ಪಬ್ಲಿಕ್ ಪರೀಕ್ಷೆಗಳ ಇತಿಹಾಸ – ಹತ್ತನೆಯ ತರಗತಿ ಪ್ರೌಢಶಾಲಾ ಶಿಕ್ಷಣದ ಪ್ರಮುಖ ಘಟ್ಟ.

ಹತ್ತನೆಯ ತರಗತಿ ಪ್ರೌಢಶಾಲಾ ಶಿಕ್ಷಣದ ಪ್ರಮುಖ ಘಟ್ಟ. ಈ ಹಂತದವರೆಗೆ ಸಾಮಾನ್ಯವಾಗಿ ಪಬ್ಲಿಕ್ ಪರೀಕ್ಷೆ ಇರುವುದಿಲ್ಲ. ಇದು ದೇಶದಾದ್ಯಂತ ಸಾಮಾನ್ಯ ಸಂಗತಿ. ನಮ್ಮ ರಾಜ್ಯದಲ್ಲಿ 1962ಕ್ಕೆ ಮೊದಲು 10 ವರ್ಷಗಳ ಶಾಲಾ ಶಿಕ್ಷಣ ಎಂದಿರಲಿಲ್ಲ. 8 ವರ್ಷಗಳ ಶಾಲಾ ಶಿಕ್ಷಣದ ಕೊನೆಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗು ತ್ತಿತ್ತು. ಇದನ್ನು ಲೋಯರ್ ಸೆಕೆಂಡರಿ (ಸಂಕ್ಷಿಪ್ತವಾಗಿ ಎಲ್.ಎಸ್.) ಎಂದು ಕರೆಯಲಾಗುತ್ತಿತ್ತು. ಈ ಹಂತವನ್ನು ದಾಟಿ ಶಿಕ್ಷಣವನ್ನು ಮುಂದುವರೆಸುವವರು ಹೈಸ್ಕೂಲು 1ನೇ, 2ನೇ ಮತ್ತು 3ನೇ ತರಗತಿಗಳನ್ನು ಫೋರ್ತ್ ಫಾರಂ, ಫಿಪ್ತ್ ಫಾರಂ ಮತ್ತು ಶಿಕ್ಸ್ತ್ ಫಾರಂ ಎಂಬ ಹೆಸರಿನಿಂದ ಕರೆಯಲಾಗುತಿತ್ತು. ಸಿಕ್ಸ್ತ್ ಫಾರಂ ಮುಗಿದ ನಂತರ ತೆಗೆದುಕೊಳ್ಳುವ ಪರೀಕ್ಷೆಯನ್ನು ಎಸ್.ಎಸ್.ಎಲ್.ಸಿ. (ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್) ಎಂದು ಕರೆಯ ಲಾಗುತ್ತಿತ್ತು. ಅಲ್ಲಿಗೆ ಹನ್ನೊಂದು ವರ್ಷಗಳ ಶಾಲಾ ಶಿಕ್ಷಣ. ಮೊದಲು ಇದನ್ನು `ಮೆಟ್ರಿಕ್’ ಪರೀಕ್ಷೆ ಎಂದು ಕರೆಯಲಾಗುತ್ತಿತ್ತು. 1916ರವರೆಗೆ ಮದ್ರಾಸ್ ವಿಶ್ವವಿದ್ಯಾಲಯ ಈ ಪರೀಕ್ಷೆಯನ್ನು ನಡೆಸುತ್ತಿತ್ತು. ಅದರ ನಂತರ ಎರಡು ವರ್ಷದ ಇಂಟರ್‍ಮೀಡಿಯಟ್ ಕೋರ್ಸ್, ಎಂದಿತ್ತು. 1957ರಲ್ಲಿ ಇದನ್ನು ಒಂದು ವರ್ಷದ ಪಿಯುಸಿ ಎಂದು ಬದಲಾಯಿಸಲಾಯಿತು. ಇಲ್ಲಿ ಕಡಿಮೆಯಾದ ಒಂದು ವರ್ಷದ ಶಿಕ್ಷಣವನ್ನು ಪದವಿ ಹಂತಕ್ಕೆ ಸೇರಿಸಿ 3 ವರ್ಷದ ಪದವಿ ಶಿಕ್ಷಣ ಜಾರಿಗೆ ಬಂತು. ಅದಾದ ನಂತರ 2 ವರ್ಷದ ಪದವಿ ಶಿಕ್ಷಣ ಅಥವಾ 3 ವರ್ಷದ ಆನರ್ಸ್ ಶಿಕ್ಷಣ ಎಂದಿತ್ತು. 1972-73ರಲ್ಲಿ ಆನರ್ಸ್ ಪದವಿಗಳನ್ನು ರದ್ದುಪಡಿಸಿ ಏಕರೂಪದ 3 ವರ್ಷದ ಪದವಿ ಶಿಕ್ಷಣವನ್ನು ಜಾರಿಗೆ ತರಲಾಯಿತು. ನಂತರ 1962-63ರಲ್ಲಿ 10 ವರ್ಷಗಳ ಶಾಲಾ ಶಿಕ್ಷಣದ (4+3+3) ಪದ್ಧತಿ ಜಾರಿಗೆ ಬಂದಿತು. ಆಗ 1ರಿಂದ 4 ಕಿರಿಯ ಪ್ರಾಥಮಿಕ ಶಿಕ್ಷಣ, 5-7 ಹಿರಿಯ ಪ್ರಾಥಮಿಕ ಮತ್ತು 8-10 ಪ್ರೌಢಶಾಲೆ ವ್ಯವಸ್ಥೆ ಪ್ರಾರಂಭವಾಯಿತು. 1963-64ರಲ್ಲಿ 8ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಪರ್ಯಾಯವಾಗಿ 7ನೇ ತರಗತಿ ಜಿಲ್ಲಾ ಮಟ್ಟದ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಾಯಿತು. 7ನೇ ತರಗತಿ ಮತ್ತು 8ನೇ ತರಗತಿ ಪರೀಕ್ಷೆಗಳನ್ನು ತೇರ್ಗಡೆಯಾದದವರು ಒಟ್ಟಿಗೆ ಹೈಸ್ಕೂಲು ಪ್ರಥಮ ವರ್ಷಕ್ಕೆ ದಾಖಲಾದರು. 1979-80ರಲ್ಲಿ 7ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದಾಗಿ ಶಾಲಾಮಟ್ಟದ ಪರೀಕ್ಷೆ ಪ್ರಾರಂಭವಾಯಿತು. ಪುನಃ ಕೆಲವು ವರ್ಷಗಳ ನಂತರ ಡಾ|| ಹೆಚ್. ನರಸಿಂಹಯ್ಯ ಸಮಿತಿ ಶಿಫಾರಸಿನಂತೆ ಜಿಲ್ಲಾಮಟ್ಟದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಪ್ರಾರಂಭಿಸಿ ನಂತರ ಅದನ್ನೂ ಕೈಬಿಡಲಾಯಿತು.

1970-71ರವರೆಗೆ ಒಂದು ವರ್ಷದ ಅವಧಿಯ ಪಿಯುಸಿ ಶಿಕ್ಷಣ ಇತ್ತು. ಇದು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿತ್ತು. ಅಲ್ಲಿಂದೀಚೆಗೆ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 2 ವರ್ಷಗಳ ಪಿಯುಸಿ ಶಿಕ್ಷಣ ಜಾರಿಗೆ ಬಂದಿತು. ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿದ್ದ 1 ವರ್ಷದ ಪಿಯುಸಿ ಕೋರ್ಸನ್ನು 2 ವರ್ಷಗಳಿಗೆ ವಿಸ್ತರಿಸಿ ಪದವಿ ಕಾಲೇಜು ಗಳನ್ನು ಕಾಂಪೋಸಿಟ್ ಕಾಲೇಜುಗಳೆಂದು ಕರೆಯಲಾಯಿತು. ಮತ್ತೆ ಕೆಲವು ವರ್ಷಗಳು ಇದೇ ವ್ಯವಸ್ಥೆ ಮುಂದು ವರೆಯಿತು. ಇದೇ ಅವಧಿಯಲ್ಲಿ ಕೆಲವು ಸ್ವತಂತ್ರ ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾದವು. ಅಲ್ಲಿಗೆ ಪದವಿ ಪೂರ್ವ ತರಗತಿಗಳು ಕಂಪೋಸಿಟ್ ಕಾಲೇಜುಗಳು, ಹೈಯರ್ ಸೆಕೆಂಡರಿ ಶಾಲೆಗಳು ಮತ್ತು ಸ್ವತಂತ್ರ ಪದವಿ ಪೂರ್ವ ಕಾಲೇಜುಗಳು ಹೀಗೆ 3 ವಿಭಿನ್ನ ವ್ಯವಸ್ಥೆಯಲ್ಲಿ ಮುಂದುವರಿದವು. ತದನಂತರ ಈ ಪದವಿ ಪೂರ್ವ ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳನ್ನು ಹೊಸದಾಗಿ ಸ್ಥಾಪಿಸಲಾದ ಪದವಿ ಪೂರ್ವ ಶಿಕ್ಷಣ ನಿರ್ದೇಶಕರ ಅಧೀನಕ್ಕೆ ಒಳಪಡಿಸಲಾಯಿತು.

ಹಾಲಿ ವ್ಯವಸ್ಥೆಯಲ್ಲಿ 10ನೇಯ ತರಗತಿಯವರೆಗೆ ಯಾವುದೇ ಪಬ್ಲಿಕ್ ಪರೀಕ್ಷೆ ಇರುವುದಿಲ್ಲ. ದೇಶದಾದ್ಯಂತ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. 10ನೇ ತರಗತಿ ನಂತರ ಎಸ್.ಎಸ್.ಎಲ್.ಸಿ. ಪಾಸಾದವರು ಕೆಳ ಹಂತದ ಸರ್ಕಾರಿ ನೌಕರಿಗಳನ್ನು ಪಡೆಯಲು ಅರ್ಹರಾಗುತ್ತಾರೆ. ಹಾಗಾಗಿ ಈ ಪರೀಕ್ಷೆಗೆ ಬಹಳ ಮಹತ್ವ ಇದೆ.

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

1966ಕ್ಕೆ ಮೊದಲು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದ್ದ ವ್ಯವಸ್ಥೆ ಬಗ್ಗೆ ನಿಖರವಾದ ಮಾಹಿತಿ ಗಳು ಲಭ್ಯವಾಗಿಲ್ಲ. ಪ್ರಾಯಶಃ ಶಿಕ್ಷಣ ಇಲಾಖೆಯಲ್ಲಿ ಒಂದು ಸಣ್ಣ ಘಟಕ ಈ ಕೆಲಸವನ್ನು ನಿರ್ವಹಿಸುತ್ತಿದ್ದಿರಬೇಕು. 1966ರಲ್ಲಿ ಈಗಿನ ಪರೀಕ್ಷಾ ಮಂಡಳಿ ಸ್ಥಾಪನೆಯಾಗಿದೆ. ವಿಧಾನಮಂಡಲದ ಕಾಯಿದೆ ಅಡಿಯಲ್ಲಿ ಸ್ಥಾಪನೆಯಾದ ಈ ಮಂಡಳಿಗೆ ಕೆಲವು ವರ್ಷದವರೆಗೆ ಅಲ್ಲಿನ ನಿರ್ದೇಶಕರೇ ಅಧ್ಯಕ್ಷರೂ ಆಗಿರುತ್ತಿದ್ದರು. ಪ್ರಸ್ತುತ ವ್ಯವಸ್ಥೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಪ್ರತಿವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಲಿದೆ. ಮಾರ್ಚ್ 2007ರಲ್ಲಿ ಪರೀಕ್ಷೆ ತೆಗೆದು ಕೊಂಡವರ ಸಂಖ್ಯೆ 8.15 ಲಕ್ಷ ದಾಟಿದೆ. ಮೊದಲು ಮಾರ್ಚ್/ಏಪ್ರಿಲ್‍ನಲ್ಲಿ ಮುಖ್ಯ ಪರೀಕ್ಷೆಯನ್ನು ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಪೂರಕ (ಸಪ್ಲಿಮೆಂಟರಿ) ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಕೆಲವು ವರ್ಷಗಳಿಂದೀಚೆಗೆ ಜೂನ್ ತಿಂಗಳಲ್ಲಿಯೇ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಕೆಲಸಕಾರ್ಯಗಳು

ಮಂಡಳಿಯಲ್ಲಿ ಇಬ್ಬರು ನಿರ್ದೇಶಕರು, ಒಬ್ಬರು ಕಾರ್ಯದರ್ಶಿ ಮತ್ತು ಅಧಿಕ ಸಂಖ್ಯೆಯ ಅಧಿಕಾರಿ / ಸಿಬ್ಬಂದಿವರ್ಗದವರು ಕಾರ್ಯ ನಿರ್ವಹಿಸುತ್ತಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಜೊತೆಗೆ ಇನ್ನೂ ಹಲವು ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಪರೀಕ್ಷಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಎರಡನೆಯ ನಿರ್ದೇಶಕರು ಇತರೆ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಇತರೆ ಪರೀಕ್ಷೆಗಳು

ಡಿಎಡ್. ಪರೀಕ್ಷೆ, ನರ್ಸರಿ ಶಿಕ್ಷಕರ ತರಬೇತಿ ಪರೀಕ್ಷೆ, ಟೈಪ್‍ರೈಟಿಂಗ್ ಮತ್ತು ಶಾರ್ಟ್ ಹ್ಯಾಂಡ್ (ಕಾಮರ್ಸ್ ಪರೀಕ್ಷೆಗಳು), ಸಂಗೀತ, ನೃತ್ಯ, ತಾಳವಾದ್ಯ, ಚಿತ್ರಕಲೆ, ಹಿಂದಿ ಬಿಎಡ್, ಚಲನಚಿತ್ರ ನಟನೆ ಮತ್ತು ಹಿನ್ನೆಲೆ ಸಂಗೀತ, ನಾಟಕ ಇತ್ಯಾದಿ. ಇತ್ತೀಚೆಗೆ ಪ್ರಾರಂಭವಾದ ಕೆಎಸ್‍ಕ್ಯುಎಒ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನೂ ಮಂಡಳಿಗೆ ನೀಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ದಾಖಲೆಗಳನ್ನು ಕಂಪ್ಯೂಟರೀಕರಿಸಲಾಗಿದ್ದು ಪರೀಕ್ಷೆಯ ಮೌಲ್ಯ ಮಾಪನ ಮತ್ತು ಅಂಕಗಳ ಟ್ಯಾಜುಲೇಷನ್ ಕಾರ್ಯವನ್ನು ಬಹಳ ತ್ವರಿತವಾಗಿ ಪೂರೈಸಿ ಕ್ಷಿಪ್ರವಾಗಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಅಂಕಪಟ್ಟಿಗಳಲ್ಲಿ ಅಭ್ಯರ್ಥಿಯ ಭಾವಚಿತ್ರವನ್ನು ಎಂಬಾಸ್ ಮಾಡಿ ಲ್ಯಾಮಿನೇಷನ್ ಮಾಡುವ ವ್ಯವಸ್ಥೆ ಇರುವುದರಿಂದ ಅಂಕಪಟ್ಟಿಯಲ್ಲಿನ ಮಾಹಿತಿಗಳನ್ನು ಟ್ಯಾಂಪರ್ ಮಾಡುವುದು ಮುಂತಾದ ಕೃತ್ಯಗಳನ್ನು ನಿವಾರಿಸಲು ನೆರವಾಗಿದೆ. ಅದೇ ವೇಳೆ ಇತ್ತೀಚೆಗೆ ಜಾರಿಗೆ ತರಲಾಗಿರುವ ಹೊಸ ಪದ್ಧತಿಯಲ್ಲಿ ಶೇಕಡ 60 ಅಂಕ ಗಳಿಗೆ ಬಹು-ಉತ್ತರ ಮಾದರಿ ಪ್ರಶ್ನೆಗಳು (ಕೊಟ್ಟಿರುವ 4 ಉತ್ತರಗಳಲ್ಲಿ ಸರಿ ಉತ್ತರಕ್ಕೆ ಟಿಕ್ ಮಾಡುವ ಮಾದರಿ) ಇರುವುದರಿಂದ ವಿದ್ಯಾರ್ಥಿಗಳ ಅಭಿವ್ಯಕ್ತಿ ಮತ್ತು ಭಾಷಾ ಸಾಮಥ್ರ್ಯಗಳನ್ನು ಮಾಪನಮಾಡಲು ಅವಕಾಶ ಇರುವುದಿಲ್ಲ ಎಂಬ ಟೀಕೆ ಇದೆ. ಈ ಪದ್ಧತಿಯ ಸೂಕ್ತಾಸೂಕ್ತತೆಯ ಬಗ್ಗೆ ವರದಿಯ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ಬಾಕಿ ಇದೆ. ಮಂಡಳಿಯ ಕಚೇರಿ ಬೆಂಗಳೂರಿನ ಮಲ್ಲೇಶ್ವರಂ 6ನೇ ಅಡ್ಡರಸ್ತೆಯಲ್ಲಿದೆ.

ಮೌಲ್ಯಮಾಪನದ ಪ್ರಮುಖಾಂಶಗಳು

* ಮೌಲ್ಯಮಾಪನವು ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳೆಂಬ ಎರಡು ಬಗೆಗಳಲ್ಲಿವೆ.

*    ಆಂತರಿಕ ಮೌಲ್ಯಮಾಪನವು ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ್ದಾಗಿದೆ.

* ಬಾಹ್ಯ ಪರೀಕ್ಷೆಯ ಮಂಡಳಿ ನಡೆಸುವ ಪಬ್ಲಿಕ್ ಪರೀಕ್ಷೆಯಾಗಿದೆ.

* ಪ್ರತಿ ರೂಪಣಾತ್ಮಕ ಮೌಲ್ಯಮಾಪನವು 50 ಅಂಕಗಳಿಗಿರುವಂತೆ ವರ್ಷದ ನಾಲ್ಕು ರೂಪಣಾತ್ಮಕ ಮೌಲ್ಯ ಮಾಪನಗಳಿಂದ ಒಟ್ಟಾರೆ 200 ಅಂಕಗಳಿಂದ ಶೇಕಡಾ ಪ್ರಮಾಣದಲ್ಲಿ ಅಂಕಗಳನ್ನು ಪಡೆಯಲಾಗುವುದು.

* ಪ್ರತಿ ರೂಪಣಾತ್ಮಕ ಮೌಲ್ಯಮಾಪನದ 50 ಅಂಕಗಳಲ್ಲಿ 30 ಅಂಕಗಳು ಸಿ.ಸಿ.ಇ.ಯ ಚಟುವಟಿಕೆಗಳಿಂದಲೂ 20 ಅಂಕಗಳು ಸಾಧನಾ ಪರೀಕ್ಷೆಯಿಂದಲೂ ಬರುತ್ತವೆ.

* ಪ್ರತಿ ರೂಪಣಾತ್ಮಕ ಮೌಲ್ಯಮಾಪನದ ಅವಧಿಯಲ್ಲಿ ಕಲಿಕೆಗೆ ನಿಗದಿಪಡಿಸಿಕೊಂಡ ಘಟಕಗಳಿಗೆ ಪೂರಕವಾಗಿ ರೂಪಿಸಿಕೊಂಡ ಚಟುವಟಿಕೆಗಳಲ್ಲಿ ಯಾವುದಾದರೂ ಮೂರು ಚಟುವಟಿಕೆಗಳ ತಲಾ 10 ಅಂಕಗಳಂತೆ 30 ಅಂಕಗಳನ್ನು ಪಡೆಯುವುದು..

*    ಪ್ರತಿ ರೂಪಣಾತ್ಮಕ ಮೌಲ್ಯಮಾಪನದ ಅವಧಿಯಲ್ಲಿ ಕಲಿಕೆಯಾದ ಒಟ್ಟಾರೆ ಘಟಕಗಳಿಗೆ ಸಾಧನಾ ಪರೀಕ್ಷೆ ಯನ್ನು ಕೌಶಲ್ಯಗಳಿಗನುಗುಣವಾಗಿ ಕೈಗೊಳ್ಳುವುದು.

* ಆಂತರಿಕ ಮೌಲ್ಯಮಾಪನದ ಅಂಕಗಳು ಪ್ರಥಮ ಭಾಷೆಗೆ 25 ಹಾಗೂ ಉಳಿದೆಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ 20 ಅಂಕಗಳು.

* ಬಾಹ್ಯ ಪರೀಕ್ಷೆಯು ಪ್ರಥಮ ಭಾಷೆಗೆ 100 ಅಂಕಗಳಿಗೆ ಹಾಗೂ ಉಳಿದೆಲ್ಲಾ ಭಾಷೆ ಮತ್ತು ಕೋರ್ ವಿಷಯಗಳಿಗೆ 80 ಅಂಕಗಳಿಗೆ ನಡೆಯುತ್ತದೆ.

* ಅಂದರೆ ಮಂಡಳಿ ನಡೆಸುವ ಪಬ್ಲಿಕ್ ಪರೀಕ್ಷೆಯು 500 ಅಂಕಗಳಿಗಿದ್ದು, ಆಂತರಿಕ ಮೌಲ್ಯಮಾಪನದ ಒಟ್ಟಾರೆ ಅಂಕ 125 ಸೇರಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯಲ್ಲಿ ನಮೂದಾಗುವ ಅಂಕಗಳು 625 ಆಗಿದೆ.

ನೂತನ ಪಠ್ಯಕ್ಕೆ ಸಿ.ಸಿ.ಇ. ಅಳವಡಿಕೆಯಾಗುತ್ತಿದ್ದ `ಬಿ’ ವಿಭಾಗವು ಗ್ರೇಡ್‍ಗಳಿಂದ ಕೂಡಿರುತ್ತದೆ.

Leave a Reply

Your email address will not be published. Required fields are marked *