ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟ ಎಂ.ಆರ್.ಶ್ರೀನಿವಾಸ ಮೂರ್ತಿ –ಡಾ.ಪದ್ಮಿನಿ ನಾಗರಾಜು ಬಣ್ಣನೆ
ಬೆಂಗಳೂರು: ಹೊಸ ಗನ್ನಡ ಸಾಹಿತ್ಯಕ್ಕೆ ಸೂಕ್ತ ವೇದಿಕೆ ರೂಪಿಸಿದ ಶ್ರೀ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೂ ಮಹತ್ವದ ಕೊಡುಗೆಯನ್ನು ನೀಡಿದರು, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಅವರು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿಯವರ 131ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಎಂ.ಆರ್.ಶ್ರೀಯವರು ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಅದರಲ್ಲಿಯೂ ವೀರಶೈವ ಸಾಹಿತ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿದ್ದರು.
ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ. ಆರ್. ಶ್ರೀ ಅವರದು ಬೆಲೆಯುಳ್ಳ ಕಾಣಿಕೆ. ‘ವಚನಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ..
’ರಂಗಣ್ಣನ ಕನಸಿನ ದಿನಗಳು’ ಎಂ.ಆರ್.ಶ್ರೀಯವರ ಮಹತ್ವದ ಕೃತಿ. ಇದನ್ನು ಕುವೆಂಪು ಅವರು ‘ಚಿತ್ರಕಾವ್ಯ’ ಎಂದು ಕರೆದಿದ್ದಾರೆ ಎಂದ ಡಾ.ಪದ್ಮಿನಿ ನಾಗರಾಜು ಅವರು ‘ನಾಗರೀಕ’ ‘ಧರ್ಮದುರಂತ’ ‘ಕಂಠೀರವ ವಿಜಯ’ ಅವರ ಪ್ರಮುಖ ನಾಟಕಗಳಾಗಿದ್ದು. ಸಾವಿತ್ರಿ ಮತ್ತು ಮಹಾತ್ಯಾಗ ಅವರ ಪ್ರಮುಖ ಕಾದಂಬರಿಗಳು. ‘ಮಹಾತ್ಯಾಗ’ ಚಲನಚಿತ್ರವೂ ಆಯಿತು ಎಂದು ಎಂ.ಆರ್.ಶ್ರೀಯವರ ಬರಹಗಳಲ್ಲಿ ಮಹಿಳಾ ಕಾಳಜಿಯನ್ನು ನೋಡಬಹುದು ಎಂದು ಹೇಳಿದ ಪದ್ಮಿನಿ ನಾಗರಾಜು ಅವರು ‘ನೀವು ನನಗೆ ಗಂಡನಲ್ಲ’ ಎಂಬ ಎಂ.ಆರ್.ಶ್ರೀಯವರ ಕವಿತೆಯನ್ನು ಭಾವಪೂರ್ಣವಾಗಿ ಓದಿ ನಮನಗಳನ್ನು ಸಲ್ಲಿಸಿದರು. ಎಂ.ಆರ್.ಶ್ರೀಯವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆಗಳನ್ನು ವಿವರಿಸಿದ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರಮೂರ್ತಿಯವರು ನಮ್ಮ ನಾಡಿನಲ್ಲಿಯೇ ಮೊಟ್ಟ ಮೊದಲು ಪುಸ್ತಕೋತ್ಸವವನ್ನು ಏರ್ಪಡಿಸಿದವರು ಎಂ.ಆರ್.ಶ್ರೀಯವರು. 1934ರಲ್ಲಿ ಅವರು ಈ ಉತ್ಸವವನ್ನು ಏರ್ಪಡಿಸಿದಾಗ 1901ರಿಂದ ಅಲ್ಲಿಯವರೆಗೆ ಪ್ರಕಟವಾದ ಎಲ್ಲಾ ಪುಸ್ತಕಗಳು ಪ್ರದರ್ಶಿತವಾಗಿದ್ದವು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಇಂಗ್ಲೀಷ್ ನಿಘಂಟಿಗೆ ಅಂತಿಮ ರೂಪವನ್ನು ನೀಡಿದವರು ಅವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಕರ್ನಾಟಕದಿಂದ ಹೊರಗೆ ಘಟಕಗಳನ್ನು ಸ್ಥಾಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ಹೈದರಬಾದಿನ ಘಟಕ ಅವರ ಕಾಲದಲ್ಲಿಯೇ ಆರಂಭವಾಯಿತು. ಮುಂಬೈ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರಕವಿ ಗೋವಿಂದ ಪೈಯವರು ಅಧ್ಯಕ್ಷರಾಗುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಗಮಕ ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದ ಅವರು ಪ್ರತಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಮಕ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು ಎಂದು ಅವರ ಕೊಡುಗೆಗಳನ್ನು ವಿವರಿಸಿದರು. ಕನ್ನಡದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಸೊಲ್ಲಾಪುರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡವನ್ನು ಕಟ್ಟುವ ಬಗ್ಗೆ ಮತ್ತು ಶಿಕ್ಷಣದ ಪ್ರತಿ ಹಂತದಲ್ಲಿಯೂ ಕನ್ನಡವನ್ನು ಅಳವಡಿಸುವ ಬಗ್ಗೆ ನೀಡಿದ ಸಲಹೆಗಳನ್ನು ವಿವರಿಸಿದರು.
ಪರಿಷತ್ತಿನ ಮೂಲಕ ಕರ್ನಾಟಕ ಏಕೀರಣಕ್ಕೆ ಎಂ.ಆರ್.ಶ್ರೀನಿವಾಸ ಮೂರ್ತಿಯವರು ಮಹತ್ವದ ಕೊಡುಗೆಯನ್ನು ನೀಡಿದ್ದರು. ಮೈಸೂರು ವಿಶ್ವವಿದ್ಯಾಲಯ ಇಂಟರ್ ಮೀಡಿಯಟ್ ನಂತರ ಕನ್ನಡವನ್ನು ಕೈ ಬಿಡುವ ನಿರ್ಧಾರ ತೆಗೆದುಕೊಂಡಾಗ ಎಂ.ಆರ್.ಶ್ರೀನಿವಾಸಮೂರ್ತಿಯವರು ಸಂಘಟಿಸಿದ ಉಗ್ರ ಹೋರಾಟವನ್ನು ನೆನಪಿಸಿಕೊಂಡ ಪ್ರೊ.ಎನ್.ಎಸ್.ಶ್ರೀಧರಮೂರ್ತಿ ಈಗ ಎಂ.ಆರ್.ಶ್ರೀಯವರ ಮಾದರಿ ಅಗತ್ಯವಾಗಿದೆ ಎಂದರು. ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿಯವರ 131ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನವನ್ನು ಸಲ್ಲಿಸಿದರು. ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿಗಳು ಎಂ.ಆರ್.ಶ್ರೀನಿವಾಸ ಮೂರ್ತಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಎಂ.ಆರ್.ಶ್ರೀನಿವಾಸ ಮೂರ್ತಿಯವರ 131ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನವನ್ನು ಸಲ್ಲಿಸಿದರು. ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀನಾಥ್ ಜೆ. ಮಾಧ್ಯಮ ಸಲಹೆಗಾರರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು