ವಿದ್ಯಾರ್ಥಿ ದೆಸೆಯಿಂದಲೇ ಆತ್ಮವಿಶ್ವಾಸ, ಸಮಯಪಾಲನೆಗೆ ಒತ್ತು ನೀಡಬೇಕು.

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ಯಾವುದೇ ಸೋಲಿನಿಂದ ಮನಸ್ಸು ಕುಗ್ಗಬಾರದು. ನಪಾಸೆಂಬುದನ್ನು ಹೊಸ ಕಲಿಕೆಗೆ ಮೊದಲ ಹೆಜ್ಜೆಯನ್ನಾಗಿ ಸ್ವೀಕರಿಸಬೇಕು. ಸೋಲೆಂಬುದನ್ನು ಹೊಸ ಕ್ಷೇತ್ರದಲ್ಲಿನ ಸಾಧನೆಗೆ ಮೆಟ್ಟಿಲನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಕಮ್ಯುನಿಟಿ ಸರ್ವೀಸ್‌ನ ಲೆಫ್ಟಿನೆಂಟ್ ಗವರ್ನರ್ ವಿ.ಆರ್.ರಮೇಶ್ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ವಿಜಯಪುರ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ, ವಾಶ್ ಇನ್ ಹ್ಯಾಂಡ್ಸ್ ಯೋಜನೆಯಡಿ ನಿರ್ಮಿಸಿರುವ ವಾಶ್ ಬೇಸಿನ್‌ಗಳ ಹಸ್ತಾಂತರ, ನೆಲಕ್ಕೆ ಟೈಲ್ಸ್ ಹಾಕಿರುವ ನಲಿಕಲಿ ಕೊಠಡಿಯ ಆರಂಭೊತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಆತ್ಮವಿಶ್ವಾಸ, ಸಮಯಪಾಲನೆ, ಗುರುಹಿರಿಯರಲ್ಲಿ ಗೌರವಾಧರ ಗುಣಗಳು ವೃದ್ಧಿಯಾಗಬೇಕು. ಗ್ರಾಮೀಣಭಾಗದ ವಿದ್ಯಾರ್ಥಿಗಳು ನಗರಪ್ರದೇಶದಲ್ಲಿ ಕಲಿತ ವಿದ್ಯಾರ್ಥಿಗಳಷ್ಟೇ ಮೇಲ್ಮಟ್ಟದ ಶಿಕ್ಷಣವನ್ನು ಪಡೆಯುವಂತಹ ಸವಲತ್ತುಗಳು ಎಲ್ಲೆಡೆ ಸಿಗಬೇಕಿದೆ ಎಂದರು.

ರೋಟರಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಂಗಮಕೋಟೆ ವೃತ್ತಭಾಗದಲ್ಲಿ ವಿದ್ಯಾಥಿಗಳ ವಿಜ್ಞಾನ ಶಿಕ್ಷಣಕ್ಕೆ ಮತ್ತಷ್ಟು ಒತ್ತು ಸಿಗಬೇಕಿದ್ದು, ರೋಟರಿಯ ಲಿಟರಸಿ ಯೋಜನೆ ಮತ್ತು ಸಿಎಸ್‌ಆರ್ ಅನುದಾನಗಳಡಿ ಸುಸಜ್ಜಿತ ಗ್ರಾಮೀಣವಿಜ್ಞಾನ ಕೇಂದ್ರವೊಂದನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ರೋಟರಿ ಸೇವಾಕಾರ್ಯಗಳು ಇತರರಿಗೆ ಮಾದರಿಯಾಗಿದ್ದು, ಶಿಡ್ಲಘಟ್ಟ ತಲೂಕಿನ ಅನೇಕ ಶಾಲೆಗಳಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಸುಗಟೂರು ಶಾಲೆಯನ್ನು ದಾನಿಗಳ ಸಹಕಾರದಲ್ಲಿ ಮಾದರಿಶಾಲೆಯನ್ನಾಗಿ ಪರಿವರ್ತಿಸಿದ್ದು ರೋಟರಿಯು ಇನ್ನಷ್ಟು ಅಭಿವೃದ್ಧಿಪಡಿಸಲು ಕೈಜೋಡಿಸಬೇಕು. ಸುಗಟೂರು ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ರಾಷ್ಟ್ರಮಟ್ಟದಲ್ಲಿಯೂ ಹೆಸರುಮಾಡಿರುವುದು ಸಂತೋಷದ ಸಂಗತಿ ಎಂದರು.

*ವಿವಿಧ ಸವಲತ್ತು ವಿತರಣೆ* : ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ರೋಟರಿ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಬೆಂಗಳೂರು ರೋಟರಿ ಪಶ್ಚಿಮ ವತಿಯಿಂದ ಶಾಲೆಗೆ ೧೦ ಸಾವಿರ ರೂ. ವೆಚ್ಚದ ಕಲಿಕಾಸಾಮಗ್ರಿಗಳನ್ನು ನೀಡಲಾಯಿತು. ರೋಟರಿ ವತಿಯಿಂದ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.

ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಸಿಆರ್‌ಪಿ ಎಂ.ರಮೇಶ್‌ಕುಮಾರ್, ಬೆಂಗಳೂರು ರೋಟರಿ ಪಶ್ಚಿಮ ಕ್ಲಬ್‌ನ ಮಾಜಿ ಅಧ್ಯಕ್ಷ ವೆಂಕಟನಾರಾಯಣ್, ಬಿಆರ್‌ಸಿಯ ಸಂಪನ್ಮೂಲವ್ಯಕ್ತಿ ಬಿ.ಎಂ.ಜಗದೀಶ್‌ಕುಮಾರ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್, ಎಂ.ನಾಗರಾಜು, ಶಿವಶಂಕರಪ್ಪ, ವಿಜಯಪುರ ರೋಟರಿ ಕಾರ್ಯದರ್ಶಿ ಎಸ್.ಮಹೇಶ್, ಖಜಾಂಚಿ ಎನ್.ರುದ್ರಮೂರ್ತಿ, ಮಾಜಿ ಅಧ್ಯಕ್ಷ ಎಸ್.ಬಸವರಾಜು, ನಿಯೋಜಿತ ಅಧ್ಯಕ್ಷೆ ಎ.ಎಂ.ಮಂಜುಳ, ಎಂ.ಗಿರಿಜಾಂಬ, ಎಸ್‌ಡಿಎಂಸಿ ಸದಸ್ಯ ನಾರಾಯಣಸ್ವಾಮಿ, ಎಸ್.ಎಲ್.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮಸ್ಥರಾದ ದೊಡ್ಡಮುನಿವೆಂಕಟಶೆಟ್ಟಿ, ಚಿಕ್ಕಮುನಿವೆಂಕಟಶೆಟ್ಟಿ, ಬಚ್ಚೇಗೌಡ, ಸತೀಶ್, ಮತ್ತಿತರರು ಹಾಜರಿದ್ದರು.


Leave a Reply

Your email address will not be published. Required fields are marked *