ಮಧುಗಿರಿ: ಭಾವಮಾಧುರ್ಯ ಕವನ ಸಂಕಲನ ಬಿಡುಗಡೆ

 ಮಧುಗಿರಿ : ಜೀವನಾನುಭವಗಳನ್ನು ಕವಿತೆಗಳಾಗಿ ಕಟ್ಟಿಕೊಡುವ ಮೂಲಕ ಸಾಹಿತ್ಯಲೋಕಕ್ಕೆ ಕಾಲಿಟ್ಟಿರುವ  ವೀಣಾ ಶ್ರೀನಿವಾಸ್ ರವರ ಭಾವಮಾಧುರ್ಯ ಕವನ ಸಂಕಲನ ಓದುಗರ ಮನಮುಟ್ಟಲಿ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. 

ಪಟ್ಟಣದ ಕುಂಚಿಟಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭಾವಮಾಧುರ್ಯ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೀಣಾ ಶ್ರೀನಿವಾಸ್ ರವರ ಸಾಹಿತ್ಯಾಭಿರುಚಿ ಉತ್ತರೋತ್ತರ ಅಭಿವೃದ್ದಿಯಾಗಲಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ಸಾಹಿತ್ಯ ಕ್ಷೇತ್ರದಲ್ಲಿ ಮಧುಗಿರಿ ಹೆಸರು ರಾಜ್ಯಮಟ್ಟಕ್ಕೂ ವಿಸ್ತರಣೆಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಮಲನ ಮೂರ್ತಿ ಮಾತನಾಡಿ, ಬೆನ್ನು ತಟ್ಟುವ ಜನ ಇದ್ದರೆ ಬೆಳೆಯುವುದಕ್ಕೆ ಅವಕಾಶವಿದೆ. ಮಹಿಳೆಯರು ಮೈಚಳಿ ಬಿಟ್ಟು ಬರೆಯಬೇಕು. ಹೆಣ್ಣುಮಕ್ಕಳ ಸಾಹಿತ್ಯದಲ್ಲಿ ಕರುಳಿನ ಕಕ್ಕುಲತೆ ಇರುತ್ತದೆ. ಬೇರೆಯವರು ಆಡುವ ಮಾತುಗಳಿಗೆ ಬೆಚ್ಚಬಾರದು. ಬರೆಯುವುದನ್ನು ನಿಲ್ಲಿಸಬಾರದು ಎಂದರು. ಭಾವ ಮಾಧುರ್ಯ ಕವನ ಸಂಕಲನದಲ್ಲಿನ ಕವಿತೆಗಳು ಇರುಳಿನ ಬಾನಿನ ನಕ್ಷತ್ರಗಳಂತೆ ಇದ್ದು ಬಾಳಿನ ಭಾವಗೀತೆಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಮಾತನಾಡಿ, ಈ ಪುಸ್ತಕವನ್ನು ಹಿಡಿದರೆ ಒಂದು ಆಪ್ತತೆ ಮೂಡುತ್ತದೆ. ಎಲ್ಲ ಜೀವಗಳನ್ನು, ಎಲ್ಲವನ್ನೂ ಒಂದಾಗಿ ನೋಡಬೇಕು. ಜೀವಪರ ಮನಸುಗಳಿಂದ ಇಂತಹ ಚಿಂತನೆ ಸಾಧ್ಯವಾಗುತ್ತದೆ. ದಿನನಿತ್ಯದ ಬದುಕಿನ ಜಂಜಾಟದ ನಡುವೆಯೂ ಕಾವ್ಯಾಸಕ್ತಿ ಬೆಳೆಸಿಕೊಂಡು ಭಾವನೆಗಳಿಗೆ ಅಕ್ಷರ ರೂಪಕೊಟ್ಟು ಪೆÇೀಣಿಸಿರುವ ಕವಯತ್ರಿಗೆ ಶುಭವಾಗಲಿ. ಎಲ್ಲಾ ಸಹೃದಯಿ ಓದುಗರಿಗೆ ಈ ಪುಸ್ತಕ ತಲುಪಲಿ ಎಂದರು.

ಸಾಹಿತಿ ಡಾ ಬಿ.ಸಿ.ಶೈಲಾನಾಗರಾಜ್ ಮಾತನಾಡಿ, ಕವಯತ್ರಿಯಾಗಿ ಹೊರಹೊಮ್ಮಿರುವ ವೀಣಾಶ್ರೀನಿವಾಸ್ ರವರು ಜೀವಸಂವೇದನೆ ಇರುವ ಕವಿತೆಗಳಿಗೆ ಸಾಕ್ಷಿಯಾಗಿದ್ದು, ಜೀವಾರಾಧನೆ, ಪ್ರೇಮಾರಾಧನೆ, ಭಾವಾರಾಧನೆ ಮೂಲಕ ಕವಿತೆಗಳನ್ನು ಕಟ್ಟಿದ್ದಾರೆ. ಈ ಪುಸ್ತಕದಲ್ಲಿ ಭಾವನೆಗಳು ಮಧುವಿನಷ್ಟೆ ಸಿಹಿಯಾಗಿದ್ದು, ಕೃಷ್ಣನ ಪ್ರೇಮ ಮಾಧುರ್ಯ ತುಂಬಿದೆ. ಸಾಮಾಜಿಕ ಚಿಂತನೆ, ಪರಿಸರ ಕಾಳಜಿ, ಜೀವಪರ ಕಾಳಜಿ, ಜನಮುಖಿತ್ವ ಮಿಡಿತ ಕಾಣಬಹುದು ಎಂದ ಅವರು, ಪುಸ್ತಕಗಳನ್ನು ಕೊಂಡು ಓದುವ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಸಹನಾ ನಾಗೇಶ್, ಫ್ರೋ.ಡಿ.ಎಸ್ ಮುನೀಂದ್ರಕುಮಾರ್,  ನಾಟಕ ಸಂಘಟಕರಾದ ಉಗಮ ಶ್ರೀನಿವಾಸ್, ಉಪನ್ಯಾಸಕ ಎನ್.ಮಹಾಲಿಂಗೇಶ್,  ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಿಕಾ ಪುರಾಣಿಕ್, ವೀಣಾ ಶ್ರೀನಿವಾಸ್,  ಸರ್ವಙ್ನ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ರಾಮಚಂದ್ರಪ್ಪ, ಗಿರಿಸೂರ್ಯರಾಮ, ಸರ್ವಮಂಗಳಾ ಜಯರಾಂ, ವಿ.ಹೆಚ್.ವೆಂಕಟೇಶಯ್ಯ, ಕೀರ್ತಿರಾಜಣ್ಣ, ಸಾವಿತ್ರಮ್ಮ ಶಂಕರಯ್ಯ, ಬಿ.ಎಸ್.ಶ್ರೀನಿವಾಸ್, ಜಯಲಕ್ಷ್ಮಮ್ಮ,  ನೀರಕಲ್ಲು ರಾಮಕೃಷ್ಣಪ್ಪ,  ಪುರಸಭಾ ಸದಸ್ಯರಾದ ನಾರಾಯಣ್, ಎಂ.ಎಲ್.ಗಂಗರಾಜು, ನರಸಿಂಹಮೂರ್ತಿ, ಉದ್ಯಮಿ ಕೆ.ಎಂ.ಕೃಷ್ಣ, ಸಮಾಜ ಸೇವಕಿ ಗಾಯತ್ರಿನಾರಾಯಣ್, ಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸದಸ್ಯರು, ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *