ಅ. 25 ರಿಂದ ಭೌತಿಕ ತರಗತಿ: ಮಾರ್ಗಸೂಚಿ ಅನ್ವಯ ಪ್ರಾಥಮಿಕ ಶಾಲೆ ಆರಂಭ

ಬೆಂಗಳೂರು, ಅ. 18: ಅಕ್ಟೋಬರ್ 25 ರಿಂದ 1 ರಿಂದ 5 ನೇ ತರಗತಿ ವರೆಗೆ ಭೌತಿಕ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಕೊರೊನಾ ಮಾರ್ಗಸೂಚಿ ಅನ್ವಯ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಆರಂಭಿಸಲು ಅನುಮತಿ ನಿಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ಒಂದರಿಂದ ಐದನೇ ತರಗತಿ ವರೆಗೆ ಶಾಲೆ ಆರಂಭ ಬಗ್ಗೆ ತಜ್ಞರ ಸಮಿತಿ ಶಿಫಾರಸು ನೀಡಿದ ಬೆನ್ನಲ್ಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕೆ.ಆರ್. ವೃತ್ತದಲ್ಲಿರುವ ಸರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈವರೆಗೂ ಶಾಲೆಯಲ್ಲಿ ಕೊರೊನಾ ಸೋಂಕು ಹರಡಿದ ಬಗ್ಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಪೋಷಕರಿಂದ ಮಕ್ಕಳಿಗೆ ಕೊರೊನಾ ಬಂದಿರುವ ಪ್ರಕರಣಗಳು ವರದಿಯಾಗಿವೆ. ಇನ್ನು ಒಂದರಿಂದ ಐದನೇ ತರಗತಿವರೆಗೂ ರಾಜ್ಯದಲ್ಲಿ ಶಾಲೆ ಪ್ರಾರಂಭದ ಬಗ್ಗೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ಅಕ್ಟೋಬರ್ 25 ರಿಂದ ಒಂದನೇ ತರಗತಿಯಿಂದ ಐದನೇ ತರಗತಿ ವರೆಗೆ ಶಾಲೆ ಆರಂಭಿಸಲಾಗುತ್ತಿದೆ. ಮೊದಲ ಒಂದು ವಾರ ಕಾಲ ಮಾತ್ರ ಅರ್ಧ ದಿನ ಶಾಲೆಗಳು ಕಾರ್ಯಾರಂಭವಾಗಲಿವೆ. ಆನಂತರ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.

ಈಗಾಗಲೇ ಶಾಲೆಗಳ ಕಾರ್ಯಾರಂಭ ಬಗ್ಗೆ ಮಾರ್ಗಸೂಚಿ ಬಿಡಗಡೆ ಮಾಡಲಾಗಿದೆ. ಆ ಮಾರ್ಗ ಸೂಚಿಗಳನ್ನು ಶಾಲೆಗಳು ಕಡ್ಡಾಯವಾಗಿ ಪಾಲಿಸಬೇಕು. ಶಾಲಾ ಶಿಕ್ಷಕರು ಲಸಿಕೆ ಪಡೆದಿರಬೇಕು. ಮಕ್ಕಳಿಗೂ ಲಸಿಕೆ ನೀಡುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಲಸಿಕೆ ನೀಡುವುದೇ ಆದಲ್ಲಿ ಶಾಲೆಯಲ್ಲಿಯೇ ಮಕ್ಕಳಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗುವುದು. ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ತಜ್ಞರ ಸಮಿತಿ ನೀಡಿರುವ ಶಿಫಾರಸುಗಳನ್ನು ಎಲ್ಲಾ ಶಾಲೆಗಳು ಚಾಚು ತಪ್ಪದೇ ಪಾಲಿಸಬೇಕು. ಮಕ್ಕಳ ಆರೋಗ್ಯ ರಕ್ಷಣೆ ಜತೆಗೆ ಶಿಕ್ಷಣವೂ ಅಷ್ಟೇ ಮಖ್ಯ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಪೂರ್ವ ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಸದ್ಯಕ್ಕೆ ಚರ್ಚೆ ನಡೆಸವುದು ಕ್ಷೇಮವಲ್ಲ, ಒಂದರಿಂದ ಐದನೇ ತರಗತಿ ವರೆಗೆ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದ್ದು, ಪೋಷಕರು ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಶಿಕ್ಷಣ ಸಚಿವರು ಸಲಹೆ ಮಾಡಿದರು.

‘’ಶಾಲೆಗಳ ವಾಸ್ತವ ಸಮಸ್ಯೆ ಅರಿತು ಶಿಕ್ಷಣ ಸಚಿವರು ಒಂದರಿಂದ ಐದನೇ ತರಗತಿ ವರೆಗೆ ಭೌತಿಕ ತರಗತಿ ಪ್ರಾರಂಭಕ್ಕೆಅವಕಾಶ ಮಾಡಿಕೊಟ್ಟಿದ್ದಾರೆ. ಒಂದೂವರೆ ವರ್ಷದಿಂದ ಈವರೆಗೂ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿರಲಿಲ್ಲ. ಕೊರೊನಾ ಸೋಂಕು ಕೂಡ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆ ರಾಜ್ಯಗಳಂತೆ ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭ ಮಾಡುವಂತೆ ಕ್ಯಾಮ್ಸ್ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿತ್ತು. ರಾಜ್ಯದಲ್ಲಿ ಮಕ್ಕಳ ಹಾಗೂ ಶಿಕ್ಷಕರ ಭವಿಷ್ಯದ ಜತೆಗೆ ಶಿಕ್ಷಣ ವ್ಯವಸ್ಥೆ ಉಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ತೆಗೆದುಕೊಂಡಿರುವ ತೀರ್ಮಾನವನ್ನು ಸ್ವಾಗತಿಸುತ್ತೇವೆ,’’ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ 2020 ಮಾರ್ಚ್ ತಿಂಗಳಲ್ಲಿ ಶಾಲೆಗಳನ್ನು ಸಂಪೂರ್ಣ ಮುಚ್ಚಲಾಗಿತ್ತು. ಕೊರೊನಾ ಸಂಕಷ್ಟದಿಂದ ಹೊಡೆತಕ್ಕೆ ಸಿಲುಕಿದ ಶಾಲಾ ಶಿಕ್ಷಕರು ತಮ್ಮ ವೃತ್ತಿ ತೊರೆದು ಕೂಲಿಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಹಂತ ಹಂತವಾಗಿ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಯಾವುದೇ ವಿವಾದಕ್ಕೂ ಒಳಗಾಗದೇ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರು ತೆಗೆದುಕೊಳ್ಳುತ್ತಿರುವ ತೀರ್ಮಾನಗಳ ಬಗ್ಗೆ ಶಾಲಾ ವಲಯದಲ್ಲಿ ಸಂತಸ ಉಂಟು ಮಾಡಿದೆ. ಒಂದರಿಂದ ಐದನೇ ತರಗತಿ ವರೆಗೆ ಶಾಲೆಗಳನ್ನು ಆರಂಭಿಸಿರುವ ಮೂಲಕ ಪುಟಾಣಿಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಮತ್ತೆ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ಕೊಟ್ಟಿದ್ದು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಹೊರತು ಪಡಿಸಿ ಪೂರ್ಣ ಪ್ರಮಾಣದ ಶಾಲೆ ಆರಂಭವಾಗಲಿದೆ. ಹೀಗಾಗಿ ಅತಿ ಶೀಘ್ರದಲ್ಲಿಯೇ ಶಾಲೆಗಳು ಆನ್‍ಲೈನ್ ಕ್ಲಾಸ್‍ಗೆ ಕೊಕ್ ನೀಡಲಿವೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಆನ್‍ಲೈನ್ ತರಗತಿಗಳನ್ನು ರದ್ದು ಮಾಡಿ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಶಾಲೆಯಲ್ಲಿಯೇ ಪಾಠ ಮಾಡುವ ಸಂಬಂಧ ಸರ್ಕಾರದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

Leave a Reply

Your email address will not be published. Required fields are marked *