ಭಕ್ತಿ ಹಾಗೂ ಸಡಗರದಿಂದ ನೆರವೇರಿದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ

ಬೆಂಗಳೂರು : ಯಶವಂತಪುರ ಎ ಪಿ ಎಂ ಸಿ ಯಾರ್ಡ್ ನ 9 ನೇ ಗೇಟ್ ಎದುರಿನಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಹಿಮೆ ಅಪಾರ. ಯಾರ್ಡ್ ನಲ್ಲಿ ಶ್ರಮಪಟ್ಟು ದುಡಿಯುವ ಬಡ ಹಮಾಲಿಗಳು, ಸರಕು ಸಾಗಣೆ ವಾಹನಗಳ ಚಾಲಕರುಗಳು, ದಿನಗೂಲಿ ನೌಕರರ ಕಷ್ಟ ಸುಖಗಳಿಗೆ ಅಭಯ ಪ್ರದನಾಗಿ ದಕ್ಷಿಣ ಮುಖಿಯಾಗಿ ನಿಂತಿರುವ ಶ್ರೀ ಸ್ವಾಮಿಯೇ ಆಪದ್ಬಾಂಧವ. ಸಹಸ್ರಾರು ಸರಕು ವಾಹನಗಳಲ್ಲಿ ಲೋಡುಗಟ್ಟಲೆ ಮಾರುಕಟ್ಟೆಗೆ ಬರುವ ದವಸಧಾನ್ಯ, ತರಕಾರಿ ಹಣ್ಣು ಹಂಪಲುಗಳ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟುಗಳ ಕಾರುಬಾರಿನ ನಡುವೆ, ಸಾವಿರಾರು ಜನರ ಓಡಾಟ ಈ ಭಾಗದಲ್ಲಿ ಸರ್ವೇಸಾಮಾನ್ಯ ಸಂಗತಿ. ಸ್ಥಳೀಯರೇ ಅಲ್ಲದೆ, ದೂರ ದೂರದ ಊರುಗಳಿಂದಲೂ ಬರುವ ಜನರಿಗೆ ಸನ್ನಿಧಾನವು ತನ್ನ ಇರುವಿಕೆಯಿಂದಾಗಿ ಭಕ್ತ ಜನರಲ್ಲಿನ ದುಗುಡ, ಭಯ, ನಿರಾಸೆ ನಿಸ್ಸಾಹಾಯಕತೆಯನ್ನು ದೂರ ಮಾಡಿ ಮನಸ್ಸಿಗೆ ಧೈರ್ಯ ತುಂಬಿ, ನವ ಚೈತನ್ಯ ತುಂಬುವ ಶಕ್ತಿಕೇಂದ್ರವೆಂಬುದಾಗಿ, ಜನರಲ್ಲಿ ಪ್ರಚಲಿತವಾಗಿದೆ .

ಈ ಸನ್ನಿಧಾನವು . ಶುಕ್ರವಾರದಂದು ದೇವಾಲಯದ ಹತ್ತನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ವಾಮಿ ಅವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ದೇಗುಲದ ಪ್ರಧಾನ ಅರ್ಚಕರಾದ ಚಂದ್ರಶೇಖರ್ ರವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸಮಾಜ ಸೇವಕರು, ಬೆಂಗಳೂರು ಬಿಜೆಪಿ ಉತ್ತರ ಕಾರ್ಯಕಾರಿಣಿ ಸದಸ್ಯರಾದ ಡಾ. ಜಿ. ಎಸ್. ಚೌಧರಿ ಹಾಗೂ ದೇವಸ್ಥಾನದ ಅಧ್ಯಕ್ಷರಾದ ಜೆ. ಸೆಲ್ವರಾಜ್ ರವರ ಉಸ್ತುವಾರಿಯಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕಳೆದ ಹತ್ತು ವರ್ಷಗಳಿಂದಲೂ ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ಲೋಕಕಲ್ಯಾಣಾರ್ಥ ಹವನ ಹೋಮ ಕಾರ್ಯಕ್ರಮ ನೆರವೇರಿಸಲಾಗುತ್ತಿದೆ .

ಅಮಾವಾಸ್ಯೆ ಹಾಗೂ ಪ್ರತಿ ಮಂಗಳವಾರದಂದು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಪ್ರತಿ ಶನಿವಾರ ಸಂಜೆ 6 ರಿಂದ 9 ರ ತನಕ ನಡೆಯುವ ಹೂಪ್ರಸಾದದಲ್ಲಿ ಭಕ್ತಾದಿಗಳು ಭಾಗವಹಿಸಿ, ತಮ್ಮ ಮನೋ ಇಚ್ಛೆಗಳ ಈಡೇರಿಕೆಗಾಗಿ ಸ್ವಾಮಿಯ ಮೊರೆಹೋಗುವುದು ಹಾಗೂ ಇಲ್ಲಿ ಸ್ವಾಮಿಯ ಹೂ ಪ್ರಸಾದವನ್ನು ಪಡೆದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡ ಉದಾಹರಣೆಗಳು ಅನೇಕವಿವೆ ಎಂದು ವ್ಯವಸ್ಥಾಪಕರು ಮಾಹಿತಿ ನೀಡಿದರು.

ಅದ್ದೂರಿಯಾಗಿ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ನವೀನ್ ಕುಮಾರ್ ಎನ್., ಮಂಜುನಾಥ್ ಸಿ., ಪ್ರಕಾಶ್, ಶಿವಣ್ಣ, ರಾಜು, ಕಿಶನ್ ಮೊದಲಾದವರು ಶ್ರೀ ಸ್ವಾಮಿಯ ಸೇವೆಯಲ್ಲಿ ನಿರತರಾಗಿದ್ದರು. ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ವಾಮಿ ದರ್ಶನವನ್ನು ಪಡೆದು ಅನ್ನಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *