ರಾಜಸ್ಥಾನ ಮಾದರಿಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ಬಸವರಾಜ ಹೊರಟ್ಟಿ ಮನವಿ.

ರಾಜಸ್ಥಾನ ಸರ್ಕಾರವು ಇಂದು ಮಂಡಿಸಿದ ಆಯವ್ಯಯ ಪತ್ರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಮುಂದುವರಿಸುವ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಲ್ಲಿನ ಸ್ಥಳೀಯ ರಾಜ್ಯ ಸರ್ಕಾರಿ ನೌಕರರ ಭವಿಷ್ಯಕ್ಕೆ ಸುರಕ್ಷತೆ ಒದಗಿಸಿದೆ. ಇದು ಸ್ವಾಗತಾರ್ಹ ಘೋಷಣೆಯಾಗಿದ್ದು, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಈ ಬಾರಿಯ ಆಯವ್ಯಯದಲ್ಲಿ ಘೋಷಣೆ ಮಾಡುವಂತೆ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿ ಶ್ರೀ ಬಸವರಾಜ ಎಸ್. ಹೊರಟ್ಟಿ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಮಾಡಿದ್ದಾರೆ.

ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶ್ರೀ ಬಸವರಾಜ ಎಸ್. ಹೊರಟ್ಟಿ,  ನಮ್ಮ ರಾಜ್ಯದಲ್ಲಿಯೂ ದಿನಾಂಕಃ ೦೧-೦೪-೨೦೦೬ರ ನಂತರದ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರಿಂದ ಲಕ್ಷಾಂತರ ನೌಕರರಿಗೆ ನಿವೃತ್ತಿಯ ನಂತರ ಯಾವುದೇ ರೀತಿಯ ಆರ್ಥಿಕ ಸೌಲಭ್ಯ ದೊರೆಯದೇ ಜೀವನೋಪಾಯ ಕಷ್ಟಸಾಧ್ಯವಾಗಿದೆ. ಆದುದರಿಂದ, ರಾಜಸ್ಥಾನ ಸರ್ಕಾರದ ಮಾದರಿಯಂತೆ ಇದೇ ಮಾರ್ಚ್ ೦೪ ರಂದು ಮಂಡಿಸುವ ೨೦೨೨-೨೩ನೇ ಸಾಲಿನ ಕರ್ನಾಟಕ ರಾಜ್ಯದ ಆಯವ್ಯಯದಲ್ಲಿ  ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿ, ರಾಜ್ಯ ಸರ್ಕಾರಿ ನೌಕರರ ಬಾಳಿನಲ್ಲಿ ಹೊಸ ಭರವಸೆ ಮೂಡಿಸಿವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.  
ಅದೇ ರೀತಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ ಮತ್ತಿತ್ತರ ಸೌಲಭ್ಯ ನೀಡುವ ನಿಟ್ಟಿನಲ್ಲಿ ೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿರುವ ತಾರತಮ್ಯಕ್ಕೆ ಅಂತ್ಯ ಹಾಡುವ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸಿಕೊಡುವಂತೆಯೂ ಸಹ ಕೋರಿ, ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *