ರೈತರ ಅನುಕೂಲಕ್ಕಾಗಿ ಏಕೀಕೃತ ಸಹಾಯವಾಣಿ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ರೈತರು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಮಾರ್ಗದರ್ಶನ ಪಡೆಯಲು ಏಕೀಕೃತ ರೈತ ಸಹಾಯವಾಣಿ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕೃಷಿ ಇಲಾಖೆಯ ಕೃಷಿ ಆಯುಕ್ತಾಲಯದಲ್ಲಿ ರೈತ ಸಹಾಯವಾಣಿ ಕರೆ ಕೇಂದ್ರ ಉದ್ಘಾಟಿಸಿದ ಸಚಿವರು,  2023-24 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಹಾಗೂ ಭೀಮಾ ಪಲ್ಸ್ ತೊಗರಿ ಬೇಳೆ ಬ್ರ್ಯಾಂಡ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಚಿವರು, ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿ.ಎಂ.ಕಿಸಾನ್, ಕೆ.ಕಿಸಾನ್, ಬೆಳೆ ಸಮೀಕ್ಷೆ  ಮತ್ತಿತರ ವಿಷಯಗಳಲ್ಲಿ  ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪಡೆಯಲು ವಿವಿಧ ದೂರವಾಣಿ ಸಂಖ್ಯೆಗಳು ಇದ್ದು, ಇವುಗಳನ್ನು ರೈತರು ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿತ್ತು. ಆದ್ದರಿಂದ ರೈತರು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸುಲಭವಾಗಿ ಪಡೆಯುವ ದೃಷ್ಟಿಯನ್ನಿಟ್ಟುಕೊಂಡು  ಈ ಹಿಂದೆ  ವಿವಿಧ ಯೋಜನೆಗಳಿಗೆ ಇದ್ದ 8 ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಸಹಾಯವಾಣಿ ಕರೆ ಕೇಂದ್ರ ಸ್ಥಾಪಿಸಲಾಗಿದ್ದು, ನೂತನ ಸಹಾಯಣಿವಾಣಿ ಸಂಖ್ಯೆ 1800-425-3553 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಚಿವರು ಹೇಳಿದರು.

ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಇಲಾಖೆ ಮುಂದಾಗಿದೆ ಇದರ ಅಂಗವಾಗಿ ಭೀಮಾ ಫಲ್ಸ್ ಎಂಬ ಬ್ರ್ಯಾಂಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಭೌಗೋಳಿಕ ಸೂಚ್ಯಂಕ ಪಡೆದಿರುವ “ಭೀಮಾ ಫಲ್ಸ್” ಎಂಬ ಬ್ರ್ಯಾಂಡ್‍ನ ಗುಲ್ಬರ್ಗ ತೊಗರಿ ಬೆಳೆ ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದ್ದು, ಉತ್ಕøಷ್ಟ, ಒಳ್ಳೆಯ ಸುವಾಸನೆ ಮತ್ತು ರುಚಿಕರವಾಗಿರುತ್ತದೆ. ಈ ತೊಗರಿ ಬೇಳೆಯಲ್ಲಿ ಕ್ಯಾಲ್ಸಿಯಂ ಮತ್ತು ಪೋಟ್ಯಾಷಿಯಂ ಹೇರಳವಾಗಿರುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.  

ರೈತರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ. ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತವನ್ನು ಗಮದಲ್ಲಿಟ್ಟುಕೊಂಡು ಸಮೀಕ್ಷೆ  ನಡೆಸಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ 2017ಕ್ಕೂ ಮುಂಚಿತವಾಗಿ ಬೆಳೆ ವಿಸ್ತೀರ್ಣ ಅಂಕಿ ಅಂಶಗಳ ಅಂದಾಜು ಕಾರ್ಯವನ್ನು ಅಧಿಕಾರಿಗಳು ಭೌತಿಕವಾಗಿ ಮಾಡುತ್ತಿದ್ದರಿಂದ ಸಮಯಕ್ಕೆ ಸರಿಯಾಗಿ ಸರ್ವೆ / ಹಿಸ್ಸಾವಾರು ಬೆಳೆಯ ಮಾಹಿತಿಯ ದಾಖಲೆಯು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಇ-ಆಡಳಿತ ಇಲಾಖಾ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಜಿ.ಪಿ.ಎಸ್. ಆಧಾರಿತ ಮೊಬೈಲ್ ತಂತ್ರಂಶವನ್ನು ಬಳಸಿ ಸರ್ವೆ ನಂಬರ್ / ಹಿಸ್ಸಾವಾರು ಬೆಳೆಯ ಮಾಹಿತಿಯನ್ನು ದಾಖಲಿಸುವ ಕಾರ್ಯ ಚಾಲ್ತಿಯಲ್ಲಿರುತ್ತದೆ. ಬೆಳೆ ಸಮಿಕ್ಷೆ ಕುರಿತು ರೈತರು ನೂತನ ಸಹಾಯಣಿವಾಣಿ ಕೆರೆ ಸಂಖ್ಯೆ 1800-425-3553 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕಂದಾಯ, ಕೃಷಿ, ತೋಟಗಾರಿಕೆ, ರೇμÉ್ಮ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗುತ್ತಿವೆ ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡರೆ ಉತ್ತಮ ಎಂದು ಸಚಿವರು ಹೇಳಿದರು.

ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಮಾತನಾಡಿ, ಏಕೀಕೃತ ರೈತ ಕರೆ ಕೇಂದ್ರ ಪ್ರಾಂರಂಭ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ರೈತರಿಗೆ ಮಾಹಿತಿ ನೀಡುವ ಜೊತೆಗೆ ಸಮಸ್ಯೆಗಳನ್ನು ತಿಳಿಯಬಹುದಾಗಿದೆ. ಯಾವ ವಿಚಾರ ತಕ್ಷಣಕ್ಕೆ ಹೆಚ್ಚು ಪ್ರ್ರಾಮುಖ್ಯತೆ  ನೀಡಬೇಕು, ಗಮನ ಹರಿಸಬೇಕು  ಎಂದೂ  ಅಂದಾಜಿಸಲು ಅನುಕೂಲವಾಗಲಿದೆ ಎಂದರು.

ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಯೋಜನೆಗಳು ಹೆಚ್ಚು  ಪ್ರಗತಿಪರವಾಗಿವೆ ಎಂದು  ಅವರು ಅಭಿಪ್ರಾಯ ಪಟ್ಟರು.  ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರವೂ ಸಹ ಅತ್ಯಂತ ಮಹತ್ವವಾದದ್ದು, ರೈತರ ಹಿತ ಸಂರಕ್ಷಣೆಗೆ ಅನುಕೂಲಕರ ಹಾಗೂ ಇಲಾಖೆಗಳ ನಡುವಿನ ಸಮಮ್ವಯತೆಗೂ ಸಹಕಾರಿ ಎಂದು ಹೇಳಿದರು.

ರೈತರ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ ಮುಖ್ಯ ಆ ನಿಟ್ಟಿನಲ್ಲಿ ಈಗಾಗಗಲೇ ಇಲಾಖೆ ಕ್ರಮ ವಹಿಸುತ್ತಿರುವುದು ಅಭಿನಂದನಾರ್ಹ ಎಂದರು.

ಕೃಷಿ ಇಲಾಖೆ ಆಯುಕ್ತರಾದ  ವೈ.ಎಸ್. ಪಾಟೀಲ್ ಆಶಯ ನುಡಿಗಳನ್ನಾಡಿದರು. ತೋಟಗಾರಿಕೆ ಇಲಾಖೆ  ನಿರ್ದೇಶಕರಾದ ಡಿ.ಎಸ್. ರಮೇಶ್, ರೇμÉ್ಮ ಅಭಿವೃದ್ಧಿ ಆಯುಕ್ತರಾದ ರಾಜೇಶ್ ಗೌಡ ಎಂ.ಬಿ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೆಶಕರಾದ ಮಾಧುರಾಮ್, ಕೃಷಿ ಇಲಾಖೆ ನಿರ್ದೇಶಕರಾದ ಪುತ್ರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ  ಪ್ರಭಾಕರ್ ಮತ್ತಿತರರು  ಹಾಜರಿದ್ದರು

Leave a Reply

Your email address will not be published. Required fields are marked *