ಬೆಂಗಳೂರು, ಏಪ್ರಿಲ್ 29, (ಕರ್ನಾಟಕ ವಾರ್ತೆ) ; ಗೃಹರಕ್ಷಕದಳ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಕ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಬೆಂಗಳೂರು ನಗರ ಸ್ಥಳೀಯ ಆಸಕ್ತ ನಾಗರೀಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಕನಿಷ್ಠ 19 ವರ್ಷ ಗರಿಷ್ಠ 45 ವರ್ಷ ವಯೋಮಿತಿ ಒಳಗಿದ್ದು, ಉತ್ತಮ ಆರೋಗ್ಯ ಮತ್ತು ದೇಹದಾಢ್ರ್ಯತೆ ಹೊಂದಿರಬೇಕು. ಬೆಂಗಳೂರು ಸ್ಥಳೀಯ ನಾಗರಿಕರು ವಾಸಸ್ಥಳದ ಅಧಿಕೃತ ದಾಖಲೆ ಹೊಂದಿರಬೇಕು. ಬೆಂಗಳೂರು ದಕ್ಷಿಣ ಜಿಲ್ಲಾ ಕಚೇರಿಯ ವ್ಯಾಪ್ತಿಗೆ ಒಳಪಡುವ ವಿಳಾಸದಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸದರಿ ಹುದ್ದೆಯು ಖಾಯಂ ಹುದ್ದೆಯಾಗಿರುವುದಿಲ್ಲ, ಕಚೇರಿಯಿಂದ ನಿಯೋಜಿಸುವ ಅಭ್ಯರ್ಥಿಗಳು ಬೆಂಗಳೂರಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ರೂ. 455/-ರಿಂದ ರೂ. 600/- ದಿನಭತ್ಯೆ ಪಡೆಯಲು ಅರ್ಹರಿರುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ರೂ. 750/- ಹಾಗೂ ಗ್ರಾಮಾಂತರ ಪ್ರದೇಶಗಳ ಕರ್ತವ್ಯಕ್ಕೆ ಹಾಜರಾದಲ್ಲಿ ರೂ. 380/- ದಿನಭತ್ಯೆ ನೀಡಲಾಗುವುದು. ಅರ್ಜಿ ನಮೂನೆಗಳನ್ನು ದಿನಾಂಕ: 05-05-2022 ರಿಂದ 15-05-2022ರವರೆಗೆ ಉಚಿತವಾಗಿ ವಿತರಿಸಲಾಗುವುದು. ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಇತ್ತೀಚಿನ ಗ್ಯಾಸ್ ರಸೀದಿ ಮೂಲಪ್ರತಿಗಳನ್ನು ಹಾಜರುಪಡಿಸಿ ಅರ್ಜಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಸಮಾದೇಷ್ಟ ಅವರ ಕಚೇರಿ, ಗೃಹರಕ್ಷಕದಳ, ಬೆಂಗಳೂರು ದಕ್ಷಿಣ ಜಿಲ್ಲೆ, ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್ ಹತ್ತಿರ, ಬೆಂಗಳೂರು-560009 ಹಾಗೂ ದೂರವಾಣಿ ಸಂಖ್ಯೆ: 080-22261012 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.