ರಾಜ್ಯದಲ್ಲಿನ ಮಾಂಟೇಸರಿಗಳಿಗೆ ಸರ್ಕಾರದ ಅಂಕುಶ ಬೇಕೇ ಬೇಕು- ಮೋಹನ್ ದಾಸರಿ
ನಗರದ ಖಾಸಗಿ ಮಾಂಟೆಸರಿಯೊಂದರಲ್ಲಿ ಪುಟ್ಟ ಕಂದಮ್ಮಗಳು ಹೊಡೆದಾಡುತ್ತಿರುವ ವಿಡಿಯೋ ಈಗಾಗಲೇ ವೈರಲ್ ಆಗಿರುವ ವಿಚಾರದ ಸಂಬಂಧ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯಧ್ಯಕ್ಷ ಮೋಹನ್ ದಾಸರಿ ” ಬೆಂಗಳೂರಿನಂತಹ ವಾಣಿಜ್ಯ ನಗರಿಯಲ್ಲಿ ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸಲು, ಸಂಸಾರಗಳನ್ನು ಸರಿದೂಗಿಸಿಕೊಂಡು ಹೋಗಲು ದಂಪತಿಗಳಿಬ್ಬರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತಮ್ಮ ಮಕ್ಕಳನ್ನು ಮಾಂಟೇಸರಿಗಳಲ್ಲಿ ಅಥವಾ ಡೇ ಕೇರ್ ಸೆಂಟರ್ ಗಳಲ್ಲಿ ಬಿಟ್ಟು ಹೋಗುವಂತಹ ಅನಿವಾರ್ಯತೆ ಇದೆ. ಮಾಂಟೇಸರಿ ಮಾಲೀಕರುಗಳು ಕೇವಲ ವ್ಯಾಪಾರಿ ದೃಷ್ಟಿಯಿಂದ ಮಕ್ಕಳನ್ನು ಸೂಕ್ತ ತರಬೇತಿ ಹೊಂದಿರದ ಸಿಬ್ಬಂದಿಗಳನ್ನು ನೇಮಿಸದೆ ಹಣ ಮಾಡುವ ದಂದೆಗೆ ಇಳಿದಿರುವುದರಿಂದಾಗಿ ಈ ರೀತಿಯ ನೂರಾರು ಅಚಾತುರ್ಯಗಳು ನಗರದಲ್ಲಿ ನಡೆಯುತ್ತಿದೆ. “

” ಕೂಡಲೇ ರಾಜ್ಯ ಸರ್ಕಾರವು ಇವುಗಳ ಮೇಲೆ ನಿಗಾವಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುವ ಮೂಲಕ ಅವುಗಳ ಮೇಲೆ ಅಂಕುಶ ಹಾಕಬೇಕು. ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಸರ್ಕಾರ ಈ ಕೂಡಲೇ ಮುಂದಾಗಬೇಕು ” ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಉಪಾಧ್ಯಕ್ಷ ಅಶೋಕ್ ಮೃತ್ಯುಂಜಯ ಮಾತನಾಡುತ್ತಾ ” ಎನ್ ಸಿ ಇ ಆರ್ ಟಿ ( National council of Educational research and training ) ಈಗಾಗಲೇ 2013ರಲ್ಲಿ ವರದಿಯನ್ನು ನೀಡಿ 2016ರ ಒಳಗೆ ಅನುಷ್ಠಾನಗೊಳಿಸಬೇಕೆಂದು ಹೇಳಿದೆ. ಆದರೆ ಇದುವರೆಗೂ ರಾಜ್ಯ ಸರ್ಕಾರ ವರದಿಯ ಮಾರ್ಗಸೂಚಿಯ ಅನುಷ್ಠಾನವನ್ನು ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಸಮಿತಿಯ ಯಾವುದೇ ಮಾನದಂಡಗಳನ್ನು ಮಾಂಟೇಸರಿಗಳು ಪಾಲಿಸದೆ ಹಣ ಮಾಡುವ ದಂದೆಯಲ್ಲಿ ನಿರತರಾಗಿದ್ದಾರೆ. ಕೂಡಲೇ ಶಿಕ್ಷಣ ಸಚಿವರು ಇತ್ತ ಕಡೆ ಗಮನಹರಿಸಬೇಕು ಹಾಗೂ ಕಮಿಷನ್ ನೇಮಕ ಆಗಬೇಕೆಂದು ಒತ್ತಾಯಿಸಿದರು.
ಪಕ್ಷದ ಕಾರ್ಯದರ್ಶಿ ಸುಷ್ಮಾ ವೀರ್ ಮಾತನಾಡಿ ಸರ್ಕಾರವು ಈ ವಿಚಾರದಲ್ಲಿ ತಾಯ್ತನ ಹಾಗೂ ಮಾನವೀಯತೆಯನ್ನು ಮೆರೆಯಬೇಕು. ದೇಶದ ಭವಿಷ್ಯದ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸುವಲ್ಲಿ ಸರ್ಕಾರವು ಕೂಡಲೇ ಈ ಖಾಸಗಿ ಮಾಂಟೆಸರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ದೆಹಲಿಯ ಆಪ್ ಸರ್ಕಾರವು ಸರ್ಕಾರದ ವತಿಯಿಂದ ನಡೆಸುತ್ತಿರುವ ಮಾಂಟೆಸರಿಗಳನ್ನು ಅಲ್ಲಿಗೆ ಹೋಗಿ ವೀಕ್ಷಿಸಿ ಅದೇ ರೀತಿಯ ಶಾಲೆಗಳನ್ನು ರಾಜ್ಯದಲ್ಲಿಯೂ ಸಹ ತೆರೆಯಬೇಕು ” ಎಂದು ಒತ್ತಾಯಿಸಿದರು.