ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ‘ರಾಮಾಯಣ ಪ್ರವಚನ ಸರಣಿ’

ಮೈಸೂರು: ಅಧ್ಯಾತ್ಮ ಮತ್ತು ನೈತಿಕ ಮೌಲ್ಯದ ತಳಹದಿ ಇಲ್ಲದ ಸಂಪತ್ತು ಅಶಾಶ್ವತ ಎಂದು ವ್ಯಾಸ ತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಆಚಾರ್ಯ ಪ್ಯಾಟಿ ನುಡಿದರು.
ನಗರದ ಕೃಷ್ಣಮೂರ್ತಿಪುರಂನ ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ನಡೆಯುತ್ತಿರುವ ‘ರಾಮಾಯಣ ಪ್ರವಚನ ಸರಣಿ’ ಯಲ್ಲಿ ಅವರು ಬುಧವಾರ ಉಪನ್ಯಾಸ ನೀಡಿದರು.


ನೈತಿಕ ಮೌಲ್ಯಗಳ ತಳಹದಿಯಲ್ಲಿ ರಾಷ್ಟ್ರವು ಸಂಪದ್ಭರಿತವಾದರೆ ಅಲ್ಲಿನ ಭವಿಷ್ಯ ಸದಾ ಸುರಕ್ಷಿತವಾಗಿರುತ್ತದೆ ಎಂದು ರಾಮಾಯಣ ಸಂದೇಶ ನೀಡಿದೆ ಎಂದರು. ಯಾವ ದೇಶದಲ್ಲಿ ನೈತಿಕ ಸಂಪತ್ತು ಇರುವುದಿಲ್ಲವೋ ಆ ದೇಶ ಕೆಲವೇ ವರ್ಷದಲ್ಲಿ ವಿನಾಶದಂಚಿಗೆ ಹೋಗುತ್ತದೆ. ಇದು ಕೇವಲ ರಾಮಾಯಣ ಕಾಲದ್ದು ಅಲ್ಲ, ವರ್ತಮಾನ ಕಾಲದಲ್ಲೂ ಅನೇಕ ದೇಶಗಳು ವಿನಾಶಕ್ಕೆ ತೆರಳಿದ್ದನ್ನು ನಾವು ಗಮನಿಸಬಹುದು. ಹಾಗಾಗಿ ರಾಮಾಯಣದ ನೀತಿ ಮತ್ತು ಮೌಲ್ಯಗಳು ಎಲ್ಲ ದೇಶ- ಕಾಲಕ್ಕೂ ಅನ್ವಯ ಎಂದು ಅವರು ವಿವರಿಸಿದರು.
ಜೀವನದಲ್ಲಿ ಅಪೇಕ್ಷಿತವಾದದ್ದೆಲ್ಲವನ್ನೂ ಹೊಂದಿದ್ದ ಸಿರಿವಂತಿಕೆಯು ರಾಮನ ಆಳ್ವಿಕೆ ಕಾಲದಲ್ಲಿ ಇತ್ತು. ಅಯೋಧ್ಯೆಯ ಯಾವ ಪ್ರಜೆಗಳೂ ಸ್ವೇಚ್ಛಾಚಾರಿಗಳಾಗಿರಲಿಲ್ಲ. ಸುಳ್ಳನ್ನಾಡುತ್ತಿರಲಿಲ್ಲ. ಕಳ್ಳತನವನ್ನು ಮಾಡುತ್ತಿರಲಿಲ್ಲ. ಇನ್ನೊಬ್ಬರ ಏಳಿಗೆಗೆ ಅಸೂಯೆಯನ್ನು ಪಡುತ್ತಿರಲಿಲ್ಲ. ಯಾರಲ್ಲೂ ಅಹಂಕಾರವಿರಲಿಲ್ಲ. ಪ್ರತಿಯೊಬ್ಬರ ಪ್ರಜೆಯೂ ಧರ್ಮಭೀರುಗಳಾಗಿದ್ದರು. ದೇವರಲ್ಲಿನ ಶ್ರದ್ಧೆಯಿಂದ ಪ್ರಾಮಾಣಿಕ ಜೀವನವನ್ನು ನಡೆಸುತಿದ್ದರು. ಇದನ್ನೇ ಇಂದಿಗೂ ‘ರಾಮರಾಜ್ಯ’ ಎಂದು ಉದಾಹರಿಸುತ್ತೇವೆ. ರಾಮರಾಜ್ಯ ಎಂಬುದು ಇಡೀ ವಿಶ್ವಕ್ಕೇ ಒಂದು ಮಾದರಿಯಾಗಿದೆ ಎಂದು ಡಾ. ಶ್ರೀನಿಧಿ ಹೇಳಿದರು.
ಅಯೋಧ್ಯೆಯನ್ನು ಆಳಿದ ರಾಜ ವಂಶದಲ್ಲಿ ಬಹುದೊಡ್ಡ ನೈತಿಕ ಮೌಲ್ಯ ಇತ್ತು. ಧರ್ಮದ ಬಗ್ಗೆ ಶ್ರದ್ಧೆ ಮತ್ತು ಗೌರವ ಇತ್ತು. ದಶರಥ ಮಹಾರಾಜ ಪ್ರಜಾವತ್ಸಲನಾಗಿದ್ದ. ಅಶ್ವಮೇಧ ಯಾಗ ಮಾಡುವ ಸಂದರ್ಭದಲ್ಲಿ ಎಲ್ಲರಿಗೂ ಅನೇಕ ರೀತಿಯಾದ ದಾನಗಳನ್ನು ನೀಡಿದ.
ಆ ಸಂದರ್ಭದಲ್ಲಿ ಒಬ್ಬ ಬಡವ ಬಂದು ದಾನವನ್ನು ಬೇಡಿದಾಗ ಒಂದು ಕ್ಷಣವೂ ಯೋಚಿಸಿದೆ ತಾನು ಧರಿಸಿದ್ದ ಬಂಗಾರದ ಕಡಗವನ್ನೇ ದಾನವಾಗಿ ನೀಡಿದ. ಇದೇ ಮನಸ್ಥಿತಿಯ 8 ಮಂತ್ರಿಗಳನ್ನು ಆತ ನೇಮಕ ಮಾಡಿಕೊಂಡಿದ್ದ. ನೊಂದವರಿಗೆ ನೆರವು, ತಪ್ಪು ಮಾಡಿದವರಿಗೆ ಶಿಕ್ಷೆ- ಇವುಗಳಲ್ಲಿ ಯಾವುದೇ ರಾಜಿ ಇರಲಿಲ್ಲ. ಇಂಥ ಪರಂಪರೆಯನ್ನು ಶ್ರೀರಾಮ ಮುಂದುವರಿಸಿ ರಾಜ್ಯಭಾರ ಮಾಡಿದ ಎಂದು ಅವರು ವಿವರಿಸಿದರು.
ರಾಮಾಯಣ ಕೇವಲ ಕಟ್ಟುಕಥೆಯಲ್ಲ. ಗ್ರಂಥದಲ್ಲಿರುವ ಲಿಖಿತ ಆದರ್ಶ ಮಾತ್ರವೇ ಅಲ್ಲ. ಇಂದಿಗೂ ಇದರ ಮೌಲ್ಯ ನಮಗೆ ಮಾದರಿ. ದೇಶದ ಆಡಳಿತಕ್ಕೆ ಮಾರ್ಗದರ್ಶಿ. ಅದನ್ನು ಅರಿತು ನಡೆದರೆ ಭಾರತ ಮತ್ತೆ ವಿಶ್ವಗುರು ಆಗುವಲ್ಲಿ ಸಂದೇಹವೇ ಇಲ್ಲ ಎಂದು ಡಾ. ಶ್ರೀನಿಧಿ ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟ ರಾವ್, ವಾಸುಕಿ, ಭಾರತಿ, ಪದ್ಮಾ ವೆಂಕಟ ರಾವ್ ಇತರರು ಇದ್ದರು.

( ಚಿತ್ರ: ಡಾ. ಶ್ರೀನಿಧಿ ಪ್ಯಾಟಿ)

Leave a Reply

Your email address will not be published. Required fields are marked *