ಕಾಂಗ್ರೆಸ್ ಆಡಳಿತದಲ್ಲಿ ಗೂಂಡಾಗಿರಿ ಹೆಚ್ಚಳ- ಆರ್.ಅಶೋಕ್

ಬೆಂಗಳೂರು: ಮರಳು ಮಾಫಿಯಾ ತಡೆಗಟ್ಟುವ ಸ್ಕ್ವಾಡಿನ ಸದಸ್ಯರಾಗಿದ್ದ ಕಾನ್‍ಸ್ಟೆಬಲ್ ಹತ್ಯೆಯಾಗಿದೆ. ಸಾವಿರಾರು ಟನ್ ಈ ಥರ ಕದ್ದು ಸಾಗಿಸುವುದಕ್ಕೆ ತಡೆಯೊಡ್ಡಿದ್ದ ಅವರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಖಂಡನೀಯ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಎಸ್ಪಿ ಕಣ್ಣೀರು ಹಾಕಿ ಅಸಹಾಯಕತೆ ತೋರಿದ್ದಾರೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಈ ಥರ ಗೂಂಡಾಗಿರಿ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಬಹಳ ದಿನಗಳಿಂದ ಗೂಂಡಾಗಿರಿ ಸ್ಥಗಿತವಾಗಿತ್ತು. ಮತ್ತೆ ಅದು ಆರಂಭವಾಗಿದೆ ಎಂದು ಆಕ್ಷೇಪಿಸಿದರು. ಮಾನ್ಯ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆಯೇ ಪೊಲೀಸರು ಹುಷಾರಾಗಿರಿ ಎಂದು ಹೇಳಿಕೆ ಕೊಟ್ಟಿದ್ದರು. ಈ ಘಟನೆಗಳನ್ನು ಗಮನಿಸಿದರೆ ಮತ್ತೆ ಕರ್ನಾಟಕದಲ್ಲಿ ಗೂಂಡಾಗಿರಿ ಪರ್ವ ಆರಂಭವಾಗಿದೆ ಎಂದು ಸ್ಪಷ್ಟಗೊಂಡಿದೆ ಎಂದು ತಿಳಿಸಿದರು.
ಸರಕಾರ ಮತ್ತು ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತರೆ ಸರಕಾರ ನಡೆಸುವುದು ಕಷ್ಟವಾಗುತ್ತದೆ. ಕೂಡಲೇ ದಂಧೆಕೋರರನ್ನು ಬಂಧಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೂಂಡಾಗಿರಿ ಹೆಚ್ಚಾಗುವುದು ಪ್ರತೀತಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *