ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಡಾ. ಕಯ್ಯಾರ ಕಿಞ್ಞಣ್ಣ ರೈ ಆತ್ಮಕ್ಕೆ ಶಾಂತಿ -ಡಾ. ಇಂದಿರಾ ಹೆಗಡೆ

ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತಮ್ಮ ಉಸಿರಿರುವವರೆಗೂ ಶ್ರಮಿಸಿದವರು ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ. ಬ್ರಿಟಿಷರ ನಂತರದ ಕಾಲದಲ್ಲೂ ಕಾಸರಗೋಡು ಅಪ್ಪಟ ಕನ್ನಡ ನಾಡಾಗಿತ್ತು, ಕೋರ್ಟ್ ತೀರ್ಪುಗಳು ಕನ್ನಡದಲ್ಲಿ ಬರುತ್ತಿದ್ದವು, ಈಗಲೂ ನೂರಾರು ಕನ್ನಡ ಶಾಲೆಗಳಿವೆ. ಮಹಾಜನ ವರದಿಯಲ್ಲೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ವರದಿ ನೀಡಿದೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಕಾಸರಗೋಡು ಕರ್ನಾಟಕಕ್ಕೆ ಸೇರಿದಾಗ ಮಾತ್ರ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆಂದರು. ಇಂದು `ಕರ್ನಾಟಕ ವಿಕಾಸ ರಂಗ’ ಹಾಗೂ `ಕನ್ನಡ ಗೆಳೆಯರ ಬಳಗ’ ಬಸವನಗುಡಿಯ ಬಿ.ಎಂ.ಶ್ರೀ ಪ್ರತಿಮೆ ಮುಂಭಾಗ ಇಂದು (೨೮-೬-೨೦೨೩)ರಂದು ಏರ್ಪಡಿಸಿದ್ದ ಕನ್ನಡ ಬಾವುಟ ಹಾರಿಸಿದವರು ಮಾಲಿಕೆ-೧೨ರ ಸಮಾರಂಭದಲ್ಲಿ ಡಾ. ಕಯ್ಯಾರ ಕಿಞ್ಞಣ್ಣ ರೈಯವರ ಕುರಿತು ಉಪನ್ಯಾಸ ಮಾಡುತ್ತ ಈ ವಿಷಯ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ. ನಂ. ಚಂದ್ರಶೇಖರ ಮಾತನಾಡಿ ನಮ್ಮಲ್ಲೇ ಇರುವ ಬೆಳಗಾವಿಯನ್ನು ಉಳಿಸಿಕೊಳ್ಳುತ್ತೇವೆ ಎನ್ನುವಂತಹ ವಿರೋಧಾಭಾಸದ ಹೇಳಿಕೆಯನ್ನು ನೀಡುತ್ತಿರುವ ನಾವು ಮಹಾಜನ ವರದಿಯು ಕರ್ನಾಟಕಕ್ಕೆ ನೀಡಿರುವ ಕಾಸರಗೋಡನ್ನು ನಮಗೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳದಿರುವುದು ನಾಚಿಕೆಗೇಡಿನ ಸಂಗತಿ. ಪರಿಷ್ಕೃತ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದು, ವಿಳಂಬ ಮಾಡಿದರೆ ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದೆಂದರು.

ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ ಪ್ರತಿ ತಿಂಗಳು ಕನ್ನಡ ಬಾವುಟ ಹಾರಿಸಿದವರು ಮಾಲಿಕೆಯ ಮೂಲಕ ಕನ್ನಡ ನಾಡು-ನುಡಿಗೆ ದುಡಿದ ಮಹನೀಯರನ್ನು ಸ್ಮರಿಸುತ್ತಾ ಮುಂದಿನ ಹೋರಾಟಕ್ಕೆ ಸ್ಫೂರ್ತಿ ಪಡೆಯುತ್ತಿದ್ದೇವೆಂದರು.

Leave a Reply

Your email address will not be published. Required fields are marked *