ಮಾಸಿಕ ಪಾಸುಗಳನ್ನು ಕ್ಯಾಲೆಂಡರ್ ಮಾಹೆಗನುಗುಣವಾಗಿ ವಿತರಣೆ

ಬೆಂಗಳೂರು, ಜೂನ್ 29, (ಕರ್ನಾಟಕ ವಾರ್ತೆ) : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ಮಾಸಿಕ ಪಾಸು, ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸು, ವಜ್ರ ಮತ್ತು ವಾಯುವಜ್ರ ಮಾಸಿಕ ಪಾಸುಗಳನ್ನು ಕ್ಯಾಲೆಂಡರ್ ಮಾಹೆಗನುಗುಣವಾಗಿ, ಅವಶ್ಯಕತೆಗೆ ತಕ್ಕಂತೆ ಮಾಸಿಕ ಪಾಸುಗಳನ್ನು ಪಡೆಯಲು ಅನುವಾಗುವಂತೆ ದಿನಾಂಕವಾರು ಮಾಸಿಕ ಪಾಸುಗಳನ್ನು ಜುಲೈ 29, 2022 ರಿಂದ ಅನ್ವಯವಾಗುವಂತೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರಯಾಣಿಕರು ದಿನಾಂಕವಾರು ಮಾಸಿಕ ಪಾಸುಗಳನ್ನು ಪಾಸು ಪಡೆದ ದಿನಾಂಕದಿಂದ ಒಂದು ತಿಂಗಳು ಮಾನ್ಯತೆ ಇರುವಂತೆ ಪಡೆಯಬಹುದಾಗಿದೆ.  ಸಂಸ್ಥೆಯು ಮಾಸಿಕ ಪಾಸಿನೊಂದಿಗೆ ಸಂಸ್ಥೆಯ ಗುರುತಿನ ಚೀಟಿಯನ್ನು ಹೊಂದುವುದನ್ನು ನಿಗದಿಪಡಿಸಲಾಗಿತ್ತು ಆದರೆ ಜುಲೈ -2022ರಿಂದ ಸಂಸ್ಥೆಯ ಗುರುತಿನ ಚೀಟಿಯನ್ನು ಹಿಂಪಡೆಯಲಾಗುವುದು. ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯ ಮಾಸಿಕ ಪಾಸುಗಳನ್ನು ಪಡೆಯಲು ಹಾಗೂ ಪ್ರಯಾಣಿಸುವಾಗ ಪಾಸಿನೊಂದಿಗೆ, ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಗುರುತಿನ ಚೀಟಿ (ಮಾನ್ಯತಾ ಅವಧಿ ಹೊಂದಿರುವವರೆಗೆ) ಇವುಗಳಲ್ಲಿ ಯಾವುದಾದರೂ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು.

ಪಾಸ್ ವಿತರಣೆ ಮಾಡುವಾಗ ಪ್ರಯಾಣಿಕರು ಹಾಜರುಪಡಿಸುವ ಗುರುತಿನ ಚೀಟಿಯ ಸಂಖ್ಯೆಯನ್ನು ಪಾಸಿನಲ್ಲಿ ನಮೂದಿಸಿ ವಿತರಣೆ ಮಾಡಲಾಗುವುದು. ಪ್ರಯಾಣಿಕರು ಪಾಸಿನಲ್ಲಿ ನಮೂದಿಸಿದ ಗುರುತಿನ ಚೀಟಿಯನ್ನು ಹೊಂದಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಕಡ್ಡಾಯವಾಗಿರುತ್ತದೆ.

ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಮಾಸಿಕ ಪಾಸುಗಳು ದೊರಕಲು ಅನುವಾಗುವಂತೆ ಸಂಸ್ಥೆಯ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳಲ್ಲಿ ಒಟ್ಟು 72 ಸ್ಥಳಗಳಲ್ಲಿ ದಿನಾಂಕವಾರು ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. 90 ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನ ಖಾಸಗಿ ಏಜೆನ್ಸಿಗಳ ಮೂಲಕ ದಿನಾಂಕವಾರು ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ ಎಂದು  ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *