ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗಿ

ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿ ಯಾದದ್ದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.

ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್||

ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.

ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.

ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.

ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು, ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ, ಕೃಷ್ಣ….
ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.

ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.

ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….

ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ…

ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ…

ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….

ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”…

ಧಿಯಃ – ಅಂದರೆ ರಾಮಾವತಾರ
“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…

ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”.

ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…

ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ
ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ.

Leave a Reply

Your email address will not be published. Required fields are marked *