ಶ್ರೀ ವಿದ್ಯಾಶ್ರೀಶ ತೀರ್ಥರ ಪೀಠಾರೋಹಣದ ಸಪ್ತಮ ವಾರ್ಷಿಕೋತ್ಸವ
( ಸೋಸಲೆ ವ್ಯಾಸರಾಜರ ಮಠದ ಪತ್ರಿಕಾ ವರದಿ) ಗುರುವಾರ- ಜೂನ್ 29
ಮಠಕ್ಕೆ ವಿದ್ಯಾಸಂಪತ್ತೇ ಪ್ರಧಾನ
- ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅಭಿಮತ
ಮೈಸೂರು: ಭೌತಿಕ ಸಂಪತ್ತಿಗಿಂತ ವಿದ್ಯಾಸಂಪತ್ತು ಪ್ರಧಾನ ಎಂದು ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ಪೀಠಾರೋಹಣದ ಸಪ್ತಮ ವಾರ್ಷಿಕೋತ್ಸವ ಅಂಗವಾಗಿ ಕೆಆರ್ ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ಭಾರತೀಯ ಸನಾತನ ಪರಂಪರೆಯ ವೇದ-ಶಾಸ್ತ್ರ ವಿದ್ಯೆಯನ್ನು ಹೊಸ ಪೀಳಿಗೆಗೆ ಧಾರೆ ಎರೆಯಲು ನಮ್ಮ ಸಂಸ್ಥಾನ ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಉಚಿತವಾಗಿ ನೂರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದೆ. ನಮ್ಮ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸುತ್ತಿರುವುದು ಸಾರ್ಥಕತೆ ಮೂಡಿಸಿದೆ. ಇದೇ ವಿದ್ಯಾರ್ಥಿಗಳು ನಾಳೆ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಪ್ರತಿನಿಧಿಗಳಾಗಿ ಸಮಾಜವನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದರು.
ಭೌತಿಕ ಸಂಪತ್ತನ್ನು ಯಾರು ಬೇಕಾದರೂ ತಮ್ಮದನ್ನಾಗಿಸಿಕೊಳ್ಳಬಹುದು. ಆದರೆ ಜ್ಞಾನ ಎಂಬುದು ಸಾಧಕನ ಸ್ವತ್ತು. ಗುರುಮುಖೇನ ವಿದ್ಯಾ ಸಂಪತ್ತು ಗಳಿಸಲು ಶ್ರದ್ಧೆ ಬಹು ಮುಖ್ಯ. ಜ್ಞಾನ ಸಂಪಾದನೆ ಮತ್ತು ಆಚಾರ್ಯ ಮಧ್ವರ ತತ್ವ, ಸಿದ್ಧಾಂತ ಪ್ರಸಾರಕ್ಕೆ ಸಂಸ್ಥಾನ ಎಲ್ಲ ರೀತಿಯ ನೆರವನ್ನೂ ನೀಡಲಿದೆ ಎಂದರು.
ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಿ.ಪಿ. ಮಧುಸೂದನಾಚಾರ್ಯ ಮಾತನಾಡಿ, ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನೂ ಸಂಸ್ಥಾನ ಮಾಡುತ್ತಿದೆ. ವಿದ್ಯಾರ್ಜನೆಗೆ ಹೆಚ್ಚಿನ ಮಹತ್ವ ನೀಡಲು ವಿದ್ಯಾಶ್ರೀಶ ತೀರ್ಥರು ಸಂಕಲ್ಪ ಮಾಡಿರುವ ಕಾರಣ ಅವರ ಕನಸು ಮತ್ತು ಕಲ್ಪನೆಗಳನ್ನು ಸಾಕಾರಗೊಳಿಸುವ ಸೇವೆ ಸಾಗಿದೆ ಎಂದರು. ದೇಶದ ವಿವಿಧೆಡೆ ಇರುವ ಸಂಸ್ಥಾನದ ಹಲವು ಶಾಖೆ, ವೃಂದಾವನಗಳ ಕಟ್ಟಡ ಪುನರ್ ನಿರ್ಮಾಣ ಪ್ರಗತಿಯಲ್ಲಿದೆ. ಎಲ್ಲದಕ್ಕೂ ಶ್ರೀಗಳ ಮಾರ್ಗದರ್ಶನವೇ ಶ್ರೀರಕ್ಷೆಯಾಗಿದೆ ಎಂದರು.
ಹಿರಿಯ ವಿದ್ವಾಂಸರಾದ ಶೇಷಗಿರಿ ಆಚಾರ್ಯ, ಶ್ರೀನಿವಾಸಮೂರ್ತಿ ಮತ್ತು ಸಂತೋಷ ಆಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಅವರು ವಿದ್ಯಾಶ್ರೀಶ ತೀರ್ಥರ ಬಹುಮುಖಿ ವ್ಯಕ್ತಿತ್ವ ಮತ್ತು ಅಧ್ಯಾಪನ ಶ್ರೇಷ್ಠತೆ ಕುರಿತು ಮಾತನಾಡಿದರು. ನೂರಾರು ಪಂಡಿತರು, ಉಪನ್ಯಾಸಕರು ಮತ್ತು ವಿದ್ಯಾಪೀಠದ ವಿದ್ಯಾರ್ಥಿಗಳು ವಿದ್ಯಾಶ್ರೀಶ ತೀರ್ಥರಿಗೆ ಪುಷ್ಪವೃಷ್ಠಿಯನ್ನು ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು.
ಶ್ರೀಗಳ ಹೇಳಿಕೆ ಸಾರ)
ನಮ್ಮ ಸಂಸ್ಥಾನದ ಎಲ್ಲ ಸಾಧನೆ, ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಗುರು ಪರಂಪರೆಗೆ ಸಮರ್ಪಿಸುತ್ತೇವೆ. ಹಿರಿಯ ಗುರುಗಳ ಕೃಪೆಯಿಂದಲೇ ಎಲ್ಲ ಮಹತ್ಕಾರ್ಯಗಳು ನೆರವೇರಿವೆ. ವಿದ್ಯಾಸಂಪತ್ತು ಗಳಿಸುವುದೇ ನಮ್ಮ ಪರಮ ಧ್ಯೇಯ. ವಿದ್ಯಾರ್ಥಿ ವಾತ್ಸಲ್ಯ ಮತ್ತು ಪಾಠ -ಪ್ರವಚನಗಳಿಗೆ ಮೊದಲ ಆದ್ಯತೆ ನೀಡುವುದರಲ್ಲಿ ಸಾರ್ಥಕತೆ ಇದೆ.
- ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ
ಸೋಸಲೆ ವ್ಯಾಸರಾಜರ ಮಠ