ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಪಾವತಿಸುವ ಸಹಾಯಧನ ನೇರ ನಗದು ಮೂಲಕ ವರ್ಗಾವಣೆಗೆ ಕ್ರಮ

ಬೆಂಗಳೂರು, ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ) : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಕಾರ್ಯಕ್ರಮಗಳನ್ನು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಹಾಗೂ ವಿವಿಧ ಸೌಲಭ್ಯಗಳಡಿಯಲ್ಲಿ ಸಹಾಯಧನಗಳನ್ನು ನೀಡಲಾಗುತ್ತಿದೆ. ಮಂಡಳಿಯ ವತಿಯಿಂದ ಶೈಕ್ಷಣಿಕ ವಿದ್ಯಾರ್ಥಿವೇತನ ಸೇರಿದಂತೆ ಇತರೆ ಸೌಲಭ್ಯಗಳ ವಿತರಣೆಯನ್ನೂ ಸಹ ಪಾರದರ್ಶಕವಾಗಿ ನೇರ ನಗದು ವರ್ಗಾವಣೆ (DBT) ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ, ಕೆಲವು ಅನಾಮಧೇಯ ವ್ಯಕ್ತಿಗಳು ತಾವು ಕೆಲಸ ಮಾಡಿಸಿಕೊಡುತ್ತೇವೆಂದು ಹೇಳಿ ನಿಯಮ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ದೂರುಗಳು ಕೇಳಿ ಬಂದಿರುತ್ತವೆ, ಅಲ್ಲದೆ ಕೆಲವು ಪತ್ರಿಕೆಗಳಲ್ಲ್ಲಿ ಕೂಡ ವರದಿಯಾಗಿರುತ್ತವೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಕಾರ್ಮಿಕರಿಗೆ ದೊರಕಬಹುದಾದ ಎಲ್ಲಾ ಸೌಲಭ್ಯಗಳನ್ನು ಪಾರದರ್ಶಕವಾಗಿ ಕಾಲಮಿತಿಯೊಳಗೆ ತಲುಪಿಸುವ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಹೀಗಾಗಿ, ಕಟ್ಟಡ ಕಾರ್ಮಿಕರು ಇಂತಹ ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಶೋಷಣೆಗೆ ಒಳಗಾಗಬಾರದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ / ಮಂಡಳಿಯ ಕೇಂದ್ರ ಕಛೇರಿ ಅಥವಾ ಕಾರ್ಮಿಕ ಸಹಾಯವಾಣಿ 155214 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *