ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರ 97ನೇ ಜನ್ಮ ದಿನಾಚರಣೆ ಆಚರಣೆ
ಬೆಂಗಳೂರು : ಜನಪ್ರಿಯ ನಾಯಕರಾಗಿದ್ದ ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರ 97ನೇ ಜನ್ಮ ದಿನಾಚರಣೆ ಮತ್ತು ಜನತಾ ಪಕ್ಷದ ಪುನರ್ ಸಂಘಟನೆಯ ಕಾರ್ಯಕ್ರಮವನ್ನು ಪಕ್ಷದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇಂತಹ ಮಹಾನ್ ಚೇತನದ ಜನ್ಮ ದಿನಾಚರಣೆಯನ್ನು ಜನತಾ ಪಕ್ಷದ ರಾಜ್ಯ ಘಟಕದ ವತಿಯಿಂದ ಮಂಗಳವಾರ ಬೆಳಿಗ್ಗೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರಾದ ಕೆ. ಎಂ. ಪಾಲಾಕ್ಷರವರು ಅಧ್ಯಕ್ಷತೆಯಲ್ಲಿ ಗೌರವ ಸಲ್ಲಿಸಲಾಯಿತು. ಈ ವೇಳೆ ಅವರು ಮಾತನಾಡುತ್ತಾ, ಮೌಲ್ಯಾಧಾರಿತ ರಾಜಕಾರಣಕ್ಕೆ ಮತ್ತೊಂದು ಹೆಸರೇ ರಾಮಕೃಷ್ಣ ಹೆಗಡೆ, ಇಂದಿನ ಯಾವುದೇ ಪಕ್ಷಗಳ ಜನಪ್ರಿಯ ಕಾರ್ಯಕ್ರಮಗಳ ಹಿಂದೆ ರಾಮಕೃಷ್ಣ ಹೆಗಡೆಯವರ ಛಾಪು ಇರುವುದನ್ನು ಗಮನಿಸಬಹುದಾಗಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಅರ್ಥಸಚಿವರಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟವೆಂದರೆ ಅಸಲಿ ಜಾತ್ಯಾತೀತ ಪ್ರತಿಪಾದನೆಯಾಗಿತ್ತು.
ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ಕಡುಬಡವರಿಗೆ ರೂ.2/-ಕ್ಕೆ ಅಕ್ಕಿ, ಖಾದಿಗೆ ಪ್ರೋತ್ಸಾಹ ಪಡಿತರ ಚೀಟಿಯ ಮೂಲಕ ದಂಪತಿಗಳಿಗೆ ರೂ.25/-ರ ದರದಲ್ಲಿ ವಸ್ತ್ರ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕೊಟ್ಟವರು ಹೆಗಡೆ ಜಿ. ಯಾವುದೇ ಜಾತಿಗೆ ಸೀಮಿತವಾಗದೆ, ಸ್ವಜನಪಕ್ಷಪಾತವಿಲ್ಲದೆ ಆಡಳಿತ ನಡೆಸುವುದನ್ನು ಪ್ರತಿಪಾದಿಸಿ ತೋರಿಸಿದವರು, ಜನತಾಪಕ್ಷದ ಪ್ರಮುಖ ರಾಷ್ಟ್ರ ನಾಯಕರಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರ ಕೊಡುಗೆ ಅನನ್ಯ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಸದರಿ ಕಾರ್ಯಕ್ರಮದಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರೌಫ್, ರಾಜ್ಯ ಉಪಾಧ್ಯಕ್ಷರಾದ ಎಂ.ಆರ್.ಕೃಷ್ಣಪ್ಪ, ರಾಜ್ಯ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಕನ್ಯಾಕುಮಾರಿ ಬಿ. ಟಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎ.ಈಶ್ವರ್, ರಾಜ್ಯ ಕಾರ್ಯದರ್ಶಿ ಬಿ.ಎನ್.ಗೋಪಾಲಕೃಷ್ಣ, ಬೆಂಗಳೂರು ನಗರ ಅಧ್ಯಕ್ಷರಾದ ಎ.ರಾಜು, ಸಂತೋಷ ಕುಮಾರ್, ಕೆ. ಸುಬ್ರಮಣಿ ಮುಂತಾದ ಗಣ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.