ಸ್ಥಿರ ಕೇಂದ್ರ ಸರಕಾರದಿಂದ ದೇಶದ ಸರ್ವಾಂಗೀಣಅಭಿವೃದ್ಧಿ: ತೇಜಸ್ವಿ ಸೂರ್ಯ ವಿಶ್ಲೇಷಣೆ

ಬೆಂಗಳೂರು: ಬಿಜೆಪಿ ನೇತೃತ್ವದ ಸ್ಥಿರ ಕೇಂದ್ರ ಸರಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ‘ಲೋಕಸಭಾ ಕ್ಷೇತ್ರಗಳ ಮತದಾರರ ಚೇತನ ಮಹಾ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014 ಮತ್ತು 2019 ಚುನಾವಣೆಗಳು ದೇಶಕ್ಕೆ ಸ್ಥಿರ ಸರಕಾರವನ್ನು ನೀಡಿವೆ. 2009ರ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ 12 ಯುವ ಮತದಾರರು ಹೆಚ್ಚುವರಿಯಾಗಿ ಮತದಾನ ಮಾಡಿದ್ದರು. ಅವರು ಬಿಜೆಪಿ, ಮೋದಿಜಿ ಅವರಿಗೆ ಮಾಡಿದ ಆಶೀರ್ವಾದದಿಂದ 34 ವರ್ಷದ ಬಳಿಕ ಪ್ರಥಮವಾಗಿ ಈ ದೇಶದಲ್ಲಿ ಸ್ಥಿರ, ಸದೃಢ ಸರಕಾರ ದೇಶದಲ್ಲಿ ಬಂತು ಎಂದು ವಿಶ್ಲೇಷಿಸಿದರು.
ಸ್ಥಿರ, ಸದೃಢ ಸರಕಾರದ ಫಲವಾಗಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದ ಅವರು, ಮುಂದಿನ ಕೆಲವು ತಿಂಗಳಿನಲ್ಲಿ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಲಿದ್ದು, ಅದಕ್ಕೆ ಬಿಜೆಪಿ ಸಹಕಾರ ಕೊಡಲಿದೆ ಎಂದರು.
50 ಕೋಟಿ ಬಡಜನರ ಜನ್‍ಧನ್ ಬ್ಯಾಂಕ್ ಖಾತೆ ತೆರೆಯಲು ಮತದಾರರು ನೆರವಾಗಿದ್ದಾರೆ. 29 ಲಕ್ಷ ಡಿಬಿಟಿ ಹಣ ವರ್ಗಾವಣೆ ಆಗಿದೆ. 4.5 ಕೋಟಿ ಬಡಜನರಿಗೆ ಮನೆಗಳ ನಿರ್ಮಾಣವಾಗಿದೆ. ದೇಶದ ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಅಡಿಯಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿಸಲು ಮತದಾರರು ತಮ್ಮ ಮತದ ಮೂಲಕ ಅವಕಾಶ ಕೊಟ್ಟಿದ್ದಾರೆ. 23 ಕೋಟಿ ಬಡ ಕುಟುಂಬಗಳಿಗೆ ಆಯುಷ್ಮಾನ್ ವಿಮೆ ಲಭಿಸಿದೆ. 20 ಕೋಟಿ ಎಸ್‍ಸಿ, ಎಸ್‍ಟಿ, ಒಬಿಸಿ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ಲಭಿಸಿದೆ ಎಂದು ವಿವರಿಸಿದರು.
ಒಂದು ಮತದ ಫಲವಾಗಿ ಭಾರತ ಚಂದ್ರಯಾನ ಮಾಡಿ ದೇಶದ, ವಿಶ್ವದ ದಕ್ಷಿಣ ಧ್ರುವಕ್ಕೆ ತೆರಳಿದ ಮೊದಲ ದೇಶ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ದೇಶಕ್ಕೆ ಸಿಕ್ಕಿದೆ. 500 ವರ್ಷಗಳಿಂದ ಜನರು ಕಾಯುತ್ತಿದ್ದ ಶ್ರೀರಾಮಮಂದಿರದ ನಿರ್ಮಾಣ ಆಗಿದೆ. ಆರ್ಟಿಕಲ್ 370 ಕಿತ್ತು ಹಾಕುವ ಮತ್ತು ಭಾರತ ಸಂವಿಧಾನವನ್ನು ಜಮ್ಮುಕಾಶ್ಮೀರಕ್ಕೆ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಈ ಅಭಿವೃದ್ಧಿಗೆ ದೇಶದ ಮತದಾರರು ಕಾರಣ. ಸದೃಢ ಸರಕಾರ ನೀಡಿದ ಮತದಾರರನ್ನು ಅಭಿನಂದಿಸುವುದಾಗಿ ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಮತದಾನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಅಭಿಯಾನ ನಡೆಯಲಿದೆ. ಅಭಿಯಾನದ ಯಶಸ್ಸಿಗೆ ತಂಡ ರಚಿಸಿದ್ದು, ಪಿ.ರಾಜೀವ್, ಅರವಿಂದ ಬೆಲ್ಲದ, ವಿವೇಕ್ ರೆಡ್ಡಿ, ಲೋಕೇಶ್ ಹಾಗೂ ನಾನು ರಾಜ್ಯ ಸಂಚಾಲನಾ ಸಮಿತಿಯಲ್ಲಿ ಇದ್ದೇವೆ. ಇದೇ ರೀತಿಯ ತಂಡಗಳನ್ನು ಜಿಲ್ಲೆ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ರಚನೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‍ಕುಮಾರ್ ಸುರಾಣ, ಮಾಲೀಕಯ್ಯ ಗುತ್ತೇದಾರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *