ಮಾಟ ಮಂತ್ರದಿಂದ ಡಿಕೆಶಿ ಗೆದ್ದರು ಎಂದ ಎಚ್ಡಿಕೆ – ಎಚ್ಡಿಕೆ ಆಶೀರ್ವಾದ ನಮಗೆ ಬಹಳ ಮುಖ್ಯ ಎಂದ ಡಿಕೆಶಿ

ಬೆಂಗಳೂರು: ಜ್ಯೋತಿಷ್ಯ, ಮಾಟಮಂತ್ರ ಮತ್ತು ಕುತಂತ್ರದಿಂದ ಡಿ.ಕೆ.ಶಿವಕುಮಾರ್ ಚುನಾವಣೆ ಗೆದ್ದಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ನಮಗೆ ಬಹಳ ಮುಖ್ಯ ಎಂದು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.
ಶಕ್ತಿಯೋ, ಛಲವೋ, ಶ್ರಮವೋ ಎಲ್ಲಿ ಮನಸಿದೆಯೋ ಅಲ್ಲಿ ಮಾರ್ಗವಿದೆ, ಎಲ್ಲಿ ಭಕ್ತಿಯಿದೆಯೋ ಅಲ್ಲಿ ಭಗವಂತನಿದ್ದಾನೆ ಎಂದು ನುಡಿದ ಡಿ.ಕೆ.ಶಿವಕುಮಾರ್ ಇದನ್ನು ನಂಬಿಕೊಂಡು ನಾವು ಹಗಲಿರುಳು ಶ್ರಮಿಸಿದ್ದೇವೆ. ಒಂದು ದಿನ ಸರಿಯಾಗಿ ಊಟ ಮಾಡಲಿಲ್ಲ. ಒಂದು ದಿನ ಸರಿಯಾಗಿ ನಿದ್ರೆ ಮಾಡಲಿಲ್ಲ. ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಮಲಗಲು ಬಿಡಲಿಲ್ಲ. ಜನರು ವಿಶ್ವಾಸ ಇಟ್ಟು, ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ. ಈಗ ಅವರ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮಾಟಮಂತ್ರಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಅವರದೇ ಆದ ಅನುಭವವಿದೆ. ಮಾತಾಡಲಿ ಬಿಡಿ ಎಂದು ಡಿಕೆಶಿ ಪರೋಕ್ಷವಾಗಿ ಕುಮಾರಸ್ವಾಮಿಯವರನ್ನು ಟೀಕಿಸಿದರು.