ರಾಷ್ಟ್ರಪತಿ ಪದವಿಗೆ ದೇವೇಗೌಡರ ಸ್ಪರ್ಧೆ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು :  ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ  ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು ಪ್ರಸ್ತಾಪವೇ ಆಗಿಲ್ಲ ಎಂದರು.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ  ವಿಚಾರಕ್ಕೆ ಸಂಬಂಧಿಸಿದಂತೆ 

ದೆಹಲಿಯಲ್ಲಿ  ಚರ್ಚೆ ಆಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಮ್ಮ ಕುಟುಂಬದ ಬಗ್ಗೆ ಗೌರವ ಇಟ್ಟು  ಸಭೆಗೆ ಆಹ್ವಾನ ನೀಡಿದ್ದರು. 17 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಯಾವುದೇ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.  ಜೂನ್ 20ರಂದು ಮತ್ತೊಂದು ಸುತ್ತಿನ ಸಭೆ ಇದೆ. ಅಂದು ಅಭ್ಯರ್ಥಿ ಆಯ್ಕೆ ಅಂತಿಮ ಮಾಡಲಾಗುತ್ತದೆ ಎಂದು ಹೇಳಿದರು.

ದೇವೇಗೌಡರಿಗೆ ಜೀವನದಲ್ಲಿ ಒಮ್ಮೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ಬರಬೇಕು ಎಂಬ ಆಸೆ ಇದೆ. ಸ್ವತಂತ್ರ ಸರ್ಕಾರದ ಬಗ್ಗೆ ಅವರ ಆಸೆ ಪೂರೈಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆದರ ಹೊರತಾಗಿ, ರಾಷ್ಟ್ರಪತಿ ಹುದ್ದೆಯ ಬಗ್ಗೆ ದೇವೇಗೌಡರ ಒಲವು ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

*ಜನತಾ ಮಿತ್ರ ಕಾರ್ಯಕ್ರಮ:*

ಜುಲೈ 1 ರಿಂದ  17 ದಿನಗಳ ಕಾಲ ಬೆಂಗಳೂರಿನಲ್ಲಿ ಜನತಾ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಈ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. 15 LED ವಾಹನಗಳು ಬೆಂಗಳೂರಿನಲ್ಲಿ ಸಂಚಾರ ಮಾಡುತ್ತವೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಬೆಂಗಳೂರಿನ ಸಮಸ್ಯೆಗಳು, ದೇವೇಗೌಡರು, ಹಾಗೂ ನಾನು ನಗರಕ್ಕೆ ನೀಡಿದ ಕೊಡುಗೆ ಏನು? ಎಂಬುದರ ಬಗ್ಗೆ ಈ ವಾಹನಗಳ ಮೂಲಕ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್- ಬಿಜೆಪಿ ಸರ್ಕಾರದಲ್ಲಿ ಆಗಿರುವ ಅನ್ಯಾಯ, ಅಕ್ರಮ ಗೆಗಳು, ಸಮಸ್ಯೆಗಳನ್ನು ಜನರಿಗೆ ತಲುಪಿಸುವ  ಕೆಲಸ ಮಾಡುತ್ತೇವೆ. ನಿತ್ಯ ಮಳೆ ಬಂದರೆ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ಬೆಂಗಳೂರಿನಲ್ಲಿ  ನೋಡಿದ್ದೇನೆ. ಈ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ರಸ್ತೆಗಳು, ಮನೆಗಳಿಗೆ ಭೇಟಿ ಕೊಡುತ್ತೇವೆ. ಮನೆ ಮನೆಗೆ ಕರಪತ್ರ ಹಂಚಿಕೆ ಮಾಡುತ್ತೇವೆ. ನಾಗರೀಕರು, ಮಹಿಳೆಯರು, ಯುವಕರು ಏನು ನಿರೀಕ್ಷೆ ಮಾಡಿದ್ದಾರೆ ಅನ್ನುವ ಮಾಹಿತಿ ಸಂಗ್ರಹ ಮಾಡುತ್ತೇವೆ. ಜನರು ಕೊಡುವ ಸಲಹೆ ಸ್ವೀಕಾರ ಮಾಡುತ್ತೇವೆ ಎಂದು ಅವರು ಹೇಳಿದರು.

*ಬೃಹತ್ ಅಭಿಯಾನ:*

ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಸಂಚರಿಸಿ ನಮಗೆ ಒಂದು ಬಾರಿ ಅವಕಾಶ ಕೊಡಿ ಅಂತ ಅಭಿಯಾನ ಮಾಡುತ್ತೇವೆ. ಕೊನೆ ದಿನ, ಅಂದರೆ ಜುಲೈ 17ರಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ ಎಂದರು ಅವರು.

*ಈಗಲ್ ಟನ್ ಚರ್ಚೆಗೆ ಸಿದ್ಧ:*

ಈಗಲ್ ಟನ್ ರೆಸಾರ್ಟ್ ಬಾಕಿ ಇರುವ ವಿಚಾರವಾಗಿ ಎಸಿಬಿಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು; ಕಷ್ಟಪಟ್ಟು ಬೆವರು ಸುರಿಸಿದ ಹಣದಲ್ಲಿ ಗಾಲ್ಫ್ ಕ್ಲಬ್ ಮಾಡಿದ್ದಾರೆ. ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಸುಪ್ರೀಂ ಕೋರ್ಟ್ ಆದೇಶ ಮೀರಿ  ಸರ್ಕಾರ ಮತ್ತು ಸಿಎಂಗಳು ಕೆಲಸ ಮಾಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ಈಗಲ್ ಟನ್ ವಿಚಾರವಾಗಿ ಎಲ್ಲೇ ಚರ್ಚೆಗೂ ಕರೆದರೂ ಬರುತ್ತೇನೆ. ಇದರ ಬಗ್ಗೆ ನಾನು ಚರ್ಚೆ ಮಾಡುವುದಕ್ಕೆ ಸಿದ್ದ ಎಂದು ಅವರು ಹೇಳಿದರು.

*ಸವಾಲೆಸೆದ ಮಾಜಿ ಸಿಎಂ:*

ಪಿಎ ಆಗಿರೋರ ಮೇಲೆ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದರು ಕುಮಾರಸ್ವಾಮಿ ಅವರು.

ನಿವೇಶನ ಹಂಚಿಕೆ ಆಗಿರುವುದು 2003ರಲ್ಲಿ. ಆಗ ಅವರು ನನ್ನ ಪಿಎ ಆಗಿದ್ರಾ? ಕಾಂಗ್ರೆಸ್ ಕಾಲದಲ್ಲಿ ಈ ಘಟನೆ ಆಗಿರೋದು. ನಾನು ನಿವೇಶನ ಹಂಚಿಕೆ ಮಾಡಿಲ್ಲ. ಅ ಹೆಣ್ಣು ಮಗಳು ಯಾಕೆ ಹೇಳಿಕೆ ಕೊಟ್ಟಳು ಗೊತ್ತಿಲ್ಲ. ನನ್ನ ಬಳಿ ಆಕೆ ಬಂದಿದ್ದರೆ ನಾನೇ ಮಾತಾಡುತ್ತಿದ್ದೆ. ಚನ್ನಪಟ್ಟಣದಲ್ಲಿ ಯಾವುದೇ ಕಾನೂನು ಬಾಹಿರ ಕೆಲಸಕ್ಕೆ ನಾನು ಪ್ರೋತ್ಸಾಹ  ನೀಡಿಲ್ಲ. ಅತಂಹ ಪ್ರಕರಣ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ, ನಿವೃತ್ತಿ ಪಡೆಯುತ್ತೇನೆ ಎಂದು ಅವರು ಸವಾಲು ಹಾಕಿದರು.

ಆ ನಂತರ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಪಕ್ಷದ ಕೆಲ ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *