ವಿವೇಕನಗರ ಪೊಲೀಸರ ಕಾರ್ಯಚರಣೆ: ಗಾಂಜಾ ಪೆಡ್ಲರ್ ಬಂಧನ, 12 ಲಕ್ಷ ರೂ ಮೌಲ್ಯದ ಗಾಂಜಾ ವಶ


ಬೆಂಗಳೂರು: ವಿವೇಕನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಆರೋಪಿತನೊಬ್ಬ ಬಾಡಿಗೆ ಆಟೋದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡಿಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ವಿವೇಕನಗರ ಪೊಲೀಸರು ದಾಳಿಮಾಡಿ, ಆರೋಪಿತನನ್ನು ದಸ್ತಗಿರಿಮಾಡಿ ಆತನ ವಶದಲ್ಲಿದ್ದ 20 ಕೆ.ಜಿ. 280 ಗ್ರಾಂ ತೂಕದ ಗಾಂಜಾ, ಗಾಂಜಾ ಮಾರಾಟದಿಂದ ಸಂಪಾದಿಸಿದ್ದ ನಗದು ಹಣ 1500 ರೂ ಹಾಗು ತಿಂಡಿ-ಊಟವನ್ನು ಪಾರ್ಸಲ್ ಮಾಡುವ 52 ಖಾಕಿ ಬಣ್ಣದ ಕವರ್‌ಗಳು, ಮತ್ತು ಎರಡು ನೀಲಿ ಬಣ್ಣದ ಟ್ರಾö್ಯಲಿ ಬ್ಯಾಗ್‌ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿತನ ವಿರುದ್ದ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿರುತ್ತದೆ.


ಸದರಿ ಆರೋಪಿಯನ್ನು ವಿಚಾರಣೆಮಾಡಲಾಗಿ ಆತನು ಕೋರಮಂಗಲದ ನಿವಾಸಿಯಾಗಿದ್ದು, ಬೆಂಗಳೂರಿನ ರೈಲ್ವೆ ನಿಲ್ದಾಣದ ಬಳಿ ಒರಿಸ್ಸಾ ಮೂಲದ ಮಧ್ಯವರ್ತಿಯ ಮೂಲಕ ಗಾಂಜಾವನ್ನು ಖರೀದಿಸಿ, ಪ್ಯಾಸೆಂಜರ್ ಆಟೋದಲ್ಲಿ ಸಾಗಾಣಿಕೆ ಮಾಡಿಕೊಂಡು ತಂದು ವಿವೇಕನಗರ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿರುತ್ತಾನೆ. ತನಿಖೆ ಮುಂದುವರೆದಿರುತ್ತದೆ.
ಬೆಂಗಳೂರು ನಗರ ಕೇಂದ್ರ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಶ್ರೀ ಶೇಖರ್ ಹೆಚ್.ಟಿ., ರವರ ಮಾರ್ಗದರ್ಶನದಲ್ಲಿ ಕಬ್ಬನ್‌ಪಾರ್ಕ್ ಉಪವಿಭಾಗದ, ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಬಾಲಕೃಷ್ಣ ರವರ ನೇತೃತ್ವದಲ್ಲಿ ವಿವೇಕನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಅನಿಲ್ ಕುಮಾರ ಜಿ.ಎಸ್, ಹಾಗೂ ಸಿಬ್ಬಂದಿಗಳು ಆರೋಪಿತನನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.

Leave a Reply

Your email address will not be published. Required fields are marked *