ಒಗ್ಗಟ್ಟಾಗಿ ಬೆಳೆಯೋಣ… ಯಶಸ್ಸು ಕಂಡ ಮಹಿಳಾ ಸಮಾವೇಶ

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ಉದ್ಯಮ ಶೀಲತಾ ದಿನದ ಅಂಗವಾಗಿ ನಗರದಲ್ಲಿ ಉಬುಂಟು ಮಹಿಳಾ ಉದ್ದಿಮೆದಾರರ ಸಂಘಟನೆ ಆಯೋಜಿಸಿದ್ದ ಉಬುಂಟು ಮಹಿಳಾ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು.  ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ಉಬುಂಟು ಒಕ್ಕೂಟದ ಅಧ್ಯಕ್ಷೆ ಕೆ. ರತ್ನಪ್ರಭ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ವಿವಿದ ಮೂಲೆಗಳಿಂದ 400 ಮಂದಿ ಗಣ್ಯ ಮಹಿಳೆಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಬಸವರಾಜು ಎಸ್ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸುವ ಜೊತೆಗೆ ಮಹಿಳೆಯರ ಅಭಿವೃದ್ದಿಪರ ಉದ್ಯಮ ಶೀಲತೆಯ ಕನಸಿಗೆ ಮತ್ತಷ್ಟು ಹುರುಪು ತುಂಬಿದ್ದು ವಿಶೇಷವಾಗಿತ್ತು.

ವಸ್ತು ಪ್ರದರ್ಶನ:

ಅದು ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕು ಎನ್ನುವ ಮಹತ್ವದ ಕನಸು. “ ಒಗ್ಗಟ್ಟಾಗಿ ಬೆಳೆಯೋಣ…” ಎನ್ನುವ ಅಮೋಘ ಘೋಷವಾಕ್ಯ. ಕಲಾವಿದೆಯರ ಕೈಚಳಕ, ಗೃಹಿಣಿಯರ ಕೈರುಚಿ, ತಾಂತ್ರಿಕರ ತಂತ್ರಜ್ಞಾನ, ಸಾವಯವ ಪದಾರ್ಥ, ಕುಸುರಿ, ಬಣ್ಣ, ಆಭರಣ, ಅಲಂಕಾರ ಇತ್ಯಾದಿ ಇತ್ಯಾದಿಗಳೆಲ್ಲಾ ಒಂದೇ ಸೂರಿನಡಿ ಕಲೆತು ಕೊಂಡಿದ್ದವು. ಕೈಮಗ್ಗ, ಗಾಣದ ಎಣ್ಣೆ, ಕುಸುರಿ-ಕೆತ್ತನೆ, ಬೆಳಗಾವಿ ತಿಂಡಿ, ಕಬ್ಬಿನ ಜ್ಯೂಸ್ ನೀರಾ, ಮಣ್ಣು ಹಾಗೂ ಪಿಂಗಾಣಿ ಕಲಾಕೃತಿಗಳು, ಪಾತ್ರೆ, ಚನ್ನಪಟ್ಟಣದ ಗೊಂಬೆಗಳು, ಗ್ರಾಮೀಣ ಮಹಿಳೆಯರ ವಿಡಿಯೋ ಹಾಗೂ ಪೊಟೋ ಛಾಯಾಗ್ರಹಣ, ಎಲ್ಲವೂ ಅಲ್ಲಿದ್ದವು. ಹೀಗಾಗಿ ಎಲ್ಲೆಲ್ಲೂ ಮಂದಹಾಸ, ನವೋಲ್ಲಾಸ, ಏನನ್ನೋ ಸಾಧಿಸಿದ ಸಂತೃಪ್ತ ವಾತಾವರಣ ನಿರ್ಮಾಣವಾಗಿತ್ತು.

ವಿಚಾರ ವಿನಿಮಯ :

ಆಧುನೀಕರಣದ ನಾಗಲೋಟದ ನಡುವೆ ತಮ್ಮದೇ ಛಾಪನ್ನು ಮೂಡಿಸುತ್ತಾ ಸಾಧನೆಯ ಗುರಿ ತಪುಪಿರುವ ದಿಟ್ಟ ಮಹಿಳೆಯರು ಅವರು. ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅವರೆಲ್ಲರಲ್ಲೂ ಒಂದೇ ಕುಟುಂಬದಂತೆ ಕಲೆತು ಬೆರೆತರು, ವಿಚಾರ ವಿನಿಮಯ ಮಾಡಿಕೊಂಡರು, ಹಲವಾರು ಯೋಜನೆಗಳ ಕುರಿತು ಚರ್ಚಿಸಿದರು.
ಸಾಧನೆ-ಶ್ಲಾಘನೆ :
ಉಳಿತಾಯದ ವಿಚಾರದಲ್ಲಿ ಬಹುರಾಷ್ಟ್ರೀಯ ಬ್ಯಾಂಕ್‌ಗಳನ್ನೂ ಮೀರಿಸಿದ ಸಾಧನೆ ಮಹಿಳೆಯರದ್ದು ಎನ್ನುವುದು ಇತ್ತೀಚಿನ ಅಧ್ಯಯನ ವರದಿ. ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ಪರಿಪೂರ್ಣ ಬೆಂಬಲ ನೀಡಿದರೆ ಈ ಸಾಧನೆ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಇದೇ ಕಾರಣಕ್ಕೆ ಗ್ರಾಮೀಣ ಮಹಿಳೆಯರಿಂದ ಹಿಡಿದು ಕಾರ್ಪೋರೇಟ್ ವಲಯದ ಉತ್ತುಂಗದಲ್ಲಿರುವವರಿಗೂ ಬೆಂಬಲ ನೀಡಬೇಕು ಎನ್ನುವ ಆಶಯ ಈ ಸಮಾವೇಶದಲ್ಲಿ ವ್ಯಕ್ತವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಇಂತಹ ಉದ್ದೇಶಕ್ಕಾಗಿ ಮಹಿಳೆಯರ ಬೃಹತ್ ಮಟ್ಟದ ಉತ್ತಮ ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚಿಸುವ ಉದ್ದೇಶ ಹೊಂದಿದ್ದೇವೆ ಎನ್ನುವ ಮೂಲಕ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕ್ಷಿಯಾದರು.

ಶಿ ಫಾರ್ ಹರ್ :

ಮಹಿಳೆಯರ ಸ್ವಾವಲಂಬನೆ ಹಾಗೂ ಸಾಧನೆಯ ಉತ್ತುಂಗವನ್ನು ಪ್ರದರ್ಶಿಸುವ ಒಂದು ಪುಟ್ಟ ಪ್ರಯತ್ನ ನಡೆಯಿತು. ರಾಜ್ಯದ  ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿ ನಿವೃತ್ತರಾಗಿರುವ  ಶ್ರೀಮತಿ ಕೆ. ರತ್ನಪ್ರಭ ಕಾರ್ಯಕ್ರಮದ ಕೇಂದ್ರ ಬಿಂದು. ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದ ಅವರು ಉಬುಂಟು ಮೂಲಕ ಉದ್ಯಮಶೀಲತೆಯತ್ತ ಮಹಿಳೆಯರನ್ನು ಉತ್ತೇಜಿಸುವಲ್ಲಿ ಕಾರ್ಯತತ್ಪರರಾದರು. ಅವರ ಈ ಉದ್ದೇಶ ಇದೀಗ ಹೆಮ್ಮರವಾಗಿ ಬೆಳೆದಿದ್ದು ದೇಶದ 3೦ ರಾಜ್ಯಗಳಲ್ಲಿ ವ್ಯಾಪಿಸಿದೆ. ಹೀಗೆ ಯಶಸ್ವಿ ಉದ್ಯಮಿಗಳಾಗಿ ಬೆಳೆದಿರುವ ನೂರಾರು ಮಹಿಳೆಯರು, ಯುವತಿಯರು ಶ್ರೀಮತಿ ಕೆ. ರತ್ನಪ್ರಭರವರ ಭಾವಚಿತ್ರದ ಸಮೀಪ ನಿಂತು ತಮ್ಮ ಯಶೋಗಾಥೆಯನ್ನ ಹಂಚಿಕೊಂಡರು.
ಉಬುಂಟು ಸಮಾವೇಶದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನ ಮಳಿಗೆಗಳಲ್ಲಿ ಮಹಿಳೆಯರು ತಮ್ಮ ವಹಿವಾಟುಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪ್ರದಾನ ಭಾಷಣ ಮಾಡಿದ ಶ್ರೀಮತಿ ಹಿನಾ ನಾಗರಾಜನ್ (ಡಿಯಾಜಿಯೊ ಇಂಡಿಯಾದ ಎಂಡಿ ಮತ್ತು ಸಿಇಒ), ಶ್ರೀಮತಿ ಶ್ರದ್ಧಾ ಶರ್ಮಾ (ಎಂಡಿ, ಯುವರ್ ಸ್ಟೋರಿ) ಮತ್ತು ದಿವ್ಯಾ ಗೋಕುಲನಾಥ್ (ಬೈಜಸ್)  ತಮ್ಮ ಯಶಸ್ವೀ  ಜೀವನಾಗಾಥೆಯ ಹಂಚಿಕೊಂಡರು.  ಶ್ರೀಮತಿ ಜ್ಯೋತಿ ಬಾಲಕೃಷ್ಣ (ಗೌರವ ಕಾರ್ಯದರ್ಶಿ), ಶ್ರೀಮತಿ ಉಮಾ ರೆಡ್ಡಿ (ಸಂಚಾಲಕರು), ಶ್ರೀಮತಿ ಲತಾ ಗಿರೀಶ್ (ಖಜಾಂಚಿ) ಉಪಸ್ಥಿತರಿದ್ದರು.
ಅನೇಕ ಯಶಸ್ವಿ ಉದ್ಯಮಿಗಳು ಮತ್ತು ವಿವಿಧ ಸಂಘಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಉಧ್ಯಮ ಶೀಲತೆಯ ಕುರಿತು ವಿಚಾರ ವಿನಿಮಯ ಮಾಡಿದರು.

Leave a Reply

Your email address will not be published. Required fields are marked *