ಕೇಂದ್ರದಲ್ಲಿ ಎನ್‍ಡಿಎಗೆ ಮತ್ತೆ ಅಧಿಕಾರ; ಮೋದಿಜಿಮತ್ತೊಮ್ಮೆ ಪ್ರಧಾನಿ: ಸಿ.ಟಿ.ರವಿ ವಿಶ್ವಾಸ

ಬೆಂಗಳೂರು: ನೀತಿ, ನೇತೃತ್ವಹೀನ, ನಿಯತ್ತಿನ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇರುವ ಐಎನ್‍ಡಿಐಎ, ಯಾವುದೇ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಇಳಿದರೂ ಕೂಡ ಬಿಜೆಪಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತೆ ಎನ್‍ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ಮಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಜನರು, ಸಂವಿಧಾನಕ್ಕೆ, ಇಡೀ ಭಾರತಕ್ಕೆ ನಮ್ಮ ನಿಯತ್ತು ಎಂದು ನಾವು ಸಾಬೀತುಪಡಿಸಿದ್ದೇವೆ. ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ ಐಎನ್‍ಡಿಐಎ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪಿಸಿದರು. ಅವರ ನೀತಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಚೀನಾದ ಜೊತೆಗಿನ ಕಾಂಗ್ರೆಸ್ ಒಡಂಬಡಿಕೆ ಹಲವು ಅನುಮಾನಗಳನ್ನು ಸೃಷ್ಟಿ ಮಾಡಿದೆ. ಪ್ರತಿ ಬಾರಿ ವಿದೇಶಕ್ಕೆ ಹೋಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾತನಾಡುವ ಕಾಂಗ್ರೆಸ್ಸಿನ ನೇತಾರ ರಾಹುಲ್ ಗಾಂಧಿಯವರ ನಿಯತ್ತು ಒಂದು ಪ್ರಶ್ನಾರ್ಥಕ ಚಿಹ್ನೆ ಹುಟ್ಟು ಹಾಕುವಂತಿದೆ ಎಂದು ತಿಳಿಸಿದರು.
ವಂಶಪಾರಂಪರ್ಯ ಆಡಳಿತವನ್ನು ಸಮರ್ಥಿಸುವ ಪಕ್ಷಗಳು ಐಎನ್‍ಡಿಐಎ ಹೆಸರಿನಲ್ಲಿ ಒಗ್ಗೂಡಿವೆ. ಭಯೋತ್ಪಾದಕರಲ್ಲೂ ಮತಬ್ಯಾಂಕ್ ನೋಡುವುದು ಅವರ ನೀತಿ. ಕೋಮುವಾದಿ ಶಕ್ತಿಗಳ ಜೊತೆ ರಾಜಕೀಯ ಹೊಂದಾಣಿಕೆ ಅವರ ನೀತಿ. ಭಾರತ ಮತ್ತು ಭಾರತೀಯ ಸಂಸ್ಕøತಿ ಬಗ್ಗೆ ಅವಹೇಳನ ಅವರ ನೀತಿ. ಸನಾತನ ಧರ್ಮದ ಬಗ್ಗೆ ಅವಹೇಳನ ಮಾತ್ರವಲ್ಲ; ಅದನ್ನು ಬೇರುಸಹಿತ ಕಿತ್ತುಹಾಕುತ್ತೇವೆ ಎಂಬುದು ಅವರ ನೀತಿ. ಭ್ರಷ್ಟಾಚಾರದಿಂದಲೇ ಕೂಡಿರುವುದು ಅವರ ನೀತಿ. ಐಎನ್‍ಡಿಐಎ ನೇತೃತ್ವ ಅದೊಂದು ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ಟೀಕಿಸಿದರು.
ನೇತಾ ಯಾರೆಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಇಲ್ಲ. ಬಹುಶಃ ಸಂಗೀತ ಕುರ್ಚಿ (ಮ್ಯೂಸಿಕಲ್ ಚೇರ್) ಮೂಲಕ ಅವರು ನೇತಾನನ್ನು ಆಯ್ಕೆ ಮಾಡುವ ಲಕ್ಷಣಗಳು ಕಾಣುತ್ತಿವೆ. ಸಮರ್ಥ ಮತ್ತು ಎಲ್ಲರೂ ಒಪ್ಪಬಹುದಾದ ನಾಯಕ ಅವರಿಗೆ ಇಲ್ಲದ ಕಾರಣ ಮ್ಯೂಸಿಕಲ್ ಚೇರ್ ಮೂಲಕ ಯಾರಿಗೆ ಕುರ್ಚಿ ಒಲಿಯುತ್ತೋ ಅವರನ್ನು ನೇತಾರರಾಗಿ ಮಾಡಿಕೊಳ್ಳುವ ದುಸ್ಥಿತಿ ಅವರದು. ನಿಯತ್ತಿನ ಪ್ರಶ್ನೆ ಬಂದಾಗ ಯಾರಿಗೆ ಅವರ ನಿಯತ್ತು ಎಂಬುದು ಅನುಮಾನ ಹುಟ್ಟಿಸುತ್ತದೆ ಎಂದರು.
ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ದೇಶಾದ್ಯಂತ ಸಿದ್ಧತೆಯಲ್ಲಿ ತೊಡಗಿದೆ. ಆರು ರಾಜ್ಯಗಳ ಸಾರ್ವತ್ರಿಕ ಚುನಾವಣೆಯು ನವೆಂಬರ್ ಮತ್ತು ಜನವರಿಯಲ್ಲಿ ಬರುವ ಹಿನ್ನೆಲೆಯಲ್ಲಿ ಅವುಗಳಲ್ಲಿ ಗೆಲುವು ಸಾಧಿಸಲು ಪಕ್ಷ ಈಗಾಗಲೇ ಆಯಾ ರಾಜ್ಯಗಳಲ್ಲಿ ಚುನಾವಣಾ ಪ್ರಭಾರಿಗಳನ್ನು ನೇಮಿಸಿ ಗೆಲುವಿಗೆ ಬೇಕಾದ ತಳಹಂತದ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ನೀತಿ, ನೇತೃತ್ವ ಮತ್ತು ಜನರಿಗೆ- ದೇಶಕ್ಕೆ ನಮಗಿರುವ ನಿಯತ್ತನ್ನು ಜನರ ಮುಂದಿಟ್ಟು ನಾವು ಚುನಾವಣೆಯಲ್ಲಿ ಮತ ಕೇಳುತ್ತೇವೆ. ಬಿಜೆಪಿ ದೇಶ ಮೊದಲು ಎಂಬ ನೀತಿ ಹೊಂದಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ನಮ್ಮ ನೀತಿ. ಬಡವರಿಗೆ ಬಲ ಕೊಡುವುದು, ದಲಿತರಿಗೆ ಶಕ್ತಿ ನೀಡುವುದು ನಮ್ಮ ನೀತಿ ಎಂದು ಅವರು ವಿವರಿಸಿದರು. ಅದಕ್ಕಾಗಿ ಕೇಂದ್ರದ ಸಂಪುಟದಲ್ಲಿ ಅತಿ ಹೆಚ್ಚು ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕೆ ಮಂತ್ರಿ ಸ್ಥಾನವನ್ನು ನಾವು ಕೊಟ್ಟಿದ್ದೇವೆ ಎಂದು ವಿವರಿಸಿದರು.
ನೇತೃತ್ವದ ವಿಚಾರದಲ್ಲಿ ಈಗಾಗಲೇ ಜಗತ್ತಿನ ಹಲವು ನಾಯಕರು ಸಾರ್ವಜನಿಕವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯದ ಪ್ರಧಾನಮಂತ್ರಿಯಂತೂ ಸಾರ್ವಜನಿಕ ಸಭೆಯಲ್ಲಿ ‘ಮೋದಿ ಈಸ್ ದಿ ಬಾಸ್’ ಎಂದು ಕರೆದು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಗ್ಲೋಬಲ್ ರೇಟಿಂಗ್ಸ್‍ನಲ್ಲಿ ಪ್ರತಿಶತ 76ರಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.
ಜಿ 20 ಅಧ್ಯಕ್ಷತೆ ವಹಿಸಿದ್ದ ಭಾರತವು ಜಗತ್ತಿನ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ನಾಯಕತ್ವವನ್ನು ಪ್ರಕಟಿಸುವ ಮೂಲಕ ಜಿ 20ಯನ್ನು ಒಂದು ವರ್ಷ ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಬಿಜೆಪಿಯ ನಾಯಕರಾಗಿ ಜಗತ್ತು ಮೆಚ್ಚಿದ ಮುಖಂಡ ನರೇಂದ್ರ ಮೋದಿ ಅವರು ಎಂಬ ಹೆಮ್ಮೆ ನಮಗಿದೆ ಎಂದು ಹೇಳಿದರು.
ನಿಯತ್ತು ಏನು ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. 1986ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಕೇಂದ್ರದಿಂದ 100 ರೂ ಕಳಿಸಿದರೆ ಅದು ಕಟ್ಟಕಡೆಯ ಮನುಷ್ಯನಿಗೆ ತಲುಪುವುದೇ 15 ರೂಪಾಯಿ ಎಂದಿದ್ದರು. ಅಂದರೆ ಶೇ 85ರಷ್ಟು ಮಧ್ಯಸ್ಥಿಕೆದಾರರಿಗೆ ಸೋರಿಕೆ ಆಗುತ್ತಿತ್ತು ಎಂದು ಅವರು ಒಪ್ಪಿಕೊಂಡಿದ್ದರು. ಅದನ್ನು ತಡೆಯುವ ಯಾವ ಪ್ರಯತ್ನವನ್ನೂ ಅವರ ಸರಕಾರ, ಪಕ್ಷ ಮಾಡಿರಲಿಲ್ಲ ಎಂದರು.
ನಮ್ಮ ಪ್ರಧಾನಮಂತ್ರಿಯವರು ಕೇಂದ್ರದಿಂದ ಕಳುಹಿಸುವ ಪ್ರತಿಯೊಂದು ಪೈಸೆಯೂ ಕಟ್ಟಕಡೆಯ ಮನುಷ್ಯನಿಗೆ ತಲುಪಬೇಕೆಂಬ ಹಿನ್ನೆಲೆಯಲ್ಲಿ ಡಿಬಿಟಿ (ನೇರ ಸೌಲಭ್ಯ ವರ್ಗಾವಣೆ) ಮೂಲಕ ಲಕ್ಷಾಂತರ ಕೋಟಿ ರೂಪಾಯಿಗಳನ್ನು ರೈತರ, ಬಡವರ, ಮಹಿಳೆಯರ ಖಾತೆಗೆ ತಲುಪಿಸುವ ಮುಖಾಂತರ ತನ್ನ ನಿಯತ್ತನ್ನು ಸಾಬೀತು ಪಡಿಸಿದ್ದಾರೆ. ಭಾರತದ ವಿದೇಶಾಂಗ ನೀತಿಯ ಮೂಲಕ ನಮಗೆ ದೇಶವೇ ಮೊದಲು ಎಂಬ ತತ್ವವನ್ನು ನಾವು ಸಾಬೀತು ಮಾಡಿದ್ದೇವೆ ಎಂದು ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಅವರು ನಾಡಿನ ಜನತೆಗೆ ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು. ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಎಂಎಲ್‍ಸಿ ಮೋನಪ್ಪ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರ ರವಿಶಂಕರ್ ಮಿಜಾರು ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *