ಸಭಾಪತಿ ಸ್ಥಾನದ ವರೆಗೆ ಬೆಳೆಸಿದ ಕೀರ್ತಿ ಶಿಕ್ಷಕ ಬಂಧುಗಳಿಗೆ ಸಲ್ಲಬೇಕು – ಬಸವರಾಜ ಹೊರಟ್ಟಿ

ಬೆಂಗಳೂರು, ಜುಲೈ 19 (ಕರ್ನಾಟಕ ವಾರ್ತೆ): ಶಿಕ್ಷಕರ ಸಹಕಾರ ಅವರ ಆಶೀರ್ವಾದದಿಂದಲೇ 1980 ರಿಂದ ವಿಧಾನ ಪರಿಷತ್ ಪ್ರವೇಶಿಸಿ ಇಂದಿಗೆ 41 ವರ್ಷಗಳಾದವು. ಹಲವಾರು ಖಾತೆಗಳ ಸಚಿವನಾಗಿ ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸುವ ಈ ಎಲ್ಲ ಅವಕಾಶಗಳು, ಸ್ಥಾನ ಮಾನ ಗೌರವಗಳು ದೊರೆತಿವೆಯೆಂದರೆ ಅದು ಶಿಕ್ಷಕ ಬಂದುಗಳಿಂದ ಮಾತ್ರ ಎಂದು ಹೆಮ್ಮೆಯಿಂದ ಅಭಿಮಾನ ಪೂರ್ವಕವಾಗಿ ಹೇಳುತ್ತೇನೆಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.


ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಬಸವರಾಜ ಹೊರಟ್ಟಿಯವರ ಹಿತೈಷಿ ಬಳಗದ ವತಿಯಿಂದ ವಿಧಾನಪರಿಷತ್ ಸದಸ್ಯರಾಗಿ 41 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ, ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸಭಾಪತಿಗಳು ಕರ್ನಾಟಕ ರಾಜ್ಯ ಮಾದ್ಯಮಿಕ ಶಾಲಾ ನೌಕರರ ಸಂಘ ಕಳೆದ 45 ವರ್ಷಗಳಿಂದ ಶಿಕ್ಷಕರ ಧ್ವನಿಯಾಗಿ ಅವರೆಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಶಿಕ್ಷಕರ ಬಹುತೇಕ ಸಮಸ್ಯೆಗಳು ಹೋರಾಟದ ಫಲದಿಂದಲೇ ಪರಿಹಾರ ದೊರೆತಿವೆ. ವಿಶೇಷವಾಗಿ ಖಾಸಗಿ ಶಾಲಾ ಕಾಲೇಜು ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಹೋರಾಟ ಮಾಡುತ್ತ ಬಂದಿರುವ ಸಂಘ ಕಳೆದ ಎರಡು ದಶಕಗಳಿಂದ ನಾಡಿನ ಸಮಸ್ತ ಶಿಕ್ಷಕರ ಹೋರಾಟದ ಜೀವನದಿಯಾಗಿ ಶಿಕ್ಷಕರ ಜೀವಧ್ವನಿಯಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ನಂತರ ಮತ್ತೆ ಹೊಸ ಸಮಸ್ಯೆಗಳು ದಿನದಿಂದ ದಿನಕ್ಕೆ ಶಿಕ್ಷಕರನ್ನು, ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಸಂಘಟಿತ ಪರಿಹಾರ ಒಂದೇ ದಾರಿ.

1980 ರಿಂದ ಸತತ ಏಳುಬಾರಿ ವಿಧಾನಪರಿಷತ್ತಿಗೆ ಆಯ್ಕೆಯಾಗಲು ಸಹಕರಿಸಿದ ಪಶ್ಚಿಮ ಶಿಕ್ಷಕ ಮತಕ್ಷೇತ್ರದ ಶಿಕ್ಷಕ ಬಂಧುಗಳನ್ನು ಜೀವನದಲ್ಲಿ ಎಂದೂ ಮರೆಯಲಾರೆನು. ಅವರ ಋಣವನ್ನು ಎಷ್ಟು ಜೀವ ತಳೆದರು ತೀರಿಸಲು ಸಾಲದು. ಹೀಗಾಗಿ ಸದಾಕಾಲ ಈ ಎಲ್ಲ ಶಿಕ್ಷಕ ಸಮೂಹವನ್ನು ಗೌರವಿಸುವೆ, ಪ್ರೀತಿಸುವೆ ಎಂದು ಹೇಳಿದರು.

ಸಂಘದ ಪ್ರಧಾನ ಸಂಚಾಲಕ ಡಾ.ಬಸವರಾಜ ಧಾರವಾಡ ಮಾತನಾಡಿ, ಬಸವರಾಜ ಹೊರಟ್ಟಿಯವರು ಶಿಕ್ಷಕರಾಗಿ ಮಾಡಿದ ಹೋರಾಟಗಳು ಸದಾಕಾಲ ಸ್ಮರಣೀಯ. ಅವರ ಸಾಧನೆ ಮೈಲಿಗಲ್ಲುಗಳು ಇಂದಿಗೂ ಎಂದೆಂದಿಗೂ ಮಾತನಾಡುತ್ತವೆ. ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿಯವರು ಸಭಾಪತಿ ಸ್ಥಾನವರೆಗೆ ಏರಲು ಅವರ ದಣಿವರಿಯದ ಹೋರಾಟ ಶಿಕ್ಷಕರೊಂದಿಗಿನ ನಿರಂತರ ಸಂಪರ್ಕ ಪ್ರೀತಿ ವಿಶ್ವಾಸಗಳೇ ಕಾರಣ. ಇವರೊಬ್ಬ ಅಜಾತಶತ್ರು, ಪ್ರಶ್ನಾತೀತ ನಾಯಕರು, ನಿಷ್ಕಳಂಕ ರಾಜಕಾರಣಿ ಎಂದೇ ಚಿರಪರಿಚಿತರು, ಇವರು ನೇರ ನಡೆ ನುಡಿಗೆ ಹೆಸರಾಗುವುದರ ಜೊತೆಗೆ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಹೀಗಾಗಿ ವಿಧಾನಪರಿಷತ್ತಿನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಸಂಘದ ಹಿರಿಯರಾದ ಪ್ರಕಾಶ ನಾಯಕ, ಎಂ.ಜಿ. ಸಾವಜ್ಜಿಯವರ, ಸಹಜಾನಂದದಂದರಗಿ, ಶಾಮ ಮಲ್ಲನಗೌಡ್ರ, ಎಸ್.ಎಂ.ಅಗಡಿ, ಮಾತನಾಡಿ ಸರ್ಕಾರ ಪರೋಕ್ಷವಾಗಿ ನಮ್ಮನ್ನು ಶೋಷಣೆ ಮಾಡುತ್ತಿದೆ. ಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳು ನಿತ್ಯಕಾಡುವ ಮೂಲಕ ನೆಮ್ಮದಿಯಿಂದ ಕೆಲಸ ಮಾಡದಂತಹ ಸ್ಥಿತಿ ಉದ್ಭವವಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಶಿಕ್ಷಣ ಇಲಾಖೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯನವರು ಅನುದಾನಿತ ಪ್ರೌಢಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿರ್ಲಕ್ಷ ಮಾಡುವ ಮೂಲಕ ದಿನಕ್ಕೊಂದು ಅವೈಜ್ಞಾನಿಕ ಆದೇಶ ಹೊರಡಿಸಿ ಶಿಕ್ಷಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಭಯವುಂಟು ಮಾಡಿದ್ದಾರೆ. ಇಂಥವರಿಂದ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕುಂಠಿತವಾಗುತ್ತದೆ. ಇವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್, ಸಂಘಟನೆಯ ಸಂಚಾಲಕ ಎಚ್.ಪಿ.ಬಣಕಾರ, ಸಿ.ಎ.ಲೋಣಿ, ಪ್ರಾ. ಅನೀಲ ವೈದ್ಯ, ಸತೀಶ ಪಾಸಿ, ಉಮೇಶ ಹಿರೇಮಠ, ಎಸ್.ವ್ಹಿ.ಪಟ್ಟಣಶೆಟ್ಟಿ, ಪಿ.ಎಸ್.ಹುದ್ದಾರ, ಎಂ.ಕೆ.ಲಮಾಣಿ, ಎ.ಎಸ್.ಪಾಟೀಲ, ಎಸ್.ಸಿ.ಚಕ್ಕಡಿಮಠ, ಬಸವರಾಜ ಕೊರ್ಲಹಳ್ಳಿ, ಎಸ್.ಎಸ್.ಗಡ್ಡದ, ಸೇರಿದಂತೆ ಶಿಕ್ಷಣ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *