ಆಹಾರ ರಫ್ತು ದೇಶವಾಗುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವುದು ನಮ್ಮ ಗುರಿ: ಶೋಭ ಕರಂದ್ಲಾಜೆ

ಬೆಂಗಳೂರು, ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ಭಾರತ 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವಾಗಿದ್ದು, ಭಾರತದ ಪ್ರಮುಖ ಹಾಗೂ ಅತಿ ಹೆಚ್ಚು ಜನರು ತೊಡಗಿಸಿಕೊಂಡಿರುವ ಕೃಷಿಯನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಅವರು ತಿಳಿಸಿದರು.

ಇಂದು ನಗರದ ಅಶೋಕ ಹೋಟೆಲ್‍ನಲ್ಲಿ ಎಪೆಡಾ ಸಂಸ್ಥೆಯ ಸಹ ಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಫ್ತುದಾರರ ಸಮಾವೇಶ ಹಾಗೂ ವಸ್ತುಪ್ರದರ್ಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಒಂದಾಗಿರುವ ರಾಷ್ಟ್ರ ಭಾರತವಾಗಿದ್ದು, ಇಲ್ಲಿನ ರೈತರು ಬೆಳೆದ ಬೆಳೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶದಿಂದ ಕೃಷಿ ಬೆಳೆಗಳ ಗುಣಮಟ್ಟ ಹೆಚ್ಚಿಸುವುದು ಹಾಗೂ ಸಂಸ್ಕರಣೆಯ ತಾಂತ್ರಿಕತೆಯನ್ನು ಸರಳೀಕರಣಗೊಳಿಸುವುದರ ಜೊತೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಸ್ಥಳೀಯ ಬೆಳೆಗಳಿಗೆ ಅನುಗುಣವಾಗಿ ಕೃಷಿ ಕೈಗಾರಿಕೆಗಳನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ ಕೇಂದ್ರ ಸರ್ಕಾರ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ದೇಶದ ಒಟ್ಟು ಆಯವ್ಯಯದಲ್ಲಿ 1,31,000/- ಲಕ್ಷ ಕೋಟಿ ರೂ.ಗಳನ್ನು ನೀಡಿದ್ದು, ಇದು ಸ್ವಾತಂತ್ರ್ಯದ ನಂತರ ಕೃಷಿ ವಲಯಕ್ಕೆ ನೀಡಿರುವ ಅತ್ಯಂತ ಹೆಚ್ಚಿನ ಪ್ರೋತ್ಸಾಹವಾಗಿದೆ. ಈಗಾಗಲೇ ನಮ್ಮಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಬೆಳೆಗಳಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಿದ್ದಲ್ಲಿ ಬೆಲೆ ಕುಸಿತದಂತಹ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಶ್ಯಕತೆಗನುಗುಣವಾಗಿ ಉತ್ತಮ ಗುಣಮಟ್ಟ, ರಸಾಯನಿಕ ಮುಕ್ತ ಹಾಗೂ ಸಂಸ್ಕರಣಾ ಘಟಕಗಳ ಕಡೆ ನಾವು ಗಮನಹರಿಸಿದಲ್ಲಿ ನಮ್ಮ ರೈತರಿಗೆ ಉತ್ತಮ ಬೆಲೆ ದೊರಕುತ್ತದೆ ಹಾಗೂ ಇದರಿಂದ ಅವರ ಆದಾಯ ಸಹ ದ್ವೀಗುಣಗೊಳ್ಳುತ್ತದೆ. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಉಪಯೋಗವನ್ನು ರಫ್ತುದಾರರು, ರೈತರು ಮತ್ತು ಕೈಗಾರಿಕೋದ್ಯಮಿಗಳು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಕೃಷಿ ಉತ್ನ್ನಗಳು ವಿವಿಧತೆಯಿಂದ ಕೂಡಿದ್ದು, ಇಲ್ಲಿ ವಿಶ್ವವಿಖ್ಯಾತ ಮಸಾಲೆಗಳಿಂದಿಡಿದು ದ್ವೀದಳ ಧಾನ್ಯಗಳು, ತೋಟಗಾರಿಕೆ ಬೆಳೆಗಳು ಸೇರಿದಂತೆ ಬಯಲು ಸೀಮೆಯಲ್ಲಿ ಬೆಳೆಯುವ ಅನೇಕ ಬೆಳೆಗಳನ್ನು ನಾವು ರಫ್ತು ಮಾಡಬಹುದಾಗಿದೆ. ಅದಕ್ಕಾಗಿ ಜಿಲ್ಲೆಗೊಂದರಂತೆ ವಿಶೇಷ ಬೆಳೆಗಳನ್ನು ಗುರುತಿಸಿ ಅವುಗಳಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಈಗಗಾಲೇ ಯೋಜನೆ ಆರಂಭವಾಗಿದೆ.

ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾನಿಲಯಗಳು ಸ್ಥಳೀಯ ರೈತರೊಂದಿಗೆ ಕೈಜೋಡಿಸುವ ಮೂಲಕ ಬೇಗ ಇಳುವರಿ ಕೊಡುವ ಹಾಗೂ ಉತ್ತಮ ಗುಣಮಟ್ಟದ ಬೆಳಗಳನ್ನು ಬೆಳೆಯಲು ಸಹಾಯಕವಾಗುವಂತೆ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಇದಕ್ಕಾಗಿ ಅವಶ್ಯವಿರುವ ಅಂಶಗಳನ್ನು ನೀಡಿ ಸಹಕರಿಸಲು ಸರ್ಕಾರ ಸನ್ನದ್ದವಾಗಿದೆ ಎಂದು ತಿಳಿಸಿದರು.

ರೈತರು ತಮ್ಮ ಬೆಳೆಗಳನ್ನು ರಫ್ತು ಮಾಡಲು ವಿವಿಧ ದೇಶಗಳು ವಿವಿಧ ಮಾನದಂಡಗಳನ್ನು ಅನುಸರಿಸುತ್ತಿವೆ, ಅದರಲ್ಲಿ ಮುಖ್ಯವಾಗಿ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಬೆಳೆ ತೆಗೆಯುವ ವಿಧಾನಗಳಿಗೆ ಬದಲಾಗುವ ಮೂಲಕ ತಮ್ಮ ಬೆಳೆಗಳ ಬೆಲೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ವಿಶ್ವಸಂಸ್ಥೆ 2023ನೇ ಸಾಲನ್ನು ಮಿಲ್ಲೆಟ್ಸ್ ವರ್ಷ ಎಂದು ಆಚರಿಸುತ್ತಿದೆ, ಇದಕ್ಕಾಗಿ ಭಾರತ ಸರ್ಕಾರ ಬೇಡಿಕೆಯನ್ನು ಸಲ್ಲಿಸಿತ್ತು, ಜಗತ್ತಿನಲ್ಲಿ ಅತೀ ಹೆಚ್ಚು ಮಿಲ್ಲೆಟ್ಸ್ ಬೆಳೆಯುವ ದೇಶ ನಮ್ಮದು. ನಾವು ಬೆಳೆದ ಬೆಳೆಗಳಿಗೆ ನಾವೇ ಮಾರುಕಟ್ಟೆಯನ್ನು ಹುಡುಕುವ ಬದಲಾಗಿ ವಿಶ್ವ ಮಾರುಕಟ್ಟೆ ನಮ್ಮ ಬೆಳೆಗಳನ್ನು ಬಯಸಿ ನಮ್ಮಲ್ಲಿಗೆ ಬರುವಂತೆ ಉತ್ತಮ ಗುಣಮಟ್ಟದ ಬೆಳೆಗಳನ್ನು ಬೆಳೆಯುವ ವಾತಾವರಣವನ್ನು ಸೃಷ್ಠಿಸೋಣ. ರಾಜ್ಯದ ಕೈಗಾರಿಕೆ ಇಲಾಖೆಯಲ್ಲಿರುವ ಕೃಷಿ ರಫ್ತು ವಿಭಾಗವನ್ನು ಪ್ರತ್ಯೇಕಗೊಳಿಸಿ ಕ್ಲಸ್ಟರ್ ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜಕುಮಾರ್ ಕತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಡಾ.ರಾಜೇಂದ್ರಕುಮಾರ್ ಕಠಾರಿಯಾ, ನಬಾರ್ಡ್ ಬೆಂಗಳೂರು ಶಾಖೆಯ ಮುಖ್ಯಸ್ಥರಾದ ನೀರಜ್ ಕುಮಾರ್ ವರ್ಮ್, ಆಹಾರ ಸಂಸ್ಕರಣ ಸಂಸ್ಥೆಯ ನಿರ್ದೇಶಕರಾದ ಡಾ. ಆನಂದ ರಾಮಕೃಷ್ಣನ್, ರಫ್ತು ವಿಭಾಗದ ಜಂಟಿ ನಿರ್ದೇಶಕರಾದ ಹೆಚ್.ಡಿ.ಲೋಕೇಶ ಸೇರಿದಂತೆ ರೈತರು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *