ಭರವಸೆಯ ನೃತ್ಯಕಲಾವಿದೆ ಮಾಧುರ್ಯ ಸುರೇಂದ್ರ ರಂಗಪ್ರವೇಶ


‘ಮಾಧುರ್ಯ’- ಹೆಸರಿಗೆ ಅನ್ವರ್ಥಕ ಜೀವನಯಾನ ಕು. ಮಾಧುರ್ಯಳದು. ಕಲಾರಾಧನೆ, ವಿದ್ಯಾಭ್ಯಾಸ -ಸಾಧನೆಗಳ ಕನಸಿನ ಹಾದಿಯಲ್ಲಿ ಸಾಗುತ್ತಿರುವ ಮಾಧುರ್ಯ ಆತ್ಮವಿಶ್ವಾಸದ ಪ್ರತಿಮೂರ್ತಿ. ನೃತ್ಯ-ಸಂಗೀತ ಅವಳ ಬಾಲ್ಯದ ಒಲವು.

ಮಗಳ ಆಸೆ-ಪ್ರತಿಭೆಯನ್ನು ಪೋಷಿಸಿಕೊಂಡು ಬಂದವರು ಅವಳ ಹೆತ್ತವರಾದ ಶ್ರೀ ಸುರೇಂದ್ರ ಮತ್ತು ಗಾಯತ್ರೀದೇವಿ. ನಾಡಿನಾದ್ಯಂತ ಹಲವಾರು ವೇದಿಕೆಗಳಲ್ಲಿ ನರ್ತಿಸಿದ ಇವಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾದ ಕ್ಯಾಲಿಫೋರ್ನಿಯಾ ಸೇರಿದಾಗ ‘ನೃತ್ಯಲೀಲಾ ಡ್ಯಾನ್ಸ್ ಸ್ಕೂಲ್’ ನಾಟ್ಯಗುರು ವಿದುಷಿ. ಪಂಚಮಿ ಫಡ್ಕೆ ಅವರಲ್ಲಿ ನೃತ್ಯ ಕಲಿಕೆ ಮುಂದುವರಿಸಿ ವಿದೇಶದಲ್ಲಿ ಅನೇಕ ನೃತ್ಯಪ್ರದರ್ಶನಗಳನ್ನು ನೀಡಿದ್ದು ವಿಶೇಷ. ಇದೀಗ ಮಾಧುರ್ಯ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ಇದೇ ತಿಂಗಳ 10 ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂ ನಲ್ಲಿ ನೆರವೇರಿಸಿಕೊಳ್ಳಲಿದ್ದಾಳೆ. ಅವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಬೆಂಗಳೂರಿನಲ್ಲಿ ಜನಿಸಿದ ಮಾಧುರ್ಯ ತನ್ನ ಎಂಟರ ಎಳವೆಯಲ್ಲಿ, ಪ್ರಭಾತ್ ಕಲಾವಿದರು ಅವರೊಂದಿಗೆ ನೃತ್ಯಾಭ್ಯಾಸ ಆರಂಭಿಸಿದಳು. ಮಾಧುರ್ಯಳ ಮೊದಲಗುರು ಶಕುಂತಲಾ ಪ್ರಭಾತ್. ಇವಳ ಪ್ರಾಥಮಿಕ ವಿದ್ಯಾಭ್ಯಾಸ ಶ್ರೀ ಅರಬಿಂದೋ ಮೆಮೋರಿಯಲ್ ಶಾಲೆ ಹಾಗೂ ಪಿಯೂಸಿ ಜೈನ್ ಕಾಲೇಜಿನಲ್ಲಿ ಮತ್ತು ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ. ಬಾಲ್ಯದಿಂದಲೂ ಸಂಗೀತ ನೃತ್ಯಗಳೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಇವಳ ಪ್ರತಿಭೆಗೆ ಶಕ್ತಿಯುತ ಇಂಬಾದವರು ಅವಳ ಹೆತ್ತವರು. ಲಲಿತಕಲೆಗಳಲ್ಲಿ ಅಮಿತಾಸಕ್ತಿಯುಳ್ಳ ಇವಳು, ಬದ್ಧತೆಯಿಂದ ನೃತ್ಯಾಭ್ಯಾಸ ಮಾಡಿ ಹಲವಾರು ವೇದಿಕೆಗಳ ಮೇಲೆ ತನ್ನ ಪ್ರತಿಭಾ ಪ್ರದರ್ಶನಗೈದ ವೈಶಿಷ್ಟ್ಯ ಮಾಧುರ್ಯಳದು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬೆಳ್ಳೂರು ಸಹೋದರಿಯರು ಮತ್ತು ರಾಧಾ ತಾನ್ದವೆಶ್ವರ ಅವರಲ್ಲಿ ಕಲಿತು, ಕರ್ನಾಟಕ ಸರ್ಕಾರ ನಡೆಸುವ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಹಿರಿಮೆ.
ಚಿಕ್ಕಂದಿನಿಂದ ಓದಿನಲ್ಲೂ ಚುರುಕಾಗಿರುವ ಮಾಧುರ್ಯ, ಇಂಜಿನಿಯರಿಂಗ್ ಪದವೀಧರೆಯಾದನಂತರ, ಅಮೇರಿಕಾದ ದಕ್ಷಿಣ ಕ್ಯಾಲಿಫೋರ್ನಿಯದ ಉನ್ನತ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದಳು. ಪ್ರಸ್ತುತ ಯು.ಎಸ್.ಎ. ಬೋರ್ಡ್ ನ ಗ್ಲೋಬಲ್ ಸಂಸ್ಥೆಯಲ್ಲಿ ನೆಟ್ವರ್ಕ್ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆ ಇವಳದು.

Leave a Reply

Your email address will not be published. Required fields are marked *