ಸೋಲಿನ ಹತಾಶೆ ಕಾಡುತ್ತಿರುವ ಬಿಜೆಪಿ ನಾಯಕರುಗಳಿಗೆ ಇನ್ನು ಬುದ್ದಿ ಬಂದಿಲ್ಲ

ಬೆಂಗಳೂರು, ಆ, 12; ಬರುವ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದ್ದು, ಇದನ್ನು ತಪ್ಪಿಸಲು ಮತ್ತು ಅವರನ್ನು ಹತ್ತಿಕ್ಕುವ ದುರುದ್ದೇಶದಿಂದ ಬಿಬಿಎಂಪಿ ಗುತ್ತಿಗೆದಾರರು ಅನಗತ್ಯವಾಗಿ ಕಾಮಗಾರಿ ಬಿಲ್ಲು ಪಾವತಿಗೆ ಶೇ 15 ರಷ್ಟು ಕಮಿಷನ್ ನಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಗುತ್ತಿಗೆದಾರ ಎಸ್. ಬಾಲರಾಜೇಗೌಡ ಆರೋಪಿಸಿದ್ದಾರೆ.

ಬಿಬಿಎಂಪಿ ಗುಣಮಟ್ಟ ಪ್ರಯೋಗಾಲಯದಲ್ಲಿನ ಅಗ್ನಿ ಅನಾಹುತಕ್ಕೆ ಬಿಜೆಪಿ ನಾಯಕರೇ ಕಾರಣವಾಗಿದ್ದು, ತನಿಖೆ ನಂತರ ಸತ್ಯ ಸಂಗತಿ ಬೆಳಕಿಗೆ ಬರಲಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಸಹಿಸದೇ ಕೆಲವರು ಷಡ್ಯಂತ್ರ ಮಾಡುತ್ತಿದ್ದು, ಸರ್ಕಾರ ಸೂಕ್ತ ಉತ್ತರ ನೀಡಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜನಪ್ರಿಯತೆಯನ್ನು ಸಹಿಸದೇ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಬಿಬಿಎಂಪಿಯಲ್ಲಿ ಉತ್ತಮ ಆಡಳಿತ ನೀಡಲು, ಬೆಂಗಳೂರು ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಖಚಿತ ಎಂದು ಮನಗಂಡಿರುವ ಬಿಜೆಪಿಯವರು ವಾಮಾಮಾರ್ಗ, ಷಡ್ಯಂತ್ರದ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳು ಪೂರ್ಣಗೊಂಡಿದೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಗುತ್ತಿಗೆದಾರರಿಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ ಎಸ್.ಬಾಲರಾಜೇಗೌಡ, ಕೆಲವು ಗುತ್ತಿಗೆದಾರರು ರಾಜಕೀಯ ಪಕ್ಷಗಳ ನಾಯಕರ ದಾಳಗಳಾಗಿ ಅವರ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಆಪಾದಿಸಿದರು.

ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆ ಪೋಲಾಗುವುದು ತಪ್ಪಿಸಲು ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮಿತಿ ರಚಿಸಿದ್ದು, ಎರಡು ತಿಂಗಳ ಒಳಗಾಗಿ ಗುತ್ತಿಗೆದಾರರಿಗೆ ಬಿಲ್ಲುಗಳು ಪಾವತಿಯಾಗಲಿದೆ. ಪ್ರಾಮಾಣಿಕ ಕೆಲಸ ಮಾಡಿರುವ ಗುತ್ತಿಗೆದಾರನಿಗೆ ಹಣ ಪಾವತಿಯಾಗಲಿದೆ. ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಕಳಪೆ ಕಾಮಗಾರಿ, ಕಳ್ಳಾಟದಲ್ಲಿ ತೊಡಗಿರುವ ಗುತ್ತಿಗೆದಾರರು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅಧಿಕಾರಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳಿಗೆ ಜನ ಬೆಂಬಲ ದೊರೆತಿದ್ದು, ಇದರಿಂದ ಬಿಜೆಪಿ ನಾಯಕರ ಜಂಘಾಬಲ ಉಡುಗಿಹೋಗಿದೆ. ಬಿಜೆಪಿ ಸರ್ಕಾರದಲ್ಲಿ ಶೇ 40 ರಷ್ಟು ಲಂಚದ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರಮೋದಿ ಅವರಿಗೆ ದೂರು ನೀಡಿದ್ದರು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಸರ್ಕಾರ ಕಠೋರ ಧೋರಣೆ ಅನುಸರಿಸಿರುವ ಸಂದರ್ಭದಲ್ಲಿ ಅಪ ಪ್ರಚಾರ ಮಾಡುವುದು ಸಲ್ಲದು ಎಂದು ಎಸ್. ಬಾಲರಾಜೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಹೆಚ್.ರಾಮಮೂರ್ತಿ, ನಾಗರಾಜ್, ವಾರ್ಡ್ ಅಧ್ಯಕ್ಷರಾದ ಶೈಲೇಶ್, ಮಂಜುನಾಥಗೌಡ, ಗಂಗಾಧರ್ ಭೀಮೆಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *