ಪಿಎಸ್ಐ ಮರು ಪರೀಕ್ಷೆ ಬೇಡ: ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಿ, ಅವರಿಗೆ ಸರಕಾರಿ ನೌಕರಿ ಶಾಶ್ವತವಾಗಿ ಬಂದ್ ಮಾಡಿ

ಮೊಳಕಾಲ್ಮೂರು: ಪಿಎಸ್ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.ಅಲ್ಲದೆ, ತಪ್ಪು ಮಾಡಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಅವಕಾಶದಿಂದ ಸಂಪೂರ್ಣವಾಗಿ ದೂರ ಇಡಬೇಕು ಎಂದು ಅವರು ತಿಳಿಸಿದರು.ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು ಕೇಳುತ್ತಿರುವುದರಲ್ಲಿ ನ್ಯಾಯ ಇದೆ. 

ಈಗ ಯಾರು ಹಣ ಕೊಟ್ಟು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ, ಅಕ್ರಮವೆಸಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸರಕಾರಕ್ಕೆ ಸಿಗುತ್ತದೆ. ಅಕ್ರಮ ಎಸಗಿದವರನ್ನು  ಹೊರತುಪಡಿಸಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ಅಭ್ಯರ್ಥಿಗಳನ್ನು ಯಾಕೆ ಬೀದಿಪಾಲು ಮಾಡುತ್ತೀರಾ? ಎಂದು ಪ್ರಶ್ನಿಸಿದರು. ಪರೀಕ್ಷೆಯನ್ನು ಸರಿಯಾಗಿ ನಡೆಸದೆ ಸರಕಾರ ಲೋಪ ಎಸಗಿದೆ. ಇದು ಸರಕಾರದ ತಪ್ಪು ಹಾಗೂ ವೈಫಲ್ಯ. ವಸ್ತು ಸ್ಥಿತಿ ಹೀಗಿರಬೇಕಾದರೆ ಪ್ರಾಮಾಣಿಕರಿಗೆ ಯಾಕೆ ಶಿಕ್ಷೆ ಕೊಡುತ್ತೀರಾ? 

ಅವರು ಏನು ತಪ್ಪು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರದ ವಿರುದ್ದ ಹರಿಹಾಯ್ದರು.ನಾನು ನಿನ್ನೆ ಬೆಳಗ್ಗೆ ಪತ್ರಿಕೆಯಲ್ಲಿ ಓದುತಿದ್ದೆ, ಒಬ್ಬ ಅಭ್ಯರ್ಥಿಯ ತಾಯಿಗೆ ಒಂದೂವರೆ ಸಾವಿರ ರು. ಪೆನ್ಷನ್ ಬರುತ್ತದೆ. ಆ ಹಣದಲ್ಲಿ ನಮ್ಮ ಕುಟುಂಬ ಬದುಕುತ್ತಿದೆ.  ನಾನು ಬಿಇ ಮೆಕ್ಯಾನಿಕಲ್ ಮಾಡಿದ್ದೇನೆ, ಈಗ ಪರೀಕ್ಷೆ ರದ್ದು ಮಾಡಿ ಪುನಾ ಪರೀಕ್ಷೆ ಬರೆಯಬೇಕು ಎಂದರೆ ಹೇಗೆ? ನಾನು ಹಣ ಕೊಟ್ಟು ಪಾಸು ಮಾಡಿಸಿಕೊಂಡಿಲ್ಲ ಎಂದು ತನ್ನ ಕುಟುಂಬ ಪರಿಸ್ಥಿತಿಯನ್ನು ಅಳುತ್ತಾ ಹೇಳುತ್ತಾನೆ. ಹೀಗೆ ನೂರಾರು ಅಭ್ಯರ್ಥಿಗಳ ಜೀವನದ ಜತೆ ಸರಕಾರ ಆಟವಾಡುತ್ತಿದೆ. ಈಗ ನೋಡಿದರೆ ತನಿಖಾ ವರದಿಯನ್ನೇ ಸಂಪೂರ್ಣವಾಗಿ ಕೈಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಬಾರದು.

 ಈ ಹಿಂದೆ 2011ರ ಕೆಪಿಎಸ್ಸಿ ಪರೀಕ್ಷೆಯನ್ನು ಅಂದಿನ ಸರಕಾರ ಹೇಗೆ ಹಾಳು ಮಾಡಿತ್ತು ಎಂದು ದೂರಿದರು.ಪರೀಕ್ಷೆಯಲ್ಲಿ ಯಾರು ಅಕ್ರಮ ಎಸಗಿದ್ದಾರೆ ಎಂದು ಮೊದಲು ಪತ್ತೆ ಹಚ್ಚಿ. ಅಂತವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಬಯಲಿಗೆ ಎಳೆಯಿರಿ. ಅಕ್ರಮವಾಗಿ ಪರೀಕ್ಷೆ ಬರೆದು ಪಾಸಾದವರನ್ನು ಸಂಪೂರ್ಣವಾಗಿ ಮುಂದಿನ ಯಾವುದೇ ಸರಕಾರಿ ನೌಕರಿಗೆ ಅರ್ಹರಲ್ಲ ಎಂದು ಆದೇಶ ಹೊರಡಿಸಿ. ಯಾರು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆಯೋ ಅವರ ಜೀವನದ ಜತೆ ಚಲ್ಲಾಟವಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *