ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಬಹುಶಿಸ್ತೀಯ ಮಹಿಳಾ ಘಟಕ ಕಾಲೇಜು ಆರಂಭ

ಬೆಂಗಳೂರು, ಆಗಸ್ಟ್ 27 (ಕರ್ನಾಟಕ ವಾರ್ತೆ):                                                                                                      

ರಾಷ್ಟ್ರೀಯ ಶಿಕ್ಷಣ ನೀತಿ 2020 ರಡಿಯಲ್ಲಿ ನ  (NEP)  ಅಶೋತ್ತರಗಳಂತೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯಕ್ಕೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ರೀಯ ಶಿಕ್ಷಣ ನೀತಿ ಆಧಾರಿತ ಬಹುಶಿಸ್ತೀಯ ವಿಶ್ವವಿದ್ಯಾನಿಲಯದ ಮಹಿಳಾ ಘಟಕ ಕಾಲೇಜನ್ನು 2021-22ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿರುತ್ತದೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಆಶಯಗಳಾದ ವಿದ್ಯಾರ್ಥಿ ಕೇಂದ್ರಿಕೃತ ಶಿಕ್ಷಣ, ಬಹುಶಿಸ್ತೀಯ ಸಮಗ್ರ ಹಾಗೂ ವಿವಿಧ ಶೈಕ್ಷಣಿಕ ಹಂತಗಳಲ್ಲಿ ಪ್ರವೇಶ ಪಡೆಯುವುದು ಮತ್ತು ನಿರ್ಗಮಿಸುವುದಕ್ಕೆ ಅವಕಾಶ ನೀಡುವ ವ್ಯಾಸಂಗವನ್ನು ನೀಡುವ ಪೂರ್ಣ ಪ್ರಮಾಣದ ಶೈಕ್ಷಣಿಕ ಸೌಕರ್ಯಗಳನ್ನು ಹೊಂದಿರುವ ಕಾಲೇಜನ್ನು ಪ್ರಾರಂಭಿಸಲಾಗುವುದು. ಪ್ರಸ್ತುತ ವರ್ಷಕ್ಕೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ಕೋರ್ಸುಗಳ ಜೊತೆಗೆ ಕೌಶಲ್ಯ ಆಧಾರಿತ, ಮೌಲ್ಯ ವರ್ಧಿತ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸುಗಳನ್ನು ಸಹ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಅಭಿವೃದ್ಧಿಯಲ್ಲಿ ಇದೊಂದು ಸಾರ್ಥಕ ಅಭಿವೃದ್ಧಿ ಸಾಧನೆಯಾಗಿರುತ್ತದೆ.  

 ದಿನಾಂಕ: 26.08.2021 ರಂದು ಜರುಗಿದ ಸಿಂಡಿಕೇಟ್ ಸಭೆಯಲ್ಲಿ ಸರ್ಕಾರದ ಮಂಜೂರಾತಿಯನ್ನು ಸ್ವಾಗತಿಸಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಅನುಮೋದನೆ ನೀಡಿರುತ್ತದೆ. ಬೆಂಗಳೂರು ನಗರದ ಮಲ್ಲೇಶ್ವರಂ ಬಡಾವಣೆಯ 13ನೇ ಕ್ರಾಸ್‍ನಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಕಾಲೇಜನ್ನು ಆರಂಭಿಸಲು ತೀರ್ಮಾನಿಸಲಾಗಿದೆ.

ಶೀಘ್ರದಲ್ಲಿಯೇ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಆಸಕ್ತ ವಿದ್ಯಾರ್ಥಿನಿಯರು ಮತ್ತು ಪಾಲಕರು ವಿಶ್ವವಿದ್ಯಾನಿಲಯದ ಈ ಮಹಿಳಾ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ.


Leave a Reply

Your email address will not be published. Required fields are marked *