ಉನ್ನತ ಶಿಕ್ಷಣ ಪ್ರಮಾಣ ಶೇ 50 ಕ್ಕೆ ಏರಿಸುವ ಗುರಿ

ವಾಸವಿ ಜ್ಞಾನಪೀಠ ಗ್ರಾಜುಯೇಷನ್ ಡೇ: ಉನ್ನತ ಶಿಕ್ಷಣ ಪ್ರಮಾಣ ಶೇ 50 ಕ್ಕೆ ಏರಿಸುವ ಗುರಿ – ಬೆಂಗಳೂರು ವಿವಿ ರಿಜಿಸ್ಟ್ರಾರ್ ಡಾ. ಶ್ರೀನಿವಾಸ್

ಬೆಂಗಳೂರು, ಆ, 12; ದೇಶದಲ್ಲಿ ಯುವ ಸಮೂಹ ಶೇ 50 ರಷ್ಟಿದ್ದರೂ ಉನ್ನತ ಶಿಕ್ಷಣಕ್ಕೆ ಸೇರುವವರ ಸಂಖ್ಯೆ ಪ್ರಸ್ತುತ ಶೇ 28.7 ರಷ್ಟಿದೆ. ಈ ಪ್ರಮಾಣವನ್ನು ಬರುವ 2035 ರ ವೇಳೆಗೆ ಶೇ 40 ರಿಂದ 50ಕ್ಕೆ ಏರಿಸುವ ಗುರಿ ಹೊಂದಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಶ್ರೀನಿವಾಸ್ ಹೇಳಿದ್ದಾರೆ.

ವಾಸವಿ ಜ್ಞಾನಪೀಠ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ಅಂಗವಾಗಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಉನ್ನತ ಶಿಕ್ಷಣಕ್ಕೆ ಸೇರುವವರ ಸಂಖ್ಯೆಯನ್ನು ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಕಾಲೇಜು ನಂತರ ಮುಂದೇನು ಎನ್ನುವ ಪ್ರಶ್ನೆಗಳಿಗೆ ಹೊಸ ಶಿಕ್ಷಣ ನೀತಿ ಉತ್ತರ ನೀಡಲಿದೆ.

ದೇಶದ 1500 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿವಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದು, ರಾಜ್ಯ ಮತ್ತು ಸಾಂಪ್ರದಾಯಿಕ ವಿವಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಉನ್ನತ ಶಿಕ್ಷಣ ಲಭಿಸಬೇಕು, ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು. ವಾಸವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಆರ್.ವಿಜಯಸಾರಥಿ ಮಾತನಾಡಿ, ಶಿಕ್ಷಣದಲ್ಲಿ ಮಾನವೀಯತೆ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಸರ್ವಾಂಗೀಣ ಶಿಕ್ಷಣ ದೊರೆಕಿಸುವ ದ್ಯೇಯದೊಂದಿಗೆ ವಾಸವಿ ಶಿಕ್ಷಣ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. 40 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜು ಇಂದು 3000ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದರು. ಪ್ರಾಂಶುಪಾಲರಾದ ವಿ.ಪದ್ಮ, ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *