ಶಿಕ್ಷಕ ಸಂಘಟನೆಯೊಂದಿಗೆ ಶಿಕ್ಷಕರು ಅವಿನಾಭಾವ ಸಂಬಂಧ ಹೊಂದಿರಲಿ – ಬಸವರಾಜ ಹೊರಟ್ಟಿ

ಬೆಂಗಳೂರು, ಆಗಸ್ಟ್ 02 (ಕರ್ನಾಟಕ ವಾರ್ತೆ): ಶಿಕ್ಷಕರು ಇಂದು ನೆಮ್ಮದಿಯಿಂದ ಪಾಠ ಮಾಡುತ್ತಿದ್ದರೆ ಅದಕ್ಕೆ ಕಾರಣ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ನಾಲ್ಕು ದಶಕಗಳ ಹೋರಾಟದ ಫಲ ಎಂದು ವಿಧಾನಪರಿಷತ್ ಸಭಾಪತಿ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಸಂಸ್ಥಾಪಕ ಅದ್ಯಕ್ಷರಾದ ಬಸವರಾಜ ಹೊರಟ್ಟಿಯವರು ಹೇಳಿದರು.
ಅವರು ಗದಗ ಜಿಲ್ಲಾ ಕರ್ನಾಟಕ ಸೆಕಂಡರಿ ಸ್ಕೂಲ್ ಟೀಚರ್ ಅಸೋಸಿಯೇಶನ್‍ನ ನಿಕಟಪೂರ್ವ ಅಧ್ಯಕ್ಷರಾದ ಎನ್.ವಿ.ಪಾಟೀಲ ಹಾಗೂ ಅವರ ಸ್ನೇಹಿತರು ಆ ಸಂಘಟನೆ ತೊರೆದು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯತ್ವ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸದರಿಯವರಿಗೆ ಸದಸ್ಯತ್ವ ಪ್ರಮಾಣ ಪತ್ರ ನೀಡಿ ಮಾತನಾಡಿದ ಅವರು 1976ರಿಂದ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಶಿಕ್ಷಕರ ಹಿತ ಕಾಯುವುದಕ್ಕಾಗಿ ನೂರಾರು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಹೋರಾಟಗಳಿಂದಲೇ ಇಂದು ಶಿಕ್ಷಕರು ಎಲ್ಲ ಸೌಲಭ್ಯಗಳನ್ನು ಪಡೆದು ನೆಮ್ಮದಿಯಿಂದ ಪಾಠ ಮಾಡುತ್ತಿದ್ದಾರೆ. ಆದಾಗ್ಯೂ ದಿನಕ್ಕೊಂದು ಅವೈಜ್ಞಾನಿಕ ಆದೇಶಗಳು ಶಿಕ್ಷಕರನ್ನು ಆತಂಕಕ್ಕೀಡು ಮಾಡಿವೆ. ಮುಂಬರುವ ದಿನಗಳಲ್ಲಿ ಖಾಸಗಿ ಶಾಲಾ ಶಿಕ್ಷಕರ ಭವಿಷ್ಯದ ಮೇಲೆ ಸಾಕಷ್ಟು ಪೆಟ್ಟು ಬೀಳುವ ಸಂಗತಿಗಳು ಗೋಚರಿಸುತ್ತಿವೆ. ಈಗಿನಿಂದಲೇ ಗುಣಮಟ್ಟದ ಶಿಕ್ಷಣ ನೀಡುವತ್ತ ಶಿಕ್ಷಕರು ತಮ್ಮ ಮನೋಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಈ ಹಿಂದೆ ಇದ್ದ ಪರಿಸ್ಥಿತಿ ಇಂದು ಇಲ್ಲದಾಗಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಕರು ಸಹ ಹೊಸ ಹೆಜ್ಜೆಯತ್ತ, ಚಿಂತನೆಯತ್ತ ಕಾಲಿಟ್ಟಾಗ ಮಾತ್ರ ತಮ್ಮ ಭವಿಷ್ಯ ಭದ್ರವಾಗಲು ಸಾಧ್ಯ. ಶಿಕ್ಷಕರು ಸಂಘಟನೆ ಜೊತೆಗೆ ಅವಿನಾಭಾವ ಸಂಬಂಧ ಹೊಂದುವ ಮೂಲಕ ಸಂಘಟನೆಯನ್ನು ಕೂಡ ಸಶಕ್ತಗೊಳಿಸಲು ಮುಂದಾಗಬೇಕೆಂದು ಹೇಳಿ ಸದಸ್ಯತ್ವ ಸ್ವೀಕರಿಸಿದ ಸದಸ್ಯರಿಗೆ ಶುಭವಾಗಲಿ ಎಂದು ಹೇಳಿದರು.
