`ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್’ ನಕಲಿ ಬಿಲ್: ದಸಂಸ ದೂರು

 ಬೆಂಗಳೂರು :  2020-21 ನೇ ಸಾಲಿನಲ್ಲಿ ಪಾಲಿಕೆ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಬೆಲ್ಸ್, ಸೈಟರ್‌ಗಳನ್ನು ನೀಡದೆ ಬೋಗಸ್ ಬಿಲ್ ಮಾಡಿ ಅಕ್ರಮದ ಕುರಿತು ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಸ್. ರಘು, ಬಿಬಿಎಂಪಿ ವಿಶೇಷ ಆಯುಕ್ತರು ಹಾಗೂ ವಲಯ ಆಯುಕ್ತರಾದ ಬಿ. ರೆಡ್ಡಿ ಶಂಕರ್ ಬಾಬು ಅವರಿಗೆ ದೂರು ನೀಡಿದ್ದಾರೆ.  

2021 ನೇ ಶೈಕ್ಷಣಿಕ ಸಾಲಿನಲ್ಲಿ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಬೆಲ್ಸ್, ಸೈಟರ್ ವಿತರಿಸಲು ಪಾಲಿಕೆಯಿಂದ 1.72 ಕೋಟಿ ರೂ.ಪಾವತಿ ಆಗಿದೆ.   ಮೂಲಭೂತ ಸೌಲಭ್ಯಗಳ ಹೆಸರಿನಲ್ಲಿ ಅನಧಿಕೃತವಾಗಿ ನಕಲಿ ಬಿಲ್ ಸೃಷ್ಟಿ ಮಾಡಿ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆಯಾಗಲು ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಬಿಬಿಎಂಪಿ ಅಧಿಕ ಕೌನ್ಸಿಲ್ ಕಾರ್ಯದರ್ಶಿ ಎಸ್.ಕೆ. ರಾಮೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.    

20-2021 ನೇ ಸಾಲಿನಲ್ಲಿ ಕಳೆದ 2 ಶೈಕ್ಷಣಿಕ ವರ್ಷಗಳಿಂದ ಶಾಲೆಗಳು ಆರಂಭವಾಗಿಲ್ಲ, ಕೊರೋನ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಇವುಗಳನ್ನು ವಿತರಿಸುವ ಪ್ರಮೇಯವೇ ಬರುವುದಿಲ್ಲ.

  ಪದವಿ ತರಗತಿಗಳವರೆಗೆ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿದ್ದು ಮಕ್ಕಳು ಶಾಲೆಗೆ ಹಾಜರಾಗಿಲ್ಲ, ಹೀಗಿದ್ದರೂ ಮಕ್ಕಳ ಹಾಜರಾತಿ ಇಲ್ಲದೇ ಮೇಲ್ಕಂಡ ಅಧಿಕಾರಿಗಳು ವ್ಯವಸ್ಥಿತ ಸಂಚಿನAತೆ ಶಾಮೀಲಾಗಿ ಸರ್ಕಾರದ ಈ ಯೋಜನೆ ಪಾಲಿಕೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸೇರಬೇಕಾಗಿದ್ದ ಶೂ, ಸಾಕ್ಸ್, ಟೈ, ಬೆಲ್ಟ್ ಹೆಸರಿನಲ್ಲಿ ನಕಲಿ ದಾಖಲೆಗಳ ಬಿಲ್ ಸೃಷ್ಟಿಸಿ ವಿತರಿಸಿರುವುದಾಗಿ ಹೇಳಲಾಗಿದೆ.

2020-21ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಶಾಲಾ ಕಾಲೇಜುಗಳಿಗೆ ಅವಶ್ಯವಿರುವ ಮೂಲ ಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು ಕೆಎಚ್‌ಡಿಸಿ ಹಾಗೂ ಎಂಎಸ್‌ಐಎಲ್ ಸಂಸ್ಥೆ ವತಿಯಿಂದ ಅಗತ್ಯ ಸಲಕರಣೆಗಳನ್ನು ಖರೀದಿಸಿರುವುದಾಗಿ ಹೇಳಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ದೂರು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *