ಲೀಲಾ ನಾಟ್ಯ ಕಲಾವೃಂದ’ ದ 47 ನೇ ವಾರ್ಷಿಕೋತ್ಸವದ ಸಂಭ್ರಮ
ಬೆಂಗಳೂರಿನಲ್ಲಿ ಕಳೆದ 47 ವರ್ಷಗಳಿಂದ ಶಾಸ್ತ್ರೀಯ ನೃತ್ಯಾಭಿವೃದ್ಧಿಗಾಗಿ ಬದ್ಧತೆಯಿಂದ ಶ್ರಮಿಸುತ್ತಿರುವ ನೃತ್ಯಸಂಸ್ಥೆ ‘ಲೀಲಾ ನಾಟ್ಯ ಕಲಾವೃಂದ’ದ ಹೆಸರನ್ನು ಕೇಳದವರು ವಿರಳ. ಇದರ ಸ್ಥಾಪಕ ನಿರ್ದೇಶಕಿ, ಹಿರಿಯ ನಾಟ್ಯಾಗುರುಗಳಾದ ಶ್ರೀಮತಿ ಲೀಲಾವತಿ ಉಪಾಧ್ಯಾಯ ಕಳೆದ ಆರು ದಶಕಗಳಿಂದ ನೃತ್ಯಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಸಾವಿರಾರು ಶಿಷ್ಯರಿಗೆ ನಾಟ್ಯ-ಸಂಗೀತ-ಸಂಸ್ಕೃತಿ ಶಿಕ್ಷಣವನ್ನು ನೀಡಿ, ಬೆಳೆಸುತ್ತ ಮುನ್ನಡೆಯುತ್ತಿರುವುದು, ಕಲಾಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವುದು ಈಕೆಯ ವೈಶಿಷ್ಟ್ಯ.ಇದಕ್ಕೆ ಅವರ ಪತಿ ಶ್ರೀ ನಾಗರಾಜ ಉಪಾಧ್ಯಾಯರ ಪ್ರೋತ್ಸಾಹ ಮತ್ತು ನೃತ್ಯಗುರುಗಳಾದ ಮಗ ಶ್ರೀ ಉದಯಕೃಷ್ಣ ಉಪಾಧ್ಯಾಯ ಹಾಗೂ ಸೊಸೆ ಅನುರಾಧ ಉಪಾಧ್ಯಾಯ ಮತ್ತು ಮೊಮ್ಮಗಳು ಧೃತಿ ಉಪಾಧ್ಯಾಯ ಅವರುಗಳ ಸಹಕಾರ-ಬೆಂಬಲ ಅಮಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಪ್ರತಿವರ್ಷ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ನೃತ್ಯಶಾಲೆ ಅನೇಕ ಬಗೆಯ ಪ್ರಯೋಗಾತ್ಮಕ ನೂತನ ಕಾರ್ಯಕ್ರಮ, ನೃತ್ಯರೂಪಕ ಪ್ರದರ್ಶನಗಳನ್ನು ಏರ್ಪಡಿಸುತ್ತಲೇ ಬಂದಿದೆ. ಅಲ್ಲದೆ, ವಾರ್ಷಿಕೋತ್ಸವವನ್ನು ನಿರಂತರ ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದು, ಅದರಂತೆ ಪ್ರಸ್ತುತ ಸಂಸ್ಥೆಯ 47 ನೇ ವಾರ್ಷಿಕೋತ್ಸವವನ್ನು ಇದೇ ತಿಂಗಳ 15 ಶುಕ್ರವಾರದಂದು ಸಂಜೆ 4.30 ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ‘ನಾಟ್ಯೋಲ್ಲಾಸ ಶ್ರಾವಣ ಸಂಭ್ರಮ’ ಮತ್ತು ‘ನವರಸ ರಾಮಾಯಣ’ ಎಂಬ ವಿಶಿಷ್ಟ ನೃತ್ಯರೂಪಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಂಜಿಸುವ ಈ ರಸಸಂಜೆಯ ನಾಟ್ಯೋಲ್ಲಾಸದ ಕಾರ್ಯಕ್ರಮಕ್ಕೆ ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.