ಕರ್ನಾಟಕ ಸೆಕಂಡರಿ ಸ್ಕೂಲ್ ಟೀಚರ್ ಅಸೋಸಿಯೇಶನ್‍ನ ನಿಕಟಪೂರ್ವ ಅಧ್ಯಕ್ಷರಾದ ಎನ್.ವಿ.ಪಾಟೀಲ ಸದಸ್ಯತ್ವ ಸ್ವೀಕರಿಸಿ ಮಾತನಾಡಿ ಕಾರಣಾಂತರಗಳಿಂದ ಬೇರೆ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದು ಬಹಳ ದೊಡ್ಡ ತಪ್ಪಾಗಿದೆ. ಬಸವರಾಜ ಹೊರಟ್ಟಿಯವರ ಹೋರಾಟದ ಫಲದಿಂದಲೇ ನಾವೆಲ್ಲ ಇಂದು ನೆಮ್ಮದಿಯಾಗಿದ್ದೇವೆ.  ಬಸವರಾಜ ಹೊರಟ್ಟಿಯವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಮಾಧ್ಯಮಿಕ ಶಾಲಾ ನೌಕರರ ಸಂಘದ ಸದಸ್ಯತ್ವವನ್ನು ಇಂದು ಅತ್ಯಂತ ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇವೆ. ಹಿಂದೆ ಮಾಡಿದ ತಪ್ಪನ್ನು ಮುಂದೆ ಎಂದೂ ಮಾಡುವುದಿಲ್ಲವೆಂದು ಹೇಳಿದರು.
ಗದಗ ಜಿಲ್ಲಾ ಮಾದ್ಯಮಿಕ ಶಾಲಾ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಬಸವರಾಜ ಧಾರವಾಡ ಮಾತನಾಡಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಹಲವಾರು ಸ್ನೇಹಿತರು ಬೇರೆ ಬೇರೆ ಕಾರಣಗಳಿಂದ ದೂರಾಗಿದ್ದರು ಈಗ ಅವರೆಲ್ಲ ಮತ್ತೆ ತಮ್ಮ ಸ್ವಂತ ಮನೆಗೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಬಿನ್ನಾಭಿಪ್ರಾಯಗಳು ಏನೇ ಇರಲಿ ಸಂಘಟನೆ ಹೋರಾಟದಲ್ಲಿ ನಾವೆಲ್ಲ ಒಂದಾದಾಗ ಮಾತ್ರ ನಮ್ಮ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿ ಸದಸ್ಯತ್ವ ಸ್ವೀಕರಿಸಿದ ಸರ್ವ ಸದಸ್ಯರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ಎಂ.ಅಗಡಿ, ಸಿ.ಆರ್.ಹಿರೇಮಠ, ಸಿ.ಎಸ್.ಬಂಡಿಹಾಳ, ಎನ್.ಎಸ್.ಸಜ್ಜನ, ಆರ್.ಎಂ.ಗೌಡರ, ಎನ್.ಎಸ್.ಹಂಜಗಿ, ಎಲ್.ಎಂ.ಲಮಾಣಿ, ದಳವಿ, ದೊಡ್ಡಮನಿ, ಎಸ್.ಎಸ್.ಗಡ್ಡದ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *