ ತನುಮನ ಧನದಿಂದ ಸಹಾಯ, ಸಹಕಾರ ನೀಡಬೇಕು. ಸಂಘವು ತಮಗೆ ಸಾಕಷ್ಟು ನೆರವು ಸಹಕಾರ ನೆಮ್ಮದಿ ನೀಡಿದೆ ಅದಕ್ಕೆ ತಮ್ಮದೇ ಆದ ಕೊಡುಗೆ ಇರಲಿ ಎಂಬುದೇ ನನ್ನ ಆಶಯ. ಶೀಘ್ರದಲ್ಲಿಯೇ ಭೂಮಿ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ಬಸವರಾಜ ಹೊರಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಅನೇಕ ಶಿಕ್ಷಕರು ಮಾತನಾಡಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿ ಸಲಹೆ ಸೂಚನೆಯನ್ನು ನೀಡಿದರು.  

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್, ಡಾ.ಬಸವರಾಜ ಧಾರವಾಡ, ಶ್ಯಾಮ ಮಲ್ಲನಗೌಡ, ಪ್ರಕಾಶ ನಾಯಕ, ಎಂ.ಬಿ.ಸಾವಜ್ಜಿಯವರ, ಸಹಜಾನಂದ ದಂದರಗಿ, ಸಂಘಟನೆಯ ಸಂಚಾಲಕ ಎಚ್.ಪಿ.ಬಣಕಾರ, ಸಿ.ಎ.ಲೋಣಿ, ಪ್ರಾ. ಅನೀಲ ವೈದ್ಯ, ಸತೀಶ ಪಾಸಿ, ಉಮೇಶ ಹಿರೇಮಠ, ಎಸ್.ವ್ಹಿ.ಪಟ್ಟಣಶೆಟ್ಟಿ, ಪಿ.ಎಸ್.ಹುದ್ದಾರ, ಎಂ.ಕೆ.ಲಮಾಣಿ, ಎ.ಎಸ್.ಪಾಟೀಲ, ಎಸ್.ಸಿ.ಚಕ್ಕಡಿಮಠ, ಬಸವರಾಜ ಕೊರ್ಲಹಳ್ಳಿ, ಎಸ್.ಎಸ್.ಗಡ್ಡದ, ಸೇರಿದಂತೆ ಶಿಕ್ಷಣ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *