ವೂಲ್ಪ್ ಹೌಂಡ್ ಮೋಟಾರ್ಸ್ ಸಂಸ್ಥೆಯಿಂದ ಇ18ಆರ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ

 ವೂಲ್ಪ್ ಹೌಂಡ್ ಮೋಟಾರ್ಸ್ ಸಂಸ್ಥೆಯಿಂದ ಆಧುನಿಕ ತಲೆಮಾರಿನ ಇ18ಆರ್ ಎಲೆಕ್ಟ್ರಿಕ್ ಬೈಕ್ ಮೇ 17 ರಂದು ಭಾರತದ ಮಾರುಕಟ್ಟೆಗೆ: ಸುಗಮ ಚಾಲನೆ, ಸುರಕ್ಷತೆಗೆ ಆದ್ಯತೆ – ಕರ್ನಾಟಕದಲ್ಲಿ ಉತ್ಪಾದನಾ ಘಟಕ, ವಿದೇಶಗಳಿಗೂ ರಫ್ತು


ಬೆಂಗಳೂರು, ಮೇ, 11; ಸುರಕ್ಷತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹಲವು ವೈಶಿಷ್ಟ್ಯಗಳ ಎಲೆಕ್ಟ್ರಿಕ್ ಮೊಟಾರ್ ಬೈಕ್ ಅನ್ನು ಟೌ ಲೋಟಸ್ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ವೂಲ್ಪ್ ಹೌಂಡ್ ಮೋಟಾರ್ಸ್ ಸಂಸ್ಥೆ ಹೊರ ತಂದಿದ್ದು, ಮೇ 17 ರಂದು  ಆಧುನಿಕ ಹೊಸ ತಲೆಮಾರಿನ ಇ18ಆರ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.  

ಬೆಂಗಳೂರಿನ ವೈಟ್ ಫೀಲ್ಡ್ ನ ಮ್ಯಾರಿಯಟ್ ಹೋಟೆಲ್ ನಲ್ಲಿ ಬಹು ನಿರೀಕ್ಷಿತ ಮೋಟಾರ್ ಬೈಕ್ ನ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದಿನಿಂದಲೇ ಆನ್ ಲೈನ್ ಮೂಲಕ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಈ ಬೈಕ್ ಗಳು 2024 ರ ಮೊದಲ ತ್ರೈಮಾಸಿಕ ವೇಳೆಗೆ ರಸ್ತೆಗಿಳಿಯಲಿವೆ ಎಂದು ಟೌ ಲೋಟಸ್ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ವಾಸು ರಾಮ್ ಐತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಾಹನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, “ಪರ್ಯಾಯ ಇಂಧನ ವಾಹನಗಳು ಈಗಿನ ರಸ್ತೆಗಳಿಗೆ ಅಗತ್ಯವಾಗಿದ್ದು, ಇ18ಆರ್  ಮಾದರಿಯ ವಾಹನವನ್ನು ಮೋಟಾರ್‌ ಸೈಕಲ್ ವಿಭಾಗದಲ್ಲಿ ಉನ್ನತ ದರ್ಜೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಗುಣಮಟ್ಟದ ಜೊತೆಗೆ ಸವಾರರಿಗೆ ಸುರಕ್ಷತೆ ಮತ್ತು ಸುಸ್ಥಿರತೆಗೆ ಒತ್ತು ನೀಡಲಾಗಿದೆ. ಈ ವಾಹನ ಸಂಪೂರ್ಣವಾಗಿ ಇಂಟರ್ನೆಟ್ ಸಂಪರ್ಕದೊಂದಿಗೆ ಭವಿಷ್ಯದ ತಂತ್ರಜ್ಞಾನವನ್ನು ಒಳಗೊಂಡಿದೆ. ಪರಿಸರ ಸ್ನೇಹಿ ಮತ್ತು ಸುಗಮ ಚಾಲನೆ, ರಕ್ಷಣೆಗೆ ಆದ್ಯತೆ, ಕೈಗೆಟುವ ದರದಲ್ಲಿ ಗ್ರಾಹಕರಿಗೆ ಬೈಕ್ ಒದಗಿಸಲಾಗುವುದು ಎಂದರು.  

ಬೆಂಗಳೂರು, ರಾಮನಗರ ಇಲ್ಲವೆ ಮೈಸೂರಿನಲ್ಲಿ ವೂಲ್ಪ್ ಹೌಂಡ್ ಮೋಟಾರ್ಸ್ ನ ಇ18ಆರ್ ವಾಹನ ಉತ್ಪಾದನಾ ಘಟಕ ಸ್ಥಾಪಿಸುತ್ತಿದ್ದು,  ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಮೊದಲ ಹಂತದಲ್ಲಿ ಸುಮಾರು 300 ಮಂದಿಗೆ ಉದ್ಯೋಗ ದೊರೆಯಲಿದ್ದು, ಕರ್ನಾಟಕದಿಂದಲೇ ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುವುದು. ಬೈಕ್ ಜೊತೆ ಚಾರ್ಜ್ ಮಾಡುವ ಬ್ಯಾಟರಿ, ಸೂಕ್ತ ಹೆಲ್ಮೆಟ್ ಸಹ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಬ್ರಾಂಡಿಂಗ್ ಮುಖ್ಯಸ್ಥ ಕ್ರಿಸ್ಟೋಫೋ ಗಫರ್ಟ್, ಕಂಪೆನಿಯ ನಿರ್ವಾಹಕರಾದ ಅನುಪ್ರಿಯ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *