ಅಕ್ರಮ – ಭ್ರಷ್ಟ ಹಣದ ಭವಿಷ್ಯ……

ಭ್ರಷ್ಟರ ವಿರುದ್ಧ ದಾಳಿ ಮಾಡಿ ವಶಪಡಿಸಿಕೊಂಡ ಹಣ ಆಸ್ತಿ ಒಡವೆಗಳು ಮತ್ತು ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಸಿಕ್ಕ ಅಕ್ರಮ ಹಣ ಮುಂದೆ ಏನಾಗುತ್ತದೆ ಎಂಬ ಕುತೂಹಲ ಬಹಳಷ್ಟು ಜನರಿಗೆ ಇದೆ. ಏಕೆಂದರೆ ದಾಳಿಯ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡುವ ಮಾಧ್ಯಮಗಳು ನಂತರ ಅದರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಶಿಕ್ಷೆ ಆದ ಬಗ್ಗೆ ತಿಳಿಯುವುದಿಲ್ಲ. ಆದ್ದರಿಂದ ಅದರ ಬಗ್ಗೆ ನನ್ನ ಅನುಭವದ ಅರಿವಿನ ಮಿತಿಯಲ್ಲಿ ಒಂದಷ್ಟು ಸರಳ ವಿವರಣೆ……..

ಲೋಕಾಯುಕ್ತ –
ಜಾರಿ ನಿರ್ದೇಶನಾಲಯ ( ಇಡಿ ), ಆದಾಯ ತೆರಿಗೆ ಇಲಾಖೆ ಮುಂತಾದ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆ, ದಾಳಿ, ನಂತರ ಅಥವಾ ಸಮನ್ಸ್ ನೀಡಿದ ಸಂದರ್ಭದಲ್ಲಿ ವ್ಯಕ್ತಿಗತವಾಗಿ ಹೇಗೆ ನಡೆಯುತ್ತದೆ ಎಂಬ ಕುತೂಹಲ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಮಾನ್ಯ ಜನರಿಗೆ ಇರುತ್ತದೆ…..

ಏಕೆಂದರೆ,
ಇತ್ತೀಚಿಗೆ ಮಾಧ್ಯಮಗಳು ದಾಳಿ ಎಂಬುದನ್ನು ಅದೊಂದು ಭಯಂಕರ ವಿದ್ಯಮಾನ ಎಂಬಂತೆ ಬಿಂಬಿಸುತ್ತಿವೆ. ಹಾಗಾದರೆ ವಾಸ್ತವವಾಗಿ ಆ ವಿಚಾರಣೆ ಹೇಗೆ ನಡೆಯುತ್ತದೆ ???????

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇದು ಕೇವಲ ಆರ್ಥಿಕ ಅಪರಾಧಗಳಾದ ತೆರಿಗೆ ವಂಚನೆ, ಭ್ರಷ್ಟಾಚಾರ, ಸುಳ್ಳು ಲೆಕ್ಕಪತ್ರಗಳು, ತಪ್ಪು ಮಾಹಿತಿಗಳು, ಹಣಕಾಸಿನ ಅಸಮರ್ಪಕ ನಿರ್ವಹಣೆ, ದಾಖಲೆಗಳನ್ನು ತಿದ್ದುವುದು, ಹವಾಲ ಹಣ ವರ್ಗಾವಣೆ, ಲೆಕ್ಕವಿಲ್ಲದ ನಗದು ಹಣ ಸಿಗುವುದು, ಬೇನಾಮಿ ಆಸ್ತಿ , ಅಧಿಕಾರದ ದುರುಪಯೋಗ, ಸ್ವ ಜನ ಪಕ್ಷಪಾತ, ಕಪ್ಪು ಹಣ ಮುಂತಾದ ವಿಷಯಗಳಿಗೆ ಮಾತ್ರ ಈ ಲೇಖನ ಅನ್ವಯಿಸುತ್ತದೆ.

ಇದನ್ನು ಹೊರತುಪಡಿಸಿ,
ಮಾರಣಾಂತಿಕ ಹಲ್ಲೆ, ಕೊಲೆ, ದರೋಡೆ, ಅತ್ಯಾಚಾರ, ದೇಶ ದ್ರೋಹ, ಖೋಟಾ ನೋಟು, ಭಯೋತ್ಪಾದನೆ ಮುಂತಾದ ಹುಟ್ಟಾ ಕ್ರಿಮಿನಲ್ ಅಪರಾಧಗಳು ಮತ್ತು ಪೋಲೀಸ್, ಸಿಓಡಿ, ಸಿಬಿಐ, ರಾ ಇತ್ಯಾದಿ ಇಲಾಖೆಗಳ ತನಿಖೆಯ ವ್ಯಾಪ್ತಿಗೆ ಈ ಲೇಖನ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ. ಏಕೆಂದರೆ ಅಲ್ಲಿ ನಡೆಯುವ ತನಿಖಾ ವಿಧಾನ ಅತ್ಯಂತ ಗೌಪ್ಯ, ಅನಿರೀಕ್ಷಿತ, ಹಿಂಸಾತ್ಮಕ, ಊಹಿಸಲಸಾಧ್ಯ ಮತ್ತು ಕೆಲವೊಮ್ಮೆ ಕಾನೂನಿನ ವ್ಯಾಪ್ತಿಯನ್ನು ಮೀರಿರುತ್ತದೆ……

ಆರ್ಥಿಕ ಅಪರಾಧಗಳ ವಿಚಾರಣೆಯಲ್ಲಿ ಎರಡು ರೀತಿಯ ನಡವಳಿಕೆಗಳನ್ನು ಗಮನಿಸಬಹುದು. ಸಾಮಾನ್ಯ ವರ್ಗದ ಜನರು ಮತ್ತು ವಿಐಪಿಗಳು.

ಈ ರೀತಿಯ ತಾರತಮ್ಯ ಕಾನೂನಿನಲ್ಲಿ ಇಲ್ಲ. ಅಲ್ಲಿ ಎಲ್ಲರೂ ಸಮಾನರು. ಆದರೆ ವ್ಯಾವಹಾರಿಕ ಜಗತ್ತಿನಲ್ಲಿ ಖಂಡಿತ ಅಸ್ತಿತ್ವದಲ್ಲಿದೆ.

ಸಾಮಾನ್ಯ ಜನರನ್ನು ಈ ರೀತಿಯ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಮಾಡುವಾಗ ಕಡಿಮೆ ಸೌಜನ್ಯ, ಹೆಚ್ಚು ದೌರ್ಜನ್ಯ, ಏಕವಚನ ಪದ ಪ್ರಯೋಗ, ದೊಡ್ಡ ಶಿಕ್ಷೆಯ ಬೆದರಿಕೆ, ಅವರ ಕನಿಷ್ಠ ಅವಶ್ಯಕತೆಗಳ ನಿರ್ಲಕ್ಷ್ಯ, ಸಮಯದ ಮಿತಿ ಇಲ್ಲದೆ ಇಷ್ಟ ಬಂದಂತೆ ನಡೆಸಿಕೊಳ್ಳುವುದು ಮುಂತಾದ ನಡವಳಿಕೆ ಕಂಡುಬರುತ್ತದೆ. ಅಲ್ಲದೆ ಕೆಳ ಹಂತದ ಅಧಿಕಾರಿ ವರ್ಗದವರು ಇವರನ್ನು ವಿಚಾರಣೆ ಮಾಡುತ್ತಾರೆ…..

ಆದರೆ ವಿಐಪಿಗಳ ವಿಚಾರಣೆಯ ಸಮಯದಲ್ಲಿ ಹೆಚ್ಚು ಜಾಗರೂಕತೆ ಕಂಡುಬರುತ್ತದೆ. ಸೌಜನ್ಯ, ಅವರ ಅವಶ್ಯಕತೆಗಳ ಪೂರೈಕೆ, ವಿಶ್ರಾಂತಿ, ಬಹುವಚನ, ಸಾಕಷ್ಟು ಕಾಲಾವಕಾಶ ನೀಡುವುದು ನಡೆಯುತ್ತದೆ. ಏಕೆಂದರೆ ಈ ವಿಐಪಿಗಳಿಗೆ ಪ್ರಖ್ಯಾತ ಆಡಿಟರ್ ಗಳು, ವಕೀಲರು, ರಾಜಕಾರಣಿಗಳು, ಹಣವಂತರ ಬೆಂಬಲ ಇರುತ್ತದೆ ಮತ್ತು ಮುಂದೆ ಅಧಿಕಾರದ ರಾಜಕೀಯ ಏನಾದರೂ ಬದಲಾವಣೆ ಆದರೆ ತಮಗೆ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕೆ ಅವರಿಗೆ ಇರುತ್ತದೆ.
ಇವರನ್ನು ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳೇ ವಿಚಾರಣೆ ಮಾಡುತ್ತಾರೆ…..

ಸಾಮಾನ್ಯವಾಗಿ ಈ ರೀತಿಯ ಪ್ರಕರಣಗಳಲ್ಲಿ ಇದಕ್ಕೆ ಸಂಬಂಧಿಸಿದ ಸಾಧ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿರುತ್ತದೆ. ಬ್ಯಾಂಕಿಂಗ್ ವಹಿವಾಟು, ಆಸ್ತಿಗಳ ವಿವರ, ನಗದು ಹಣ ಚಲಾವಣೆ, ಸ್ನೇಹಿತರು ಸಂಬಂಧಿಗಳ ವಹಿವಾಟು, ಲಾಕರುಗಳು, ಆದಾಯ ತೆರಿಗೆ ವಿವರಗಳು, ಆದಾಯದ ಮೂಲಗಳು, ಅವರಿಗಿರುವ ಲಿಂಕ್ ಗಳು ಮುಂತಾದವು ಸೇರಿರುತ್ತದೆ….

ಇಲ್ಲಿ ದಾಳಿಗೆ ಮೊದಲು ಅಥವಾ ದಾಳಿಯ ನಂತರ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ವಿಚಾರಣೆಗೆ ಕರೆಯಬಹುದು.

ದಾಳಿಯ ಸಮಯದಲ್ಲಿ ಸಿಗುವ ಎಲ್ಲಾ ಬೆಲೆ ಬಾಳುವ ವಸ್ತುಗಳನ್ನು ಸೀಜ್ ಮಾಡುವುದು ಸಾಮಾನ್ಯ ನಿಯಮ.
ಕೆಲವು ಸಂದರ್ಭಗಳಲ್ಲಿ ಆ ಕ್ಷಣದಲ್ಲೇ ಬಂಧಿಸುವ ಸಾಧ್ಯತೆಯು ಇರುತ್ತದೆ. ಕೆಲವೊಮ್ಮೆ ವಿಚಾರಣೆಗೆ ಕರೆಯಲಾಗುತ್ತದೆ.

ನಿಜವಾದ ವಿಚಾರಣೆ ಹೇಗಿರುತ್ತದೆ…..!!!!!!!

ವಿಚಾರಣೆಗೆ ಕರೆಸಿಕೊಂಡ ವ್ಯಕ್ತಿಯನ್ನು ಮೊದಲಿಗೆ ಅಲ್ಲಿನ ಕಾನೂನಿನ ನಿಯಮಗಳನ್ನು ಹೇಳಿ ಬಹುತೇಕ ಆತ ಅವರ ವಶದಲ್ಲಿ ಇರುವಂತೆ ಮಾಡಿ ಆರೋಪಿಯನ್ನು ಅಪರಾಧಿ ಎಂದೇ ಬಿಂಬಿಸಿ ಅವರನ್ನು ನೈತಿಕವಾಗಿ ಕುಗ್ಗಿಸಲಾಗುತ್ತದೆ. ಇದು ಆರೋಪಿಯಿಂದ ನಿಜ ಬಾಯಿ ಬಿಡಿಸಲು ತುಂಬಾ ಅವಶ್ಯಕ. ಪುಸ್ತಕದಲ್ಲಿ ಅಪರಾಧಗಳ ಕಾನೂನು ತುಂಬಾ ಭಯಂಕರವಾಗಿರುತ್ತದೆ……

ಯಾರು ಏನೇ ಹೇಳಿದರು ಈಗಿನ ಭಾರತದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಯಾರೂ ಶೇಕಡಾ 100% ಖಚಿತ ದಾಖಲೆಗಳನ್ನು ಹೊಂದಿ ಹಣಕಾಸಿನ ವ್ಯವಹಾರ ಮಾಡುವುದು ಸಾಧ್ಯವಿಲ್ಲ. ಅದೂ ಕೋಟಿಗಳ ಲೆಕ್ಕದಲ್ಲಿ ಹಣಕಾಸಿನ ವ್ಯವಹಾರ ನಡೆಯುವಾಗ ನಗದು ರೂಪವೇ ಇರಬಹುದು ಅಥವಾ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ಇರಬಹುದು ಕೆಲವೊಮ್ಮೆ ಅಧೀಕೃತ ಲೆಕ್ಕ ಅಥವಾ ಕಾನೂನಿನ ವ್ಯಾಪ್ತಿ ಮೀರಿರುತ್ತದೆ. ಕೊಡು ಕೊಳ್ಳುವಿಕೆಯ ಸಂದರ್ಭದಲ್ಲಿ ಮೇಲ್ನೋಟಕ್ಕೆ ಒಳ್ಳೆಯವರು ಮತ್ತು ಕ್ರಿಮಿನಲ್ ಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಇವತ್ತಿನ ಒಳ್ಳೆಯದು ನಾಳಿನ ಕೆಟ್ಟದ್ದು ಆಗಿರಬಹುದು……

ಅದರಲ್ಲೂ ರಾಜಕಾರಣಿಗಳು ಭ್ರಷ್ಟ ಅಧಿಕಾರಿಗಳು ವ್ಯಾಪಾರಸ್ಥರು ಹಣದ ಮೂಲದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವುದಿಲ್ಲ. ಬಂದ ಹಣವನ್ನು ಯಾರೂ ನಿರಾಕರಿಸುವುದಿಲ್ಲ. ತೀರಾ ಅಪರೂಪದ ಪ್ರಾಮಾಣಿಕರನ್ನು ಹೊರತುಪಡಿಸಿ. ಕಾರ್ಪೊರೇಟ್ ಸಂಸ್ಥೆಗಳು ಇದನ್ನು ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸುತ್ತದೆ. ಅಲ್ಲಿಯೂ ವಂಚನೆ ಇದೆ. ಆದರೆ ಅದು ಒಂದು ಮಿತಿಯಲ್ಲಿರುತ್ತದೆ……

ವಿಚಾರಣೆಗೆ ಬಂದ ವ್ಯಕ್ತಿಯ ಹುಟ್ಟಿನಿಂದ ಆತನ ತಂದೆ ತಾಯಿ ಮಕ್ಕಳು, ಊರು, ಬೆಳವಣಿಗೆ, ವಿದ್ಯಾಭ್ಯಾಸ, ಉದ್ಯೋಗ, ಮದುವೆ ಸ್ಥಿರಾಸ್ತಿ ಚರಾಸ್ತಿ ಎಲ್ಲವನ್ನೂ ಆತನ ಹೇಳಿಕೆಯಂತೆಯೇ ಸಂಪೂರ್ಣ ದಾಖಲು ಮಾಡಿಕೊಳ್ಳುತ್ತಾರೆ…..

ನಿಜವಾದ ವಿಚಾರಣೆ ಪ್ರಾರಂಭವಾಗುವುದೇ ಇಲ್ಲಿಂದ……..!!!!!

3/5 ಜನ ಅಧಿಕಾರಿಗಳು ದಾಖಲೆ ಮತ್ತು ಆರೋಪಿಯ ಹೇಳಿಕೆ ಇಟ್ಟುಕೊಂಡು ಪ್ರಶ್ನಿಸಲು ಶುರು ಮಾಡುತ್ತಾರೆ.
ಉದಾಹರಣೆಗೆ……

ಆ 5 ಕೋಟಿ ಎಲ್ಲಿಂದ ಬಂದಿದೆ ?
ಈ ವ್ಯಕ್ತಿ ಯಾರು?
ಆ ನಗದು ಹೇಗೆ ಮನೆಯಲ್ಲಿದೆ ?
ಈ ವ್ಯಕ್ತಿಗಳ ಜೊತೆ ವ್ಯವಹಾರ ಏಕೆ ?
ಆ ಆಸ್ತಿ ಯಾರದು ?
ಈ ಷೇರು ಹೇಗೆ ಬಂತು ?
ನೀವು ಹೇಳಿದ್ದು 1 ಕೋಟಿ. ದಾಖಲೆ ಇರುವುದು 5 ಕೋಟಿ. ಈ ವ್ಯತ್ಯಾಸ ಏಕೆ ?…..

ಹೀಗೆ ಪ್ರಶ್ನೆಗಳ ಸರಮಾಲೆ, ಉಪ ಪ್ರಶ್ನೆಗಳು, ತಿರುವುಗಳು ನಿರಂತರವಾಗಿ ನೂರಾರು ಗಂಟೆಗಳು ನಡೆಯಬಹುದು. ಮಧ್ಯೆ ಮಧ್ಯೆ ‌ಕಾಫಿ, ಟೀ, ಊಟ, ವಿರಾಮ, ಹಾಸ್ಯದ ಮಾತುಕತೆ, ವೈಯಕ್ತಿಕ ವಿವರಣೆ, ಬೆದರಿಕೆ ಎಲ್ಲವೂ ಆಯಾ ಸಂದರ್ಭಕ್ಕೆ ತಕ್ಕಂತೆ ಇರುತ್ತದೆ…..

ಇಲ್ಲಿ ಆಡಿಟರ್ ಅಥವಾ ವಕೀಲರ ಸಹಾಯ ಇರುವುದಿಲ್ಲ. ಇದೇ ಅತ್ಯಂತ ಮಾನಸಿಕ ಹಿಂಸಾತ್ಮಕ ಸ್ಥಿತಿ. ವ್ಯವಹಾರ ಮಾಡುವುದು ಸುಲಭವಾಗಿರಬಹುದು. ಆದರೆ ಅದನ್ನು ಸಮರ್ಥಿಸಿಕೊಳ್ಳುವುದು ತುಂಬಾ ಕಷ್ಟ. ಸಾಮಾನ್ಯವಾಗಿ ಆರೋಪಿ ಲೆಕ್ಕದಲ್ಲಿ ಪರಿಣತಿ ಹೊಂದಿರುವುದಿಲ್ಲ. ಯಾವುದು ಸರಿ, ಯಾವುದು ತಪ್ಪು, ಏನು ಹೇಳಿದರೇ ಬಚಾವಾಗಬಹುದು, ಗೊತ್ತಿದೆ ಅಥವಾ ಗೊತ್ತಿಲ್ಲ ಎಂದು ಯಾವುದಕ್ಕೆ ಹೇಳುವುದು, ಮೌನವಾಗಿರುವುದು ಯಾವುದಕ್ಕೆ, ತಪ್ಪು ನೇರವಾಗಿ ಕಣ್ಣ ಮುಂದೆಯೇ ಇರುವಾಗ ಅಲ್ಲಗಳೆಯುವುದು ಹೇಗೆ, ಆಡಿಟರ್ ಮತ್ತು ವಕೀಲರ ಸಲಹೆಗಿಂತ ತನಿಖಾಧಿಕಾರಿಗಳು ಭಿನ್ನ ಪ್ರಶ್ನೆ ವಿರುದ್ಧ ದಿಕ್ಕಿನಲ್ಲಿ ಕೇಳಿದಾಗ ಆಗುವ ಗೊಂದಲ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ……

ಎಲ್ಲಕ್ಕಿಂತ ಮುಖ್ಯವಾಗಿ ಈ ಹಂತದ ತನಿಖೆಗೆ ಒಳಪಡುವ ವ್ಯಕ್ತಿ ಸಮಾಜದಲ್ಲಿ ಒಂದು ಸ್ಥಾನ, ಶ್ರೀಮಂತಿಕೆ, ಜನಪ್ರಿಯತೆ, ಅಧಿಕಾರ ಗಳಿಸಿರುತ್ತಾನೆ/ತ್ತಾಳೆ. ಅದಕ್ಕೆ ಹೊಡೆತ ಬೀಳುತ್ತದೆ ಮತ್ತು ಭವಿಷ್ಯದಲ್ಲಿ ಹಿಂದಿನ ವೈಭವ ಮರೆಯಾಗಬಹುದು, ತಾನು ಜೈಲಿಗೆ ಹೋಗಬಹುದು, ತನ್ನ ವಿರೋಧಿಗಳು ಮತ್ತು ಹಿತ ಶತ್ರುಗಳು ಇದನ್ನು ದುರುಪಯೋಗ ಪಡಿಸಿಕೊಳ್ಳಬಹುದು, ಕುಹುಕವಾಡಬಹುದು ಮುಂತಾದ ಮಾನವ ಸಹಜ ಭಾವನೆಗಳು ಒಮ್ಮೆಲೇ ಮೂಡಿ ಏಕಾಂತದಲ್ಲಿ ಮನಸ್ಸನ್ನು ಇರಿಯುತ್ತದೆ. ಕುಟುಂಬದ ಪ್ರೀತಿ ಪಾತ್ರರ ನೆನಪುಗಳು ಕಾಡುತ್ತದೆ. ಎಷ್ಟೇ ಗಟ್ಟಿ ಮನಸ್ಸಿನವರಾದರೂ, ಯಾರೇ ಸಮಾಧಾನ ಮಾಡಿದರು ಅದು ಆ ಕ್ಷಣದ ತಾತ್ಕಾಲಿಕ ಸ್ಥಿತಿ ಮಾತ್ರ…….

ಕ್ಷಮಿಸಿ, ಈ ರೀತಿಯಲ್ಲಿ ನೂರಕ್ಕೆ ನೂರು ಹೀಗೆ ನಡೆಯದಿರಬಹುದು. ಕೆಲವು ವಿಚಾರಣೆಗಳು ಇದಕ್ಕಿಂತ ಭಿನ್ನವಾಗಿರಬಹುದು. ಕೆಲವು ಫಟಿಂಗರು ವಿಚಾರಣೆಯನ್ನು ಎಂಜಾಯ್ ಮಾಡಬಹುದು. ಅದನ್ನು ದಾಳವಾಗಿ ಉಪಯೋಗಿಸಿಕೊಂಡು ಮೇಲೆ ಬರಬಹುದು. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ಮೇಲೆ ವಿವರಿಸಿದ ವಿಚಾರಣೆಯ ರೀತಿ ನೀತಿಗಳು ಬಹುತೇಕ ಇದೇ ಮಾದರಿಯಲ್ಲಿ ಇರುತ್ತದೆ.

ಇದು ಆರ್ಥಿಕ ಅಪರಾಧಗಳ ದಾಳಿಯ ಒಂದು ಮುಖ.
ಇದರ ಇನ್ನೊಂದು ಮುಖ………..

IPS – IRS – KPS ಮುಂತಾದ ಅಧಿಕಾರಿಗಳಿಂದ ಕೂಡಿದ ಅತಿಹೆಚ್ಚು ಸಂಬಳ ಪಡೆಯುವ ಮತ್ತು ಯಾರನ್ನಾದರೂ ವಿಚಾರಣೆಗೆ ಒಳಪಡಿಸುವ ಅಧಿಕಾರ ಹೊಂದಿರುವ ಸಂಸ್ಥೆಗಳಿವು….

ನನ್ನ ಪ್ರಶ್ನೆ ಏನೆಂದರೆ, ಈ ಮೇಲಿನ ದಾಳಿಗೊಳಗಾದ ವ್ಯಕ್ತಿಗಳು ಸಾರ್ವಜನಿಕ ಜೀವನದಲ್ಲಿ ಬಹಳ ವರ್ಷಗಳಿಂದಲೂ ಇದ್ದಾರೆ ಮತ್ತು PAN ನಂಬರ್ ಹೊಂದಿ ಸರ್ಕಾರಕ್ಕೆ ಪ್ರತಿವರ್ಷ ಅವರ ಅನುಕೂಲಕ್ಕೆ ತಕ್ಕಂತೆ income tax File ಮಾಡುತ್ತಾ ಇರುತ್ತಾರೆ ಮತ್ತು ಹಾಗೆ ಎಂದಿನಂತೆ ಅವರು ಭ್ರಷ್ಟಾರಾಗಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕೋಟಿಗಳ ಲೆಕ್ಕದಲ್ಲಿ ಹಣ ದೋಚುತ್ತಲೇ ಇರುತ್ತಾರೆ. ಇದು ಬಹಿರಂಗದ ಸತ್ಯ ಮತ್ತು ಸಾಮಾನ್ಯರೆಲ್ಲರಿಗೂ ತಿಳಿದಿರುವ ವಿಷಯ….

ಇವರೆಲ್ಲರೂ ಇಷ್ಟೊಂದು ಸಂಪತ್ತನ್ನು ಒಂದು ದಿನದಲ್ಲಿ, ಒಂದು ತಿಂಗಳಲ್ಲಿ, ಒಂದು ವರ್ಷದಲ್ಲಿ ಸಂಗ್ರಹಿಸಿರುವುದಿಲ್ಲ. ಕನಿಷ್ಠ 8/10 ವರ್ಷಗಳಿಂದ ಕೋಟಿ ಕೋಟಿಗಳನ್ನು ಬಾಚುತ್ತಾ ಇರುತ್ತಾರೆ. ಇವರೆಲ್ಲಾ ಪ್ರಖ್ಯಾತರೂ ಕುಖ್ಯಾತರೂ ಆಗಿರುವುದರಿಂದ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಇವರ ಬಂಡವಾಳ ತಿಳಿಯದ್ದೇನು ಅಲ್ಲ….

ಹಾಗಾದರೆ ಸಂವಿಧಾನಾತ್ಮಕವಾಗಿ ಅಧಿಕಾರ ಸ್ವೀಕರಿಸಿ ಸಾರ್ವಜನಿಕ ಹಣದಲ್ಲಿ ಸಂಬಳ ಪಡೆದು ಜನರ ಋಣದಲ್ಲಿರುವ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ?….

ಬೃಹತ್ ಭ್ರಷ್ಠತೆಯ ಕೋಟೆ ಕಟ್ಟಲು ಅವಕಾಶ ನೀಡಿ ಆಮೇಲೆ ಕೋಟೆಯ ಮೇಲೆ ದಾಳಿ ಮಾಡಿದರೆ ಏನು ಪ್ರಯೋಜನ. ಪ್ರಾರಂಭದಲ್ಲಿ ಕೆಲವೇ ಕೋಟಿಗಳು ಅಕ್ರಮವಾಗಿ ಸಂಗ್ರಹಿಸುವಾಗ ಆಧಿಕಾರಿಗಳು ಇದನ್ನು ತಡೆದಿದ್ದರೆ ಎಷ್ಟೊಂದು ಬೃಹತ್ ಅವ್ಯವಹಾರ ತಡೆದು ದೇಶಕ್ಕೆ ಅಪಾರ ಹಣ ತೆರಿಗೆ ರೂಪದಲ್ಲಿ ಸಂಗ್ರಹಿಸಬಹುದಿತ್ತಲ್ಲವೇ ? ಉದಾಹರಣೆಗೆ 100 ಕೊಲೆ ಅಥವಾ ದರೋಡೆಯ ನಂತರ ಅಪರಾಧಿಯನ್ನು ಹಿಡಿಯುವುದಕ್ಕಿಂತ ಒಂದೆರಡು ಕೊಲೆಗಳು ಅಥವಾ ದರೋಡೆಯಿಂದ ಎಚ್ಚೆತ್ತುಕೊಂಡು ಶ್ರಮ ವಹಿಸಿದರೆ ಉಳಿದ 90 ಕ್ಕೂ ಹೆಚ್ಚು ಅಪರಾಧಗಳನ್ನು ತಡೆಯುವ ಸಾಧ್ಯತೆ ಇರುತ್ತದೆಯಲ್ಲವೇ ?…..

ರೋಗ ಬಂದ ನಂತರ ವಾಸಿ ಮಾಡುವುದಕ್ಕಿಂತ ಅದನ್ನು ಬರದಂತೆ ತಡೆಯುವುದೇ ಉತ್ತಮ ಮಾರ್ಗವಲ್ಲವೇ‌.
ಬಸ್ಸು ರೈಲಿನಲ್ಲಿ ಟಿಕೆಟ್ ಪಡೆಯದವರನ್ನು – ರಸ್ತೆಗಳಲ್ಲಿ ಟ್ರಾಫಿಕ್ ನಿಯಮ ಮೀರುವವರನ್ನು ಸ್ಥಳದಲ್ಲಿಯೇ ದಂಡ ವಸೂಲಿ ಅಥವಾ ಜೈಲಿಗೆ ಕಳಿಸುವ ವ್ಯವಸ್ಥೆ ಇದೆಯಲ್ಲವೇ. ಇದು ಒಳ್ಳೆಯದೇ.
ಆದರೆ ಸಾಮಾನ್ಯರಿಗೊಂದು ಪರೋಕ್ಷ ಕಳ್ಳರಿಗೊಂದು ನ್ಯಾಯವೇ.?….

ಇಲ್ಲಿ ನಾವು ಯಾರ ಪರವೂ ಅಲ್ಲ. ನಮ್ಮ ವ್ಯವಸ್ಥೆ ಕೆಲಸ ಮಾಡುತ್ತಿರುವ ರೀತಿಯ ವಿಶ್ಲೇಷಣೆ ಅಷ್ಟೆ. ಇದರ ಚರ್ಚೆಗೆ ಇನ್ನಷ್ಟು ಆಯಾಮಗಳಿವೆ.
ಆದರೂ ಮೇಲ್ನೋಟಕ್ಕೆ ಭ್ರಷ್ಟರು ರಾಜಕಾರಣಿಗಳು ಅಧಿಕಾರಿಗಳು ಮತ್ತು ನ್ಯಾಯಾಲಯದ ದೀರ್ಘಕಾಲ ಎಳೆಯುವ ಹುಳುಕುಗಳು ಒಟ್ಟಿಗೇ ಸೇರಿಕೊಂಡಂತೆ ಭಾಸವಾಗುತ್ತಿದೆ….

ಕಪ್ಪುಹಣ ಮತ್ತು ಭ್ರಷ್ಟ ಹಣ ಎಂದು ಭಾವಿಸಲಾದ ಲೆಕ್ಕಕ್ಕೇ ಸಿಗದ ಹಣದ ಮೇಲೆ ದಾಳಿಮಾಡಿದಾಗ ಸಿಗುವ ಹಣ ಒಡವೆ ಆಸ್ತಿಗಳ ಗತಿ ಏನಾಗುತ್ತದೆ, ಸರ್ಕಾರಕ್ಕೆ ನೇರ ಸೇರುತ್ತದೆಯೇ, ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೇ ಎಂಬ ಅನುಮಾನ ಬಹುತೇಕ ಜನಸಾಮಾನ್ಯರಿಗೆ ಇದೆ………

ಕಾನೂನು ಏನು ಹೇಳುತ್ತದೆಯೋ ಅದು ಬೇರೆ. ಆದರೆ ವಾಸ್ತವದಲ್ಲಿ ಶೇಕಡ 80% ಆಗಬಹುದಾದ ವಾಸ್ತವ ರೀತಿನೀತಿಗಳು ಹೀಗೇ ಇರುತ್ತದೆ.

ಉದಾಹರಣೆಗೆ, ಒಬ್ಬರ ಮೇಲೆ ದಾಳಿ ಮಾಡಿದಾಗ 20 ಕೋಟಿ ಹಣ,10 ಕೆ ಜಿ ಚಿನ್ನ, 30 KG ಬೆಳ್ಳಿ, ಒಂದಷ್ಟು ಜಮೀನಿನ ದಾಖಲೆ ಪತ್ರಗಳು ಸಿಗುತ್ತವೆ ಎಂದಿಟ್ಟುಕೊಳ್ಳಿ. ಆಗ ಅಧಿಕಾರಿಗಳು ಅದನ್ನು ಸಂಪೂರ್ಣ ವಶಪಡಿಸಿಕೊಳ್ಳುತ್ತಾರೆ. ಆ ಸನ್ನಿವೇಶದಲ್ಲಿ ವ್ಯಕ್ತಿಯ ಬಂಧನ ಆಗಬಹುದು ಅಥವಾ ಆಗದೆಯೂ ಇರಬಹುದು. ಸ್ವಲ್ಪ ದಿನಗಳ ನಂತರ ಅವರಿಗೆ ನಿಮ್ಮ ಬಳಿ ಇದ್ದ ಅಷ್ಟೂ ವಸ್ತುಗಳಿಗೆ ವಿವರಣೆ ಸಹಿತ ದಾಖಲೆ ಒದಗಿಸಿ ಎಂದು ನೋಟೀಸ್ ಕೊಡುತ್ತಾರೆ…….

ಆಗ ಆತ ಮಾಡುವ ಮೊದಲ ಕೆಲಸ ಒಬ್ಬ ಒಳ್ಳೆಯ CA ( Chartered accountant – Auditor ) ಗೆ ಈ ನೋಟಿಸ್ ಪ್ರತಿ ಕೊಟ್ಡು ದಯವಿಟ್ಡು ಈ ಸಂಕಷ್ಟದಿಂದ ಹೇಗಾದರೂ ಪಾರು ಮಾಡಿ.ನಿಮಗೆ ದೊಡ್ಡ ಮೊತ್ತದ Fees ಕೊಡುತ್ತೇನೆ ಎಂದು ದಂಬಾಲು ಬೀಳುತ್ತಾನೆ. ಆಗ CA ತಕ್ಷಣಕ್ಕೆ ನೋಟಿಸ್ ಕೂಲಂಕುಶವಾಗಿ ಪರಶೀಲಿಸಿ ಅಸ್ಪಷ್ಟ – ಗೊಂದಲದ – ಚಾಣಾಕ್ಷ ಉತ್ತರ ನೀಡಿ ದಾಖಲೆ ಒದಗಿಸಲು ಸಮಯಾವಕಾಶ ಪಡೆಯುತ್ತಾರೆ. ಆ ನೋಟಿಸಿನಲ್ಲಿ 100/150 ಇತರ ಪ್ರಶ್ನೆಗಳೂ ಇರುತ್ತವೆ.

ಒಂದು ವೇಳೆ ಇತರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಬಂಧನವಾಗಿದ್ದರೆ ಒಬ್ಬ ಪ್ರಖ್ಯಾತ ಕ್ರಿಮಿನಲ್ ವಕೀಲರನ್ನು ನೇಮಿಸಿಕೊಂಡು ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಾರೆ.

ಇಲ್ಲಿಂದ ಆ ಭ್ರಷ್ಟನ ನಿಜವಾದ ದಂಡಯಾತ್ರೆ ಪ್ರಾರಂಭವಾಗುತ್ತದೆ. INCOME TAX DEPARTMENT ಅಥವಾ ತನಿಖಾ ತಂಡದಲ್ಲಿ ಇರಬಹುದಾದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾರು ಯಾರು, ಅವರ ಹೆಸರು – ಹುದ್ದೆ – ಪೋನ್ ನಂಬರ್ ಮತ್ತು ಯಾರಿಗೆ ಯಾರಿಂದ ಹೇಳಿಸಬೇಕು ಎಂಬ ಮಾಹಿತಿ ಲೆಕ್ಕಪರಿಶೋಧಕರಿಂದ ಪಡೆಯುತ್ತಾನೆ. ನಂತರ ಅವರನ್ನು ಸಂಪರ್ಕಿಸುವ Link ಗಳಿಗಾಗಿ ಬೇಟೆ ಪ್ರಾರಂಭವಾಗುತ್ತದೆ…..

ಅಧಿಕಾರಿ ನಮ್ಮ ಪರಿಚಿತರ ಸಂಬಂಧಿಯೇ, ನಮ್ಮ ಜಾತಿಯವನೇ, ನಮ್ಮ ಧರ್ಮದವನೇ, ನಮ್ಮ ಭಾಷೆಯವನೇ, ನಮ್ಮ ಊರಿನ ಕಡೆಯವನೇ ಅಥವಾ ಇನ್ಯಾರಾದರು ರಾಜಕಾರಣಿಗಳ ಜೊತೆ ಸಂಪರ್ಕದಲ್ಲಿ ಇದ್ದಾನೆಯೇ ಇತ್ಯಾದಿ ಇತ್ಯಾದಿ ಕುಲಗೋತ್ರಗಳನ್ನು ಜಾಲಾಡುತ್ತಾನೆ…….

ಈ ಮಧ್ಯೆ ನೋಟಿಸ್ ನೀಡಿರುವ ಮತ್ತು ಆತನ ಮೇಲಾಧಿಕಾರಿ ಕಡು ಭ್ರಷ್ಟನೋ – ಸ್ವಲ್ಪ ಭ್ರಷ್ಟನೋ ಅಥವಾ ಸ್ಟಿಕ್ಟ್ ಆಗಿರುವ ಪ್ರಾಮಾಣಿಕನೋ, ಹೊಸ ಅಧಿಕಾರಿಯೋ ಅಥವಾ ಹಳಬನೋ ಎಂದೂ CA ಮುಖಾಂತರ ಪತ್ತೆ ಹಚ್ಚಲಾಗುತ್ತದೆ…….

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಅಧಿಕಾರಿಯೇ ಏನಾದರೂ ಒಂದು ಉಪಾಯ ಸೂಚಿಸಿ ಸಣ್ಣ ಪ್ರಮಾಣದ ದಂಡ ಹಾಕಿ ಒಂದಷ್ಟು ಲಂಚದ ಹಣ ಪಡೆದು ಕೇಸ್ ಮುಗಿಸುವ ಸಾಧ್ಯತೆ ಇದೆಯೇ ಎಂದೂ ಪ್ರಯತ್ನಿಸಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕಾಲ ಕೇಸನ್ನು ನಾನಾ ಕಾರಣಗಳಿಂದ ಮುಂದೂಡಲು ಸತತವಾಗಿ ಪ್ರಯತ್ನಿಸಲಾಗುತ್ತದೆ……..

ಸಾಮಾನ್ಯವಾಗಿ ಈ ಹಂತದಲ್ಲೇ ಬಹಳಷ್ಟು ಕೇಸುಗಳು Settle ಆಗುತ್ತವೆ. ಸ್ವಲ್ಪ ಹೆಚ್ಚು COMPLICATED ಇದ್ದಲ್ಲಿ ಎರಡು ಮೂರನೆಯ ಹಂತ ಮತ್ತು ಕೊನೆಗೆ TRIBUNAL ವರೆಗೂ ಸಾಗುತ್ತದೆ. ಅಲ್ಲಿಂದ ಮತ್ತೆ ಸಂಬಂಧ ಪಟ್ಟ ಇಲಾಖೆಗೆ Refer ಆಗುತ್ತದೆ. ಈ ಹಂತದಲ್ಲಿ ಬಹುತೇಕ ಮುಗಿಯುತ್ತದೆ. ಅಲ್ಲೂ ತೊಂದರೆಯಾದರೆ ವಕೀಲರ ನೆರವಿನಿಂದ ಹೈಕೋರ್ಟು, ಸುಪ್ರೀ೦ಕೋರ್ಟ್ ವರೆಗೂ ಎಳೆದಾಡಲಾಗುತ್ತದೆ. ಅಷ್ಟೊತ್ತಿಗಾಗಲೇ 5/6/7 ವರ್ಷ ಕಳೆದಿರುತ್ತದೆ. ಅಲ್ಲಿ ಇವನಿಗೆ ಶಿಕ್ಷೆಯಾಗುವ ಸಾಧ್ಯತೆ ಬಹಳ ಕಡಿಮೆ. ಈವರೆಗೆ ಅಂತಹ ಹೆಚ್ಚಿನ ಉದಾಹರಣೆಗಳೇ ಇಲ್ಲ……

ನಿನ್ನೆಯ ಲೇಖನ ಓದಿದ ಗೆಳೆಯರು ನೀಡಿದ ಮಾಹಿತಿಯ ಪ್ರಕಾರ ಇಂತಹ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಆಗಿರುವ ನ್ಯಾಯಾಲಯದ ತೀರ್ಪಿನ ಶಿಕ್ಷೆಯ ಪ್ರಮಾಣ ಕೇವಲ ಶೇಕಡಾ 0.5% ರಷ್ಟು ಮಾತ್ರ…..

ಇದು GROUND REALITY. ಎಲ್ಲಾ ಘಟನೆಗಳು ಇದೇ ರೂಪದಲ್ಲಿ ಇರುತ್ತವೆ ಎಂದೇನೂ ಇಲ್ಲ. ಕೆಲವೊಂದು ವ್ಯತ್ಯಾಸಗಳು ಇರಬಹುದು. ಆದರೆ ಸಾರಾಂಶ ಮತ್ತು ಫಲಿತಾಂಶ ಹೀಗೆಯೇ ಇರುತ್ತದೆ…..

ದಾಳಿಯಾದ ತಕ್ಷಣ ಅವನ ಕಥೆ ಮುಗಿಯಿತು, ಆತ ಬಲೆಗೆ ಬಿದ್ದ ಆ ಹಣ ನಮಗೇ ಸೇರಿತು ಎಂದು ಸಾರ್ವಜನಿಕರು ಸಂಭ್ರಮಿಸದಿರಿ. ಈ ವ್ಯವಸ್ಥೆ ಅಷ್ಟು ಸುಲಭವಾಗಿಲ್ಲ. ಭ್ರಷ್ಟಗೊಂಡ ಮನಸುಗಳ ಮಧ್ಯೆ ಕಾನೂನು ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಭ್ರಷ್ಟಾಚಾರಿಗಳಿಗೆ ಈ ವ್ಯವಸ್ಥೆಯಲ್ಲಿ ರಾಜಕಾರಣಿಗಳು, ಕೋಟ್ಯಾಧಿಪತಿಯಾಗಳ ಲಿಂಕ್ ಗಳು, ಅವರ Contacts ಗಳು, ಖತರನಾಕ್ ಐಡಿಯಾಗಳು, ಕಬಂಧ ಬಾಹುಗಳು, ಪ್ರಖ್ಯಾತ CA/LAWYER ಗಳ ಚಾಣಾಕ್ಷ ನಡೆಗಳು, ಕಾನೂನಿನ Weakness ಗಳ ಬೃಹತ್ ಜಾಲವೇ ಇದೆ………

ಈ ವಾಸ್ತವ ನಿಮ್ಮ ಮುಂದಿಡುತ್ತಿದ್ದೇನೆ. ಇಡೀ ವ್ಯವಸ್ಥೆಯನ್ನು – ಜನಗಳ ಮನಸ್ಥಿತಿಯನ್ನು – ಅವರ ಭಾವನೆಗಳನ್ನು – ಚಿಂತನೆಗಳನ್ನು – ಸಮಾಜವನ್ನು ಒಟ್ಟಾರೆಯಾಗಿ ಎಲ್ಲಾ ಕಡೆಯಿಂದಲೂ ಪರಿವರ್ತಿಸುವ ಕೆಲಸವಾಗದೆ ಕೇವಲ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ. ಈಗ ಯೋಚಿಸುವ ಸರದಿ ನಮ್ಮದು. ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುವ ಹೊಣೆ ಎಲ್ಲರದು….

ವಿವೇಕಾನಂದ ಎಚ್.ಕೆ.
9844013068…..

Leave a Reply

Your email address will not be published. Required fields are marked *