3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ಬೆಂಗಳೂರು, ಆಗಸ್ಟ್ 17 (ಕರ್ನಾಟಕ ವಾರ್ತೆ):ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಿವೇಶನದಲ್ಲಿ ನೂತನವಾಗಿ ನಿರ್ಮಿಸಲಾದ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಛೇರಿ ಕಟ್ಟಡವನ್ನು ಭಾರತೀಯ ಅಂಚೆ ಇಲಾಖೆ, ಕರ್ನಾಟಕ ವೃತ್ತದ ವತಿಯಿಂದ ಆಗಸ್ಟ್ 18 ರಂದು ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ಜಿಪಿಓ ಕಟ್ಟಡದ 5ನೇ ಮಹಡಿಯಲ್ಲಿರುವ ಮೇಗದೂತ ಸಭಾಂಗಣದಲ್ಲಿ ವರ್ಚುಯಲ್ ಮೂಲಕ ಕೇಂದ್ರ ರೈಲ್ವೇ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ  ಸಚಿವರಾದ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಲಿದ್ದಾರೆ.
ಈ 3ಡಿ ಮುದ್ರಿತ ಅಂಚೆ ಕಛೇರಿಯನ್ನು ಮೆ.ಲಾರ್ಸನ್ ಮತ್ತು ಟುಟ್ರೋ ಲಿಮಿಟೆಡ್ (ಎಲ್&ಟಿ) ಮೂಲಕ ನಿರ್ಮಿಸಲಾಗಿದೆ. ಐಐಟಿ, ಚೆನ್ನೈ ಪ್ರಸ್ತುತ ಯೋಜನೆಯಲ್ಲಿ ಅಂಚೆ ಇಲಾಖೆಗೆ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಿದೆ, 3ಡಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾದ ಈ ಕಟ್ಟಡದ ಒಟ್ಟು ವಿಸ್ತೀರ್ಣ 1021 ಚದರ ಅಡಿಗಳು, ಈ ಕಟ್ಟಡವನ್ನು ಅನುಮೋದಿತ ವಿನ್ಯಾಸದ ಪ್ರಕಾರ, 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾಗಿದೆ.


ಸದರಿ ಪ್ರಕ್ರಿಯೆಯು ಪೂರ್ಣ ಸ್ವಯಂ ಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು ಇದರಲ್ಲಿ ರೋಬೋಟಿಕ್ ಪ್ರಿಂಟರ್ ಮೂಲಕ ಕಾಂಕ್ರೀಟ್ ಪದರವನ್ನು ಹಂತ ಹಂತವಾಗಿ ನಿರ್ಮಿಸಲಾಗುತ್ತದೆ. ಮತ್ತು ತ್ವರಿತವಾಗಿ ಗಟ್ಟಿಯಾಗುವ ವಿಶೇಷ ದರ್ಜೆಯ ಕಾಂಕ್ರೀಟ್‍ನ್ನು ಪದರಗಳ ನಡುವೆ ಬಂಧವನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ. 45 ದಿನಗಳ ಅವಧಿಯಲ್ಲಿ ಕಟ್ಟಡದ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದ್ದು, ಸಾಂಪ್ರದಾಯಿಕ ವಿಧಾನ ನಿರ್ಮಾಣಕ್ಕೆ ಸುಮಾರು 6 ರಿಂದ 8 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಕಟ್ಟಡ ನಿರ್ಮಾಣ ವೆಚ್ಚ ಮತ್ತು ಸಮಯದ ಉಳಿತಾಯದಿಂದ 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನವನ್ನು ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ಪದ್ಧತಿಗಳಿಗೆ ಸಶಕ್ತ ಪರ್ಯಾಯವಾಗಿ ಪರಿಗಣಿಸಬಹುದಾಗಿದೆ.

Leave a Reply

Your email address will not be published. Required fields are marked *