ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲರು

ಹುಬ್ಬಳ್ಳಿ (ಕರ್ನಾಟಕ ವಾರ್ತೆ).ಅ.18: ಭಾರತದ ಕಾನೂನು ವ್ಯವಸ್ಥೆ  ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ನಮ್ಮ ಸಂವಿಧಾನ ಅತ್ಯಂತ ಬಲಿಷ್ಠವಾಗಿದೆ  ಎಂದು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.


ಹುಬ್ಬಳ್ಳಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿದ ಅವರು, ವಿಶ್ವವಿದ್ಯಾಲಯದ ಕಾರ್ಯವೈಖರಿ ಮತ್ತು ಸಾಧನೆ ಬಗ್ಗೆ ಚರ್ಚಿಸಿದ ಅವರು ಕಾನೂನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.


ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ದೇಶದ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ರಾಜ್ಯದ ವಿವಿಧ ಕಾನೂನು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದವರು  ದೇಶದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸಿ   ಹೆಸರುಗಳಿಸಿದ್ದಾರೆ.‌ ನ್ಯಾಯಮೂರ್ತಿಗಳಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕಾನೂನು ವಿಶ್ವ ವಿದ್ಯಾಲಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ವಿಶ್ವ ವಿದ್ಯಾಲಯ ಸುಧಾರಣೆ ಕುರಿತು ಸಿಂಡಿಕೇಟ್ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಈ ಸಂಬಂಧ ಲಿಖಿತ ರೂಪದಲ್ಲಿ ಸಲಹೆಗಳನ್ನು ನೀಡಿದರೆ, ಅದನ್ನು ಪರಮಾರ್ಶಿಸಿ,  ಸರ್ಕಾರದ ಗಮನಕ್ಕೆ ತಂದು ಕಾನೂನು ರೀತ್ಯಾ  ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.

Leave a Reply

Your email address will not be published. Required fields are marked *