ಇ-ಶ್ರಮ್ ಯೋಜನೆ ಸೌಲಭ್ಯ ಪಡೆಯಲು ನೋಂದಣಿ ಅಗತ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ

ಚಿಕ್ಕಬಳ್ಳಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದೇ ಸೂರಿನಡಿ  ಹಲವು  ಅವಕಾಶ ಕಲ್ಪಿಸುವ ಇ-ಶ್ರಮ್ ಯೋಜನೆಯಡಿ ನೋಂದಣಿ ಕುರಿತು ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಚಾರಿ  ವಾಹನಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ  ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ರವರು ಸಂಚಾರಿ  ವಾಹನಕ್ಕೆ ಚಾಲನೆ ನೀಡಿದರು. 

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇ-ಶ್ರಮ್ ಯೋಜನೆಯ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು. 

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ,  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗುವ ವಿಧಾನ ಮತ್ತು ಸೌಲಭ್ಯಗಳ ಬಗ್ಗೆ ಹಾಗೂ ಇ-ಶ್ರಮ್ ಯೋಜನೆಯ ಬಗ್ಗೆ ಜಿಲ್ಲೆಯಾದ್ಯಂತ 14 ದಿನಗಳ ಕಾಲ ವಾಹನವು ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದೆ ಎಂದರು. 

ಅರ್ಹ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ಇ.ಎಸ್.ಐ ಮತ್ತು ಪಿ.ಎಫ್ ಸದಸ್ಯರಾಗಿರದ ಹಾಗೂ ಆದಾಯ ತೆರಿಗೆ ಪಾವತಿಸದ ಸುಮಾರು 379 ವರ್ಗಗಳ ಅಸಂಘಟಿತ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ “ಇತರೆ ವರ್ಗಗಳ” ಅಸಂಘಟಿತ ಕಾರ್ಮಿಕರು ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ) ಮೂಲಕ  ಅಥವಾ ಆನ್ಲೈನ್ ನಲ್ಲಿ   ಸ್ವಯಂ ನೋಂದಣಿ ಆಗಬಹುದು ಅಥವಾ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಸದರಿ ಯೋಜನೆಯಡಿ ನೋಂದಾಯಿಸಿ ಈ  ಯೋಜನೆಯ  ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು.   

ಕಾರ್ಮಿಕ ಅಧಿಕಾರಿ ಆರ್. ವರಲಕ್ಷ್ಮೀ ಅವರು ಮಾತನಾಡಿ, ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ನೋಂದಣಿಗೆ ಸಂಬಂಧಿಸಿದಂತೆ ಇ-ಶ್ರಮ್ ಯೋಜನೆಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ದರ್ಜಿಗಳು, ಬೀದಿ ಬದಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ರಿಕ್ಷಾ ಎಳೆಯುವವರು, ಬಿಸಿ ಊಟ ಕಾರ್ಮಿಕರು, ನರೇಗಾ ಕಾರ್ಮಿಕರು, ಇಟ್ಟಿಗೆ ಮಾಡುವವರು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 156 ವರ್ಗಗಳ ಕಾರ್ಮಿಕರು ಹಾಗೂ ಪಟ್ಟಿಯಲ್ಲಿ ಸೇರಿರದ ಅಸಂಘಟಿತ ಕಾರ್ಮಿಕರು “ಇತರೆ ವರ್ಗ”ಗಳಡಿ ನೋಂದಣಿಯಾಗಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.  

ಇ-ಶ್ರಮ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಅಸಂಘಟಿತ ಕಾರ್ಮಿಕರಾಗಿರಬೇಕು, ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇಎಸ್‌ಐ ಫಲಾನುಭವಿಯಾಗಿರಬಾರದು. 16 ರಿಂದ 59 ವಯೋಮಾನದವರಾಗಿರಬೇಕು. ಸದರಿ ಯೋಜನೆಯಡಿ ನೊಂದಣಿಯಾಗಲು ಅವಶ್ಯಕ ದಾಖಲೆಗಳು ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ನೀಡತಕ್ಕದ್ದು ಎಂದು ಹೇಳಿದರು. 

ಇ-ಶ್ರಮ್ ಯೋಜನೆಯ ಪ್ರಯೋಜನೆಗಳು

ಸಾಮಾಜಿಕ  ಭದ್ರತೆ ಮತ್ತು ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಅನುಕೂಲ. ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕ. ಇ-ಶ್ರಮ್‌ನಲ್ಲಿ ನೊಂದಾಯಿಸಿಕೊಂಡರೆ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ  ಅಂಗವೈಕಲ್ಯ  ಹೊಂದಿದಲ್ಲಿ ರೂ.2 ಲಕ್ಷ ರೂ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ರೂ.1 ಲಕ್ಷ ರೂ ಪರಿಹಾರ ಪಡೆಯಬಹುದಾಗಿರುತ್ತದೆ. ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್-19ರ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ ಅರ್ಹ ಕಾರ್ಮಿಕರಿಗೆ ನೆರವು ನೀಡಲು ಸಹ  ದತ್ತಾಂಶವನ್ನು ಬಳಸಿಕೊಳ್ಳಬಹುದಾಗಿದೆ.

ಇ-ಶ್ರಮ್ ನೊಂದಣಿಯು ಉಚಿತವಾಗಿದ್ದು, ನೋಂದಣಿಗಾಗಿ ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿಎಸ್‌ಸಿ) ಭೇಟಿ ಮಾಡುವುದು ಅಥವಾ ಇ-ಶ್ರಮ್ ಪೋರ್ಟಲ್ www.eshram.gov.in  ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಹಾಗೂ ನೊಂದಾಯಿತ ಕಾರ್ಮಿಕರು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು (UAN) ಪಡೆಯಬಹುದಾಗಿದ್ದು, ಇದು ದೇಶದಾದ್ಯಂತ ಹಾಗೂ ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ. ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು (CSC) ಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಇ-ಶ್ರಮ್ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ನೊಂದಣಿ ಮಾಡಿಸಿ, ಸದರಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. 

ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ; ಜಿಎ-3, ನೆಲಮಹಡಿ. ಜಿಲ್ಲಾಡಳಿತ ಭವನ, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ ಹಾಗೂ ಎಲ್ಲಾ ತಾಲ್ಲೂಕು ವ್ಯಾಪ್ತಿಯ ಕಾರ್ಮಿಕ ನಿರೀಕ್ಷಕರುಗಳ ಕಚೇರಿ ಹಾಗೂ ಕಾರ್ಮಿಕ ಸಹಾಯವಾಣಿ-155214, ಇ-ಶ್ರಮ್ ಸಹಾಯವಾಣಿ-14434 ಗೆ ಸಂಪರ್ಕಿಸಬಹುದು. 

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು, ಅಸಂಘಟಿತ ಕಾರ್ಮಿಕರ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *