ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ವನ್ನು ಕಾನೂನು ಮಾಡಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ

ಬೆಂಗಳೂರು : ಅಂತೂ ಇಂತು ಸರಕಾರ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ವನ್ನು ಉಭಯ ಸದನದಲ್ಲಿ ಅಂಗಿಕಾರ ಮಾಡುವ ಮೂಲಕ ಕಾನೂನು ರಚನೆಮಾಡಿ, ಕನ್ನಡ ನಾಡಿನಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆ ಮಾಡಲು ಮುಂದಾಗಿರುವ ಕ್ರಮ ಸ್ವಾಗತಾರ್ಹ. ಹಾವೇರಿಯಲ್ಲಿ ನಡೆದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಣಯಗಳಲ್ಲೊಂದಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ವನ್ನು ಕಾನೂನು ಮಾಡಬೇಕೆನ್ನುವುದನ್ನು ಅನುಷ್ಠಾನಕ್ಕೆ ತರಲಾಗಿದೆ. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳ ಜೊತೆ ಕನ್ನಡಿಗರ ಕಲ್ಯಾಣಕ್ಕಾಗಿ ಸಿದ್ಧವಾಗುತ್ತಿರುವ ಕಾನೂನಿಗೆ ಕನ್ನಡ ಸಾಹಿತ್ಯ ಪರಿಷತ್ತು ಗೌರವಪೂರ್ವಕ ಸ್ವಾಗತ ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಭಾರತ ಸಂವಿಧಾನದ ಅನುಚ್ಛೇದ ೩೪೫ರ ಪ್ರಕಾರ ರಾಜ್ಯದಲ್ಲಿ ಅಧಿಕೃತ ಅಥವಾ ಇತರೆ ಉದ್ಧೇಶಕ್ಕಾಗಿ ಯಾವುದಾದರೂ ಒಂದು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿಸಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ನಮ್ಮ ನಾಡಿನಲ್ಲಿ ಕನ್ನಡ ಭಾಷೆಯನ್ನು ನಮ್ಮ ನಾಡಿನ ಅಧಿಕೃತ ಭಾಷೆಎಂದು ಬಳಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಭಾಷೆಗೆ ದಯನೀಯ ಪರಿಸ್ಥಿತಿ ಬಂದಿರುವುದರಿಂದ ನಮ್ಮ ನಾಡಿನಲ್ಲಿ ಕನ್ನಡವನ್ನು ಸಮರ್ಥವಾಗಿ ಅನುಷ್ಠಾನ ಮಾಡುವ ಹಿನ್ನೆಲೆಯಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼನ್ನು ಜಾರಿ ಮಾಡಬೇಕೆಂದು ʻಕನ್ನಡ ಸಾಹಿತ್ಯ ಪರಿಷತ್ತುʼ ನಿರಂತರ ಒತ್ತಡ ತರುತ್ತಲೇ ಇತ್ತು ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಉಭಯ ಸದನದಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼನ್ನು ಸರ್ವಾನು ಮತದಿಂದ ಅಂಗೀಕಾರ ಮಾಡಲಾಗಿದೆ. ಈ ವಿಧೇಯಕ ಇನ್ನೇನು ರಾಜ್ಯಪಾಲರ ಅಂಕಿತದ ನಂತರ ಕಾನೂನು ಆಗಿ ರಾಜ್ಯದಲ್ಲಿ ಜಾರಿಯಾಗಲಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆ, ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡ ಭಾಷೆ ಅಳವಡಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿರುವುದು ಸಾಗತಾರ್ಹ. ಉನ್ನತ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದಲ್ಲಿ ಅನ್ಯರಾಜ್ಯಗಳಲ್ಲಿ ಕನ್ನಡ ಭಾಷೆಯಲ್ಲಿ ಶಿಕ್ಷಣ ಮಾಡಿದ ಅಭ್ಯರ್ಥಿಗಳಿಗೆ ಶೇಕಡಾವಾರು ಪ್ರಮಾಣದಲ್ಲಿ ಮೀಸಲಾತಿ ನೀಡುವಂತೆ ಕಾನೂನು ರಚಿಸಿರುವುದು ಅನ್ಯ ರಾಜ್ಯದಲ್ಲಿ ನೆಲೆ ನಿಂತ ಕನ್ನಡಿಗರಿಗೆ ಕನ್ನಡ ಭಾಷೆಯ ಮೇಲೆ ಅಭಿಮಾನ ಉಂಟುಮಾಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡವನ್ನು ಅನ್ನದ ಭಾಷೆಯಾಗಿ ಮಾರ್ಪಾಡು ಮಾಡುವ ಹಿನ್ನೆಲೆಯಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡುವಂತೆ ಕಾನೂನು ಸಿದ್ದಪಡಿಸಬೇಕು. ಆಗ ಮಾತ್ರ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಸರಕಾರದ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸಲಾಗಿದ್ದು ಉತ್ತಮ ಬೆಳವಣಿಗೆ. ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನ ಮಾಡುವುದಕ್ಕೆ ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಅಥವಾ ಅಧಿವಿಚಾರಣಾ ನ್ಯಾಯಾಲಯಗಳಲ್ಲಿ ಸಂದರ್ಭಾನುಸಾರ ಮತ್ತು ನ್ಯಾಯಾಧಿಕರಣಗಳಲ್ಲಿ ತಮ್ಮ ಕಲಾಪಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸತಕ್ಕದ್ದು ಹಾಗೂ ಆದೇಶ ಮತ್ತು ತೀರ್ಪುಗಳನ್ನು ಕನ್ನಡ ಭಾಷೆಯಲ್ಲಿಯೇ ಘೋಷಿಸತಕ್ಕದ್ದು ಎಂದು ಕಾನೂನಿನಲ್ಲಿ ರೂಪಿತವಾಗಿರುವುದ ಸ್ವಾಗತಾರ್ಹವಾಗಿರುವ ಸಂಗತಿ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.

ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತ್ಯೇಕ ಕ್ರಮಗಳನ್ನು ಕಾನೂನಿನಲ್ಲಿ ಅಳವಡಿಸುವುದರ ಜೊತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಕಡ್ಡಾಯ ಮಾಡಲು ಪ್ರತ್ಯೇಕ ೪ ಉಪ ಕ್ರಮಗಳನ್ನು, ಕನ್ನಡ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರಕ್ಕೆ ಸೃಜನಾತ್ಮಕ ಸಲಹೆಗಳನ್ನು ನೀಡುವ ವ್ಯಕ್ತಿಗಳಿಗೆ ಪ್ರೋತ್ಸಾಹವನ್ನು ನೀಡುವ ಯೋಜನೆಯನ್ನು ರೂಪಿಸಲು ಕಾನೂನಿನಲ್ಲಿ ಅವಕಾಶ ಮಾಡಲಾಗಿದೆ. ಉದ್ಯಮಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಅನುಷ್ಠಾನ ಮಾಢಿದವರಿಗೆ ವಿನಾಯಿತಿ ಮತ್ತು ತೆರಿಗೆ ರಿಯಾಯತಿ ಅಥವಾ ತೆರಿಗೆ ಮುಂದೂಡಿಕೆ ಪಡೆಯುವ ಹಕ್ಕನ್ನು ನೀಡಿಲಾಗಿದೆ.ರಾಜ್ಯ ಸರಕಾವು ಸರಕಾರಿ ಕಚೇರಿ, ಸಂಸ್ಥೆ, ಸ್ಥಳೀಯ ಪ್ರಾಧಿಕಾರ, ಸಾರ್ವಜನಿಕ ಉದ್ದಿಮೆ, ಖಾಸಗಿ ಕೈಗಾರಿಕೆ, ಹಾಗೂ ಕೈಗಾರಿಕಾ ಸಂಸ್ಥೆಗಳು ಸೆರಿದಂತೆ ಇತರ ಕಡೆಗಳಲ್ಲಿ ನೇಮಕಾತಿ ಏಜೆನ್ಸಿಗಳಿಗಾಗಿ ಉದ್ಯೋಗ ಪೋರ್ಟಲ್‌ ಸ್ಥಾಪಿಸಲು ಅವಕಾಶ ಇರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ಇದೆಲ್ಲದರ ಜೊತೆ ಕನ್ನಡ ಭಾಷೆಯನ್ನು ಕಡೆಗಣಿಸಿರವವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶ ಕಲ್ಪಸಲಾಗಿರುವುದು ಕನ್ನಡ ಕಡ್ಡಾಯಕ್ಕೆ ಅನುಕೂಲವಾಗುವದು. ಆದರೆ ಈ ವಿಧೇಯಕದಲ್ಲಿ ಅಪರಾಧಿಗಳ ರಾಜಿ ಇತ್ಯರ್ಥಕ್ಕೆ ಕೆಲವು ಅವಕಾಶ ಕಲ್ಪಿಸಿರುವುದು ಕಾನೂನು ಗಟ್ಟಿಯಾಗುವ ಬದಲು ಶಿಥಿಲವಾಗಲು ಕಾರಣವಾಗ ಬಹುದೆ? ಎನ್ನುವ ಸಂಶಯವೂ ಬಾರದೇ ಇರುವುದಿಲ್ಲ. ಅದಕ್ಕೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ದಲ್ಲಿ ಅಳವಡಿಸಲಾದ ಕೆಲವು ನಿಬಂಧನೆಗಳ ಸಾಧಕ ಬಾಧಕಗಳ ಕುರಿತು ಮತ್ತೊಮ್ಮೆ ಗಮನಿಸುವ ಅವಶ್ಯಕತೆಯೂ ಇದೆ ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಭಿಪ್ರಾಯವಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *