ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರಿಗೆ ವಿಪ್ರತೃಯಿ ಪರಿಷತ್ ಸಕಲ ನೆರವು
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವಿಪ್ರತೃಯಿ ಪರಿಷತ್ ತುರ್ತು ಸಭೆಯಲ್ಲಿ, ಸಂಕಷ್ಟಕ್ಕೆ ಸಿಲುಕಿರುವ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರ ಹಿತರಕ್ಷಣೆಗೆ ಧಾವಿಸುವ ನಿರ್ಣಯ ಕೈಗೊಳ್ಳಲಾಯಿತು.



ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮತ್ತು ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಸೇರಿದಂತೆ ಅನೇಕ ಬ್ರಾಹ್ಮಣ ಸಮಾಜದ ಪ್ರಮುಖರು ಭಾಗವಹಿಸಿದ್ದರು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚ್ಚಿದಾನಂದ ಮೂರ್ತಿ ಅವರು, ದಿವಾಳಿ ಅಂಚಿನಲ್ಲಿ ಸಿಲುಕಿರುವ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನ ಪುನರುಜ್ಜೀವನ ಮಾಡುವುದು ಸೇರಿದಂತೆ, ಠೇವಣಿದಾರರ ಸಂಪೂರ್ಣ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಠೇವಣಿದಾರರಿಗೆ ಆರ್ಥಿಕ ನೆರವು, ಕಾನೂನು ಸಲಹೆ ಮತ್ತು ನೈತಿಕ ಬೆಂಬಲ ನೀಡಲಾಗುವುದು ಎಂದರು…
ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಮಾತನಾಡಿ, ಠೇವಣಿದಾರರಿಗೆ ಐದು ಲಕ್ಷ ರೂಪಾಯಿ ವಿಮೆ ಯೋಜನೆ ಹಣ ದೊರೆಯಲಿದೆ. ಜೊತೆಗೆ ವಿಪ್ರತೃಯಿ ಪರಿಷತ್ ವತಿಯಿಂದ ತೀರಾ ತೊಂದರೆಗೆ ಒಳಗಾಗಿರುವ ಠೇವಣಿದಾರರಿಗೆ ಆರ್ಥಿಕ ನೆರವು, ಕಾನೂನು ಅರಿವು ಮತ್ತು ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದರು.
ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಠೇವಣಿದಾರರಿಗೆ ವೈಯಕ್ತಿಕವಾಗಿ ಐದು ಲಕ್ಷ ರೂಪಾಯಿ ಈ ಹಿಂದೆ ನೀಡಿದಂತೆ, ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನ ಠೇವಣಿದಾರರಿಗೂ ನೀಡುವುದಾಗಿ ಭರವಸೆ ನೀಡಿದರು…
ಬ್ರಾಹ್ಮಣ ಸಮಾಜದವರು ನಡೆಸುವ ಸಹಕಾರಿ ಬ್ಯಾಂಕ್ ಗಳು ಸಾಲು ಸಾಲಾಗಿ ದಿವಾಳಿ ಅಂಚಿಗೆ ಬರುತ್ತಿರುವ ಕುರಿತು ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಇಂಥ ಪರಿಸ್ಥಿತಿ ಮರುಕಳಿಸದಂತೆ ವಿಪ್ರ ಸಮಾಜ ಜಾಗೃತಿ ವಹಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.