TUMKUR – MADHUGIRI ಮಧುಗಿರಿ : ಶೈಕ್ಷಣಿಕ ಜಿಲ್ಲೆಯು ಶೇ.94.15 ಫಲಿತಾಂಶ ‘ಎ’ ಗ್ರೇಡ್ ಸ್ಥಾನ

ಮಧುಗಿರಿ : 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಶೇ.94.15 ಫಲಿತಾಂಶ ಗಳಿಸುವ ಮೂಲಕ ‘ಎ’ ಗ್ರೇಡ್ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಒಟ್ಟು 125497 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 11813 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.94.15 ಫಲಿತಾಂಶ ಬಂದಿದೆ. 2595 ವಿದ್ಯಾರ್ಥಿಗಳು ಎ+ ಶ್ರೇಣಿ, 3569 ವಿದ್ಯಾರ್ಥಿಗಳು ಎ ಶ್ರೇಣಿ, 2730 ವಿದ್ಯಾರ್ಥಿಗಳು ಬಿ+ ಶ್ರೇಣಿ, 1826 ವಿದ್ಯಾರ್ಥಿಗಳು ಬಿ ಶ್ರೇಣಿ, 946 ವಿದ್ಯಾರ್ಥಿಗಳು ಸಿ+ ಮತ್ತು 147 ವಿದ್ಯಾರ್ಥಿಗಳು ಸಿ ಶ್ರೇಣಿ ಪಡೆದುಕೊಂಡಿದ್ದಾರೆ. 

ಶೈಕ್ಷಣಿಕ ಜಿಲ್ಲೆಯಲ್ಲಿ ಪಾವಗಡ ತಾಲೂಕು ಶೇ 97.53ರಷ್ಟು  ಪಲಿತಾಂಶಗಳಿಸುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದು, ಮಧುಗಿರಿ ತಾಲೂಕು ಶೇ 95.92ರಷ್ಟು ಪಲಿತಾಂಶ ಪಡೆದು ಎರಡನೆ ಸ್ಥಾನ, ಕೊರಟಗೆರೆ ತಾಲೂಕು ಶೇ.92.53 ರಷ್ಟು ಪಲಿತಾಂಶ ಪಡೆದು ಮೂರನೆ ಸ್ಥಾನ ಹಾಗೂ ಶಿರಾ ತಾಲೂಕು 91.33 ರಷ್ಟು ಪಲಿತಾಂಶ ಪಡೆದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

55 ಸರ್ಕಾರಿ, 25 ಅನುದಾನಿತ, 35 ಅನುದಾನ ರಹಿತ ಸೇರಿ ಒಟ್ಟು 115 ಶಾಲೆಗಳು ಶೇ. 100 ರಷ್ಟು ಫಲಿತಾಂಶ ದಾಖಲಿಸಿದೆ. ಇದರಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಒಟ್ಟು 7 ವಿದ್ಯಾರ್ಥಿಗಳಲ್ಲಿ ಮೂವರು 624 ಅಂಕ ಮತ್ತು 4 ವಿದ್ಯಾರ್ಥಿಗಳು 623 ಅಂಕ ಗಳಿಸಿರುವುದು ವಿಶೇಷ.

ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳು –  

ಶಿರಾ ತಾಲೂಕಿನ ಬರಗೂರಿನ ಲಿಟಲ್ ರೋಸಸ್ ಆಂಗ್ಲಮಾಧ್ಯಮ ಫ್ರೌಡ ಶಾಲೆಯ ವಿದ್ಯಾರ್ಥಿನಿ ಜಿ.ಪಿ. ನಮ್ರತಾ 625 ಕ್ಕೆ 625 ಅಂಕ ಗಳಿಸುವ ಮೂಲಕ  ಪ್ರಥಮ ಸ್ಥಾನ ಗಳಿಸಿದ್ದು, ಕೊರಟಗೆರೆಯ ರೆಡ್ಡಿಕಟ್ಟೆ ಮೊರಾರ್ಜಿ ವಸತಿ ಶಾಲೆಯ ಜಿ.ಎನ್.ಹೇಮಂತ್ ಕುಮಾರ್,  ಮಧುಗಿರಿ ಚಿರೆಕ್ ಪಬ್ಲಿಕ್ ಶಾಲೆಯ ಬಿ.ಕೆ.ನಿಸರ್ಗ, ಪಾವಗಡ ತಾಲೂಕಿನ ಶ್ರೀ ಗುರುಕುಲ ಗ್ರಾಮಾಂತರ ಪ್ರೌಢಶಾಲೆಯ ಪ್ರಜ್ವಲ್ ಚೌಧರಿ ನಡೆನ್ಲ ಮತ್ತು ಕೊಡಿಗೆಹಳ್ಳಿ ಮೊರಾರ್ಜಿ ವಸತಿ ಶಾಲೆಯ ರಜಿತ, ಶಿರಾ ತಾಲೂಕಿನ ಗೌಡಗೆರೆಯ ಡಾ.ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆಯ ಟಿ.ನವ್ಯ ಕ್ರಮವಾಗಿ 624 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮಧುಗಿರಿ ಚಿರೆಕ್ ಪಬ್ಲಿಕ್ ಶಾಲೆಯ ಆರ್.ಎ.ನಿತ್ಯಶ್ರೀ, ಪಾವಗಡ  ತಾಲೂಕಿನ  ಕೋಟೆಗುಡ್ಡ ಸಹನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಚಿನ್ಮಯಿ, ಕೊಡಿಗೇಹಳ್ಳಿ  ಮೊರಾರ್ಜಿ ವಸತಿಶಾಲೆಯ  ಕೆ.ಎಂ.ಮನೋಬಿರಾಂ, ಶಿರಾ ಪಟ್ಟಣದ ಸೆಂಟ್ ಆನ್ಸ್ ಫ್ರೌಡಶಾಲೆಯ ಸಹನಾ ಆರ್.ಗೌಡ,  ಬರಗೂರು ಸರ್ಕಾರಿ ಪ್ರೌಢಶಾಲೆಯ ಭವಾನಿ.ಬಿ.ಎಸ್, ಬುಕ್ಕಪಟ್ಟಣದ ಆಕ್ಸ್ ಫರ್ಡ್ ಫ್ರೌಡಶಾಲೆಯ ಡಿ.ಆರ್. ಪೂರ್ವಿತ, ಭೂವನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಫ್ರೌಡಶಾಲೆಯ ಎನ್.ಲೇಖನ, ರಂಗನಾಥಪುರ  ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಹೆಚ್.ಎಂ.ಸೋನ 623 ಕ್ರಮವಾಗಿ ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಗಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಡಿಡಿಪಿಐ ಎಂ.ರೇವಣಸಿದ್ದಪ್ಪ ಬರ ಪೀಡಿತ ಪ್ರದೇಶವಾದ ಪಾವಗಡ ತಾಲೂಕು ಈ ಬಾರಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿಷಯ ಪರಿವೀಕ್ಷಕರು, ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರದಿಂದ ಶೇ.94.15 ರಷ್ಟು ಫಲಿತಾಂಶ ದಾಖಲಿಸಲು ಸಾಧ್ಯವಾಗಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವರದಿ:ನಾಗೇಶ್ ಜೀವಾ ಹೆಚ್ ಟಿ ಹಳ್ಳಿ.

Leave a Reply

Your email address will not be published. Required fields are marked *