ಚಿರನಿದ್ರೆಗೆ ಜಾರಿದ ಗದ್ದರ್

ಸ್ತಬ್ಧವಾದ ಬಂಡಾಯದ ಹಾಡೂ..! —

ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ತೂಫ್ರಾನ್ ಹಳ್ಳಿಯಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್‌ ರಾವ್ ಎಂಬ ದಲಿತ ವ್ಯಕ್ತಿ ‘ಗದ್ದರ್’ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಲು ಅವರ ಎಡಪಂಥೀಯ ಧೋರಣೆ ಹಾಗೂ ಭೂಮಾಲೀಕರ ವ್ಯವಸ್ಥೆಯ ವಿರುದ್ಧ ನಡೆದ ಹೋರಾಟವೇ ಕಾರಣ.

ಪಶ್ಚಿಮ ಬಂಗಾಳದ ನಕ್ಸಲ್ ಹೋರಾಟದ ತ್ಯಾಗಪೂರಿತ, ರಾಜಿರಹಿತ ಹೋರಾಟಕ್ಕೆ ಪೂರಕವಾಗಿ ನಡೆದ ಅವರ ಜನಜಾಗೃತಿ ಸಾಂಸ್ಕೃತಿಕ ಪ್ರತಿರೋಧದ ಪಯಣವೇ ಅವರು ನಡೆದು ಬಂದ ವಿರೋಚಿತ ಹೋರಾಟದ ಇತಿಹಾಸ.

76 ವರ್ಷಗಳ ಅವರ ಜೀವಿತಾವಧಿಯ ಸಂಘರ್ಷದಲ್ಲಿ ಜನತೆಯೊಂದಿಗಿನ ನಿಕಟ ಸಂಪರ್ಕವು ಈ ದೇಶದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸಂಪರ್ಕ ಸೇತುವೆಯಾಗಿತ್ತು. ಅಸಂಖ್ಯಾತ ಜನತೆಯ ಆಕ್ರೋಶದ ಪ್ರತಿನಿಧಿಯಾಗಿದ್ದರು ಗದ್ದರ್ ಅವರು.

ಅವರು ಇದುವರೆಗೂ ಬರೆದಿರುವ ಸಾವಿರಾರು ಹಾಡುಗಳು ಅವಿಭಜಿತ ಆಂಧ್ರಪ್ರದೇಶಕ್ಕೆ ಅಷ್ಟೇ ಅಲ್ಲ; ಈ ದೇಶದ ಪ್ರತಿಯೊಬ್ಬರ ಮನಮುಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ.

ಗದ್ದರ್ ಅವರು ಶೋಷಿತ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಯ ಮೇರು ಪರ್ವತ ಆಗಿದ್ದರು. ಯಾವುದೇ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರೆ ತಪ್ಪಿಸುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಹಾಜರಾಗಿ ಕ್ರಾಂತಿಕಾರಿ ಗೀತೆಗಳ ಮೂಲಕವೇ ಶೋಷಿತ ಸಮುದಾಯವನ್ನು ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದರು.

ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪೊಲೀಸರು, ಭೂಮಾಲೀಕರು ಕೊಂದು ಹಾಕಿದಾಗ ಅವರನ್ನು ಎದೆಗೆ ಹಚ್ಚಿಕೊಂಡು ಹಾಡುತ್ತಿದ್ದರು. ತಾಯಿ ಕರುಣೆಯಿಂದ ಮಗನ ಶವ ಕೇಳುವ ಹಾಡನ್ನು ಕಲ್ಲಿನಂಥವರ ಮನಸ್ಸನ್ನೂ ಕರಗಿಸುವಂತೆ ಹಾಡುತ್ತಿದ್ದರು.

ರಾಯಚೂರಿಗೆ ಐದು ಬಾರಿ ಬಂದು ಹೋಗಿದ್ದ ಅವರು, ಭೂಮಾಲೀಕರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಾಯುವವರೆಗೂ ಹಾಡು ಹಾಡಿದರು. ಅವರೊಬ್ಬ ಅಪ್ರತಿಮ ಕ್ರಾಂತಿಕಾರಿ ಕಲಾವಿದ.

ಆಡು ಮುಟ್ಟದ ಸೊಪ್ಪಿಲ್ಲ, ಗದ್ದರ್ ಬರೆಯದ ಸಾಹಿತ್ಯವಿಲ್ಲ. ಇಷ್ಟರ ಮಟ್ಟಿಗೆ ಹೆಸರುವಾಸಿಯಾಗಿದ್ದ ಅವರು, ಭಾರತದ ಶ್ರಮಿಕ ವರ್ಗದ ಸಾಂಸ್ಕೃತಿಕ ಕ್ರಾಂತಿಗೆ ಒಬ್ಬ ಸೇನಾಧಿಪತಿ ಎನಿಸಿಕೊಂಡಿರು.

‘ನನ್ನ ಸಾಹಿತ್ಯ ಜನರ ಅನುಭವದಿಂದ ಉಗಮವಾದ ಸಾಹಿತ್ಯ. ದುಡಿಯುವ ಜನತೆಯ ಶೇಕಡ 25ರಷ್ಟು ಸಾಹಿತ್ಯವನ್ನು ಮೈಗೂಡಿಸಿಕೊಂಡಿದೆ.

ಇಂತಹ ಪರಿಣಾಮಕಾರಿ ಸಾಹಿತ್ಯವಾಗಿ ಪ್ರಚುರವಾಗಿರುವಾಗ ಇನ್ನೂ ಶೇಕಡ 75ರಷ್ಟು ಸಾಹಿತ್ಯವನ್ನು ಅಧ್ಯಯನ ಮಾಡಿದ್ದರೆ ಅದರ ವ್ಯಾಪ್ತಿಯು ಆಳುವ ಸರ್ಕಾರಗಳ ಹಗಲು ದರೋಡೆಗೆ ಅಂಕುಶವಾಗುತ್ತಿತ್ತು.

ದುಡಿಯುವ ಜನತೆಯೇ ಈ ದೇಶದ ಜನಾಧಿಕಾರವನ್ನು ಕೈವಶ ಮಾಡಿಕೊಂಡು, ಈ ದೇಶದ ಅಧಿಕಾರಹೀನತೆ, ಅಸ್ಪೃಶ್ಯತೆ, ಅಸಮಾನತೆ ನಶಿಸಿ, ನೈಜ ಪ್ರಜಾತಾಂತ್ರಿಕ ವ್ಯವಸ್ಥೆಯ ಪುನರ್ ಪ್ರಸ್ಥಾನ ನಿರ್ಮಾಣ ಆಗುವುದರಲ್ಲಿ ಯಾವುದೇ ಸಂದೇಹ ಇರುತ್ತಿರಲಿಲ್ಲ’ ಎನ್ನುವುದು ‘ಕಾಮ್ರೇಡ್ ಗದ್ದರ್’ ಅವರ ದೃಢ ಸಂಕಲ್ಪವಾಗಿತ್ತು. ಇಂತಹ ಸೃಜನಶೀಲ ಸಾಹಿತಿಯ ಅಗಲಿಕೆ ದೇಶದ ದಮನಿತ ಜನತೆಗೆ ದಿಗ್ಭ್ರಮೆಯಾಗಿದೆ.

ಈ ಇಳಿವಯಸ್ಸಿನಲ್ಲೂ ಸಾಹಿತ್ಯಿಕ ಕೃಷಿಯಿಂದ ಅವರು ವಿರಮಿಸಿರಲಿಲ್ಲ. ‘ವಾಟ್ಸ್‌ಆಯಪ್‌, ವಿಶ್ವವಿದ್ಯಾಲಯಗಳಲ್ಲಿ ನಿರತವಾಗಿರುವ ಯುವ ಸಮುದಾಯವು ಒಂದು ಕ್ಷಣವಾದರೂ ದೇಶದ ದುರಾಡಳಿತದ ಬಗ್ಗೆ ಸಹನೆಯಿಂದ ಪ್ರತಿರೋಧಿಸಿದರೆ ಈ ದೇಶದ ದುಷ್ಟರ ರಾಜಕಾರಣ ಧ್ವಂಸವಾಗಿ, ಬಾಬಾಸಾಹೇಬ ಅಂಬೇಡ್ಕರ್ ಅವರು ಕಂಡ ಭವಿಷ್ಯದ ಭಾರತ ನಿಮ್ಮ ಅಂಗೈಯಲ್ಲಿರುತ್ತದೆ’ ಎಂಬ ಎಚ್ಚರಿಕೆಯ ಬಂಡಾಯದ ಹಾಡುಗಳು ಗದ್ದರ್ ಅವರ ಚಿರನಿದ್ರೆಯಿಂದ ಸ್ತಬ್ಧವಾಗಿವೆ.

ದ್ವೇಷವಿಲ್ಲದೇ, ಮೋಸವಿಲ್ಲದೇ ನಾಡಿನ ನಿರ್ಮಾಣದ ಆಶಯ ಹೊತ್ತು ಹುತಾತ್ಮರಾದ ಅಸಂಖ್ಯಾತ ಹೋರಾಟಗಾರರ ತ್ಯಾಗಪೂರಿತ ಬಳುವಳಿಯ ಬಂಡಾಯದ ಧ್ವನಿಯಿಲ್ಲವಾಗಿದೆ.

ಸಾವಿನ ಜೊತೆಗೆ ಸಂಗೀತ ಹಾಡುವೆನು ಕ್ರಾಂತಿಯ ತಾಯಿಗೆ ‘ಲಾಲ್ ಸಲಾಮ್’ ಎಂಬ ಅವರ ವಾಣಿ ಕ್ರಾಂತಿಕಾರಿ ಇತಿಹಾಸದಲ್ಲಿ ಚಿರಸ್ಮರಣೀಯವಾಗಿ ದಾಖಲಾಗಿದೆ.

ಇದೋ ಗದ್ದರ್ ಗೆ ‘ಲಾಲ್ ಸಲಾಮ್’..!

ಮೊನ್ನೆ ನಡೆದ ರಾಯಚೂರಿನಲ್ಲಿ ನಡೆದಿದ್ದ ‘ತ್ಯಾಗಜೀವಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಗದ್ದರ್ ಮಾತನಾಡಿದ ಕ್ಷಣ (ಸಂಗ್ರಹ ಚಿತ್ರ)

ಕೆ.ಶಿವು.ಲಕ್ಕಣ್ಣವರ

Leave a Reply

Your email address will not be published. Required fields are marked *