ಆಸ್ಕರ್ ಫರ್ನಾಂಡಿಸ್ ವಿಧಿವಶ ಸಭಾಪತಿ ಹೊರಟ್ಟಿ ತೀವ್ರ ಸಂತಾಪ
ರಾಜ್ಯ ಸಭಾ ಸದಸ್ಯ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಸಂತಾಪ ವ್ಯಕಸ್ತಿಪಡಿಸಿದ್ದಾರೆ. ಐದು ಬಾರಿ ಲೋಕಸಭಾ ಸದಸ್ಯರಾಗಿ ಎರಡು ಬಾರಿ ರಾಜ್ಯ ಸಭಾ ಸದಸ್ಯರಾಗಿ ಹಾಗೂ ಕೇಂದ್ರದ ಸಚಿವರಾಗಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದ ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ಕರ್ನಾಟಕ ರಾಜ್ಯ ಓರ್ವ ಧೀಮಂತ ನಾಯಕರನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ಸರಳ ಹಾಗೂ ಸ್ನೇಹಮಯಿ ವ್ಯಕ್ತಿತ್ವದ ಆಸ್ಕರ್ ಫರ್ನಾಂಡಿಸ್ ಅವರು ತಮ್ಮ ಅಪಾರ ಸಾಮಾಜಿಕ ಕಳಕಳಿಯಿಂದ ಜನಾನುರಾಗಿಯಾಗಿದ್ದರು. ಕಳೆದ ನಾಲ್ಕು ದಶಕಗಳಿಂದ ಆತ್ಮೀಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಜಾತಿ, ಮತ, ಪಂಥಗಳನ್ನು ಮೀರಿ ಸಮಾಜದ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಅನೇಕ ಜನಪರ ಯಜನೆಗಳ ಮೂಲಕ ಹೆಸರುವಾಸಿಯಾಗಿದ್ದರು.