ಉತ್ತಮ ಶೌಚಾಲಯಗಳ ನಿರ್ಮಾಣದ ಮೂಲಕ ಅತ್ಯುತ್ತಮ ಸ್ವಚ್ಛ ಜೀವನ ನಿರ್ವಹಣೆಯ ಗುರಿ

ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ): ಸಾರ್ವಜನಿಕ ಶೌಚಾಲಯಗಳನ್ನು ಉನ್ನತೀಕರಿಸುವ ಮೂಲಕ ಪ್ರತಿ ನಾಗರಿಕರು ಉತ್ತಮ ಶೌಚಾಲಯಗಳನ್ನು ಬಳಸುವಂತಾಗಬೇಕು ಮತ್ತು ಸುಲಭವಾಗಿ ಪ್ರತಿಯೊಬ್ಬರಿಗೂ ಸಿಗುವಂತಿರಬೇಕು ಎನ್ನುವ ಗುರಿಯೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ 2.0 ವನ್ನು ಆಚರಿಸಲಾಗುತ್ತಿದೆ ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ಧೀಪ್ ಸಿಂಗ್ ಪುರಿ ಅವರು ತಿಳಿಸಿದರು.

ಅವರು ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ರಾಜ್ಯ ಪೌರಾಡಳಿತ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶೌಚಾಲಯ ದಿನಾಚರಣೆ 2.0 ಗೆ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2013 ರ ರಲ್ಲಿ ವಿಶ್ವಸಂಸ್ಥೆ “ವಿಶ್ವ ಶೌಚಾಲಯ ದಿನ”ವನ್ನು ಘೋಷಿಸಿದಾಗ ನಮ್ಮ ದೇಶದಲ್ಲಿ ಪಟ್ಟಣ ಪ್ರದೇಶಕ್ಕೆ ಮಾತ್ರ ಶೌಚಾಲಯಗಳು ಮೀಸಲಿದ್ದವು, ಸ್ವಚ್ಚತೆಗೆ ಮೊದಲ ಆದ್ಯತೆ ನೀಡುವ ಮೂಲಕ ಇಂದು ಬಹುತೇಕ ಮನೆಗಳು ಶೌಚಾಲಯಗಳನ್ನು ಹೊಂದಿವೆ ಎಂದು ಹೇಳಿದರು.

ಭಾರತದಲ್ಲಿ 2014 ರಲ್ಲಿ ಕೇವಲ 18% ಜನರು ಮಾತ್ರ ಶೌಚಾಲಯ ಬಳಸುತ್ತಿದ್ದರು, ಸ್ವಚ್ಚತೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಸ್ವಚ್ಚ ಭಾರತ್ ಸೇರಿದಂತೆ ಕೇಂದ್ರದ ಇತರೆ ಯೋಜನೆಗಳಿಂದಾಗಿ ಇಂದು ದೇಶದ ಶೇ 74% ರಷ್ಟು ಜನರು ಶೌಚಾಲಯಗಳನ್ನು ಹೊಂದಿದ್ದಾರೆ.

ಇಂದು ಮಾನವ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಸರ್ಜಿಸುವ ಮತ್ತು ಸಂಸ್ಕರಿಸುವ ನೈರ್ಮಲ್ಯ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ ಶೌಚಾಲಯಗಳನ್ನು ಪ್ರತಿಯೊಬ್ಬರೂ ಬಳಸುವಂತಾಗಬೇಕು ಎನ್ನುವ ಗುರಿಯೊಂದಿಗೆ ಇಂದು ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನೈರ್ಮಲ್ಯ ಮತ್ತು ಅಂತರ್ಜಲದ ನಡುವಿನ ಸಂಬಂಧವನ್ನು ಕಡೆಗಣಿಸಲಾಗುವುದಿಲ್ಲ.

ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಹಾಗೂ ಉತ್ತಮವಾಗಿ ನಿರ್ವಹಿಸಲು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಾರ್ವಜನಿಕರು ಸೇರಿದಂತೆ ಖಾಸಗಿ ಸಂಸ್ಥೆಗಳು ಸಹ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು.

ಬದಲಾಗುತ್ತಿರುವ ಭಾರತದಲ್ಲಿ ನಗರಗಳು ವೇಗವಾಗಿ ಬೆಳೆಯುತ್ತಿವೆ. ನಗರಗಳು ಜನಸಾಂದ್ರತೆಯಿಂದ ತುಂಬುತ್ತಿವೆ. ನವೀನ ತಂತ್ರಜ್ಞಾನದ ಮೂಲಕ ಭಾರತದ ಪ್ರತಿಯೊಂದು ನಗರವನ್ನು 2026 ರ ವೇಳೆಗೆ ಕಸ ಮುಕ್ತ ನಗರಗಳನ್ನಾಗಿ ನಿರ್ಮಿಸಲು ಪಣ ತೊಡಲಾಗಿದೆ.

2022 ರ ವಿಶ್ವ ಶೌಚಾಲಯ ದಿನವನ್ನು ಅರ್ಥಗರ್ಭಿತವಾಗಿ ಆಚರಿಸಲು ಗ್ರಾಮೀಣ ಮಟ್ಟದಲ್ಲಿ ಭಾರತದಾದ್ಯಂತ ‘ಸ್ವಚ್ಛತಾ ರನ್’ ಆಯೋಜಿಸುತ್ತಿದೆ. ರಾಜ್ಯಗಳು, ಸ್ಥಳೀಯ ನಾಯಕರು, ಸ್ವಚ್ಛಗ್ರಾಹಿಗಳು, ಆಶಾ ಕಾರ್ಯಕರ್ತರು, ಸ್ವಯಂಸೇವಕರು, ಯುವಕರು, ಶಾಲಾ ಮಕ್ಕಳು ಮತ್ತು ಸ್ಥಳೀಯ ಜಾನಪದ ಕಲಾವಿದರು ಸೇರಿದಂತೆ ಗ್ರಾಮ ಪಂಚಾಯತ್ (ಜಿಪಿ) ಮಟ್ಟದಲ್ಲಿ “ಸ್ವಚ್ಛತಾ ಓಟ” ನಡೆಸಲಾಗುತ್ತಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಶ್ರೀಮತಿ ರೂಪ ಮಿಶ್ರಾ ಅವರು ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಕೋರಿ ಮಾತನಾಡಿ ವಿಶ್ವ ಶೌಚಾಲಯ ದಿನಾಚರಣೆ 2.0 ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಯೋಜನೆ ಹಾಗೂ ಗುರಿಗಳ ಬಗ್ಗೆ ವಿವರಿಸಿದರು.

2013 ರಿಂದ ವಾರ್ಷಿಕವಾಗಿ ನಡೆಯುವ ಈ ಜಾಗತಿಕ ಆಚರಣೆಯು ಶೌಚಾಲಯ ವ್ಯವಸ್ಥೆಯನ್ನು ಉತ್ತಮಗೊಳಿಸುವತ್ತ ಆಚರಿಸುತ್ತದೆ ಮತ್ತು ನೈರ್ಮಲ್ಯದ ಪ್ರವೇಶವಿಲ್ಲದೆ ವಾಸಿಸುವ ಜನರಿಗೆ ಜಾಗೃತಿ ಮೂಡಿಸುತ್ತದೆ. 2022 ರ ವಿಷಯವು ‘ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು’ ಮತ್ತು ಅಸಮರ್ಪಕ ನೈರ್ಮಲ್ಯ ವ್ಯವಸ್ಥೆಗಳು ಮಾನವ ತ್ಯಾಜ್ಯವನ್ನು ನದಿಗಳು, ಸರೋವರಗಳು ಮತ್ತು ಮಣ್ಣಿನಲ್ಲಿ ಹೇಗೆ ಹರಡುತ್ತವೆ, ಭೂಗತ ಜಲ ಸಂಪನ್ಮೂಲಗಳನ್ನು ಕಲುಷಿತಗೊಳಿಸುತ್ತವೆ ಎಂಬುದನ್ನು ಪರಿಶೋಧಿಸುತ್ತದೆ.

  ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ವಿಶ್ವದ ಅತಿದೊಡ್ಡ ಸಾರ್ವಜನಿಕ ನಡವಳಿಕೆ ಬದಲಾವಣೆ ಕಾರ್ಯಕ್ರಮವೆಂದು ಗುರುತಿಸಲ್ಪಟ್ಟಿದೆ. ಶೌಚಾಲಯದ ಬಳಕೆಯ ಪ್ರಾಮುಖ್ಯತೆ, ಸುರಕ್ಷಿತ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಶೌಚಾಲಯ ದಿನಾಚರಣೆ 2.0 ಜಾಗೃತಿ ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ಭಾರತದ ಶೌಚಾಲಯ ವ್ಯವಸ್ಥೆ ನಡೆದು ಬಂದ ಹಾದಿ ಕುರಿತು ಅಕ್ಷಯ್ ರಾವತ್ ಅವರು ವಿಷಯ ಮಂಡಿಸಿದರು. ಇಂದು ದಿನಪೂರ್ತಿ ಶೌಚಾಲಯ ಕುರಿತಂತೆ ವಿವಿಧ ವಿಷಯ ತಜ್ಞರು ತಮ್ಮ ವಿಷಯ ಮಂಡನೆಯನ್ನು ಮಾಡಲಿದ್ದಾರೆ. ಶೌಚಾಲಯಗಳ ಕುರಿತಂತೆ ವಿವಿಧ ವಿಷಯಗಳ ಕುರಿತು ಸಂಬಂಧಿಸಿದ ಸಂಸ್ಥೆಗಳು ಹಮ್ಮಿಕೊಳ್ಳಲಾಗಿದ್ದ ವಸ್ತುಪ್ರದರ್ಶನ ಮಳಿಗೆಯನ್ನು ತೆರೆಯಲಾಗಿತ್ತು.

 ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